ರಾಡಿ ಸ್ನಾನವಾಯ್ತು, ಈಗ ಧೂಳಿನ ಸ್ನಾನ!
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 6
ಹದಿನೈದು ದಿನಗಳಿಂದ ಕೆಸರಿನ ಸ್ನಾನ ಮಾಡಿಸುತ್ತಿದ್ದ ಹುಬ್ಬಳ್ಳಿಯ ಪ್ರಮುಖ ರಸ್ತೆಗಳು ಇದೀಗ ಧೂಳಿನ ಸ್ನಾನ ಮಾಡಿಸುತ್ತಿವೆ. ಕೆಸರಿನಿಂದ ಬೇಸತ್ತಿದ್ದ ಜನತೆಗೆ ಇದೀಗ ನಿತ್ಯ ಕೆಸರಿನ ಸ್ನಾನದ ಜೊತೆಗೆ ಧೂಳಿನ ಸ್ನಾನವೂ ಅನಿವಾರ್ಯವಾಗಿಬಿಟ್ಟಿದೆ.
ಬೇಜವಾಬ್ದಾರಿ ಕೆಲಸದಿಂದ ಹದಿನೈದು ದಿನಗಳಿಂದ ರಾಡಿ ಸ್ನಾನ ಮಾಡಿಸಿದ್ದ ಮಹಾನಗರ ಪಾಲಿಕೆ ಇದೀಗ ಪರೋಕ್ಷವಾಗಿ ಧೂಳಿನ ಸ್ನಾನ ಕೂಡ ಮಾಡಿಸುತ್ತಿದೆ. ಕೋಟಿ ಲೆಕ್ಕದಲ್ಲಿ ಸರ್ಕಾರಿ ದುಡ್ಡು ಸುರಿದು ಡಸ್ಟ್ ಸ್ವೀಪರ್ (ಸಕ್ಕರ್) ಯಂತ್ರ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳನ್ನು ಖರೀದಿಸಿರುವ ಹು-ಧಾ ಮಹಾನಗರ ಪಾಲಿಕೆ, ಆ ಯಂತ್ರದ ವಾಹನ ಹಾಗೂ ಇತರ ಸಾಮಗ್ರಿಯನ್ನು ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದರ್ಶನಕ್ಕೆ ಮಾತ್ರ ಎನ್ನುವಂತೆ ನಿಲ್ಲಿಸಿದೆ.
ನಗರದಾದ್ಯಂತ ಬಿಡುವಿಲ್ಲದೆ ಕೈಗೆತ್ತಿಕೊಂಡ ಒಳಚರಂಡಿ ಕಾಮಗಾರಿ ಮತ್ತು ಅದೇ ಸಮಯದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ಗುಂಡಿಗಳಾಗಿ ಮಾರ್ಪಡಾಗುವ ಜೊತೆಗೆ ಧೂಳು ಕೂಡ ಉತ್ಪಾದಿಸುತ್ತಿವೆ. ಭರ್ರ್... ಎಂದು ಹೋಗುವ ಭಾರಿ ವಾಹನಗಳ ಹಿಂದಿನಿಂದ ಏಳುತ್ತಿರುವ ಧೂಳು ಹಿಂದೆ ಅಕ್ಕ ಪಕ್ಕ ಸಾಗುವ ಬೈಕ್ ಸವಾರರು, ಪಾದಚಾರಿಗಳ ಮುಖಕ್ಕೆ ರಾಚುತ್ತಿದ್ದು, ಕಣ್ಣು ಮೂಗಿನ ತುಂಬ ಧೂಳು ತುಂಬಿಕೊಳ್ಳುತ್ತಿದೆ.
ನಿಂತಿದೆ ಡಸ್ಟ್ ಸ್ವೀಪರ್: ರು. 56 ಲಕ್ಷಗಳ ವೆಚ್ಚದಲ್ಲಿ ಮಹಾನಗರ ಪಾಲಿಕೆ ಡಸ್ಟ್ ಸ್ವೀಪರ್ ವಾಹನವನ್ನು ಖರೀದಿಸಿದೆ. ಆರಂಭಿಕ ದಿನಗಳಲ್ಲಿ ಒಂದಿಷ್ಟು ರಸ್ತೆಗಳಲ್ಲಿನ ಕಸ, ಮಣ್ಣು ಗೂಡಿಸಿದ್ದ ಈ ವಾಹನ ಮಳೆಗಾಲ ಆರಂಭವಾಗುತ್ತಲೇ ತನ್ನ ಕೆಲಸ ನಿಲ್ಲಿಸಿದೆ. ಇದೀಗ ಮಳೆ ಬಿಡುವು ನೀಡುತ್ತಿರುವಂತೆಯೇ ಮತ್ತೆ ಈ ಯಂತ್ರಕ್ಕೆ ಕೆಲಸ ನೀಡಲಾಗುವುದು ಎಂದು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಗಿರೀಶ್ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.
ಆದರೆ, ರೈಲು ನಿಲ್ದಾಣದ ರಸ್ತೆ, ಸಿಬಿಟಿ ಬಳಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದಿರುವುದರಿಂದ ಅಲ್ಲಿ ಮಾತ್ರ ಈ ಸ್ವೀಪರ್ ಯಂತ್ರ ಕೆಲಸ ಮಾಡುವ ಸಾಧ್ಯತೆ ಕಡಿಮೆ. ಸಿಕ್ಕಾಪಟ್ಟೆ ಧೂಳು ಮತ್ತು ಕೆಸರಿನಿಂದಾಗಿ ಅಲ್ಲಿ ಸ್ವೀಪರ್ ವಾಹನ ಧೂಳು ಹೀರಿಕೊಳ್ಳುವಲ್ಲಿ ವಿಫಲವಾಗುವ ಸಾಧ್ಯತೆಗಳಿವೆ.
ಲ್ಯಾಮಿಂಗ್ಟನ್, ರಸ್ತೆ, ಕೆ.ಸಿ. ಸರ್ಕಲ್, ಬ್ರಾಡ್ವೇ ಸೇರಿದಂತೆ ಪ್ರಮುಖ ರಸ್ತೆಗಳು, ಭಾರಿ ವಾಹನ ಸಂಚರಿಸುವ ನಿಲಿಜನ್ ರಸ್ತೆ, ದೇಸಾಯಿ ಸರ್ಕಲ್ ಹೀಗೆ ಧೂಳುಮಯ ರಸ್ತೆಗಳ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಈ ರಸ್ತೆಗಳಲ್ಲಿ ಸ್ವೀಪರ್ ವಾಹನ ಧೂಳು ಹೀರಿಕೊಂಡು ಪ್ರಯಾಣಿಕರಿಗೆ, ನಾಗರಿಕರಿಗೆ ನೆಮ್ಮದಿ ತರಬಹುದು. ಆದರೆ, ಇರುವ ಒಂದೇ ಒಂದು ಸ್ವೀಪರ್ ಯಂತ್ರ ಎಲ್ಲಿಂದ ಕೆಲಸ ಶುರು ಮಾಡಬೇಕು, ಎಲ್ಲಿಗೆ ಮುಗಿಸಬೇಕೆಂಬ ಪ್ರಶ್ನೆಗಳು ಕಾಡತೊಡಗಿವೆ. ಮತ್ತೆ ಮಳೆ ಸುರಿದರೆ ಕೆಲಸ ಅರ್ಧಕ್ಕೆ ನಿಲ್ಲುವುದು ಖಚಿತ.
ಧೂಳು ಗುಡಿಸೋ ಕೆಲಸ: ಬಿವಿಬಿ ಕಾಲೇಜು ಸೇರಿದಂತೆ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಸೋಮವಾರದಿಂದ ಪೌರಕಾರ್ಮಿಕರನ್ನು ಧೂಳು ಗುಡಿಸುವ ಕೆಲಸಕ್ಕೆ ಮಹಾನಗರ ಪಾಲಿಕೆ ನಿಯೋಜಿಸಿದೆ. ಆದರೆ, ಇಲ್ಲಿ ಆಗುತ್ತಿರುವ ಕೆಲಸ ಅಷ್ಟಕ್ಕಷ್ಟೆ. ರಸ್ತೆ ಮೇಲಿನ ಮಣ್ಣನ್ನು ಪೂರ್ಣವಾಗಿ ರಸ್ತೆ ಬದಿ ತಳ್ಳಬೇಕು. ಗುಡ್ಡೆಯಾಗಿ ಬಿದ್ದಿರುವ ಮಣ್ಣನ್ನು ರಸ್ತೆಯಿಂದಾಚೆಗೆ ಹೊರ ಹಾಕಲು ಪೌರ ಕಾರ್ಮಿಕರಿಗಂತೂ ಸಾಧ್ಯವಿಲ್ಲದಂತಾಗಿದೆ. ಹೀಗಾಗಿ, ಪೌರ ಕಾರ್ಮಿಕರು ಕೂಡ ಮಣ್ಣನ್ನು ರಸ್ತೆಯಾಚೆ ತಳ್ಳುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿಲ್ಲ.
ಅತಿಯಾದ ಧೂಳಿನಿಂದಾಗಿ ಪ್ರಯಾಣಿಕರಿಗೆ ಅದರಲ್ಲೂ ಬೈಕ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಅಸ್ತಮಾ, ಧೂಳು ಅಲರ್ಜಿ, ಕಣ್ಣುರಿ ಮತ್ತು ಚರ್ಮವ್ಯಾಧಿ ಸೇರಿದಂತೆ ಇನ್ನಿತರ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಸಮುದಾಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ರಸ್ತೆ ಮೇಲಿನ ಮಣ್ಣು ತೆರವುಗೊಳಿಸುವ ಕೆಲಸವನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

