ಧಾರವಾಡ

ಪರ್ಯಾಯ ವ್ಯಾಜ್ಯ ಪರಿಹಾರ: ವಿಚಾರ ಸಂಕಿರಣ

Published On :

ಹುಬ್ಬಳ್ಳಿ: ಶೇ. 93ಕ್ಕಿಂತಲೂ ಹೆಚ್ಚು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲು ಹತ್ತದೇ ಅಲ್ಲಿಯೇ ಪರಿಹಾರವಾಗುತ್ತಿದ್ದು, ಇನ್ನುಳಿದ ಪ್ರಕರಣಗಳು ಕೋರ್ಟ್ ಮೆಟ್ಟಿಲು ಹತ್ತಿದರೂ ಬೇಗ ಪರಿಹಾರ ಕಾಣುವುದಿಲ್ಲ ಎಂದು ಧಾರವಾಡ ಹೈಕೋರ್ಟ್ ಸಂಚಾರಿ ಪೀಠದ ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದರು.
ಇಲ್ಲಿನ ರಾಜ್ಯ ಕಾನೂನು ವಿವಿಯಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ನ್ಯಾಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ವೆಚ್ಚವನ್ನು ಪರಿಗಣಿಸಿ ಬಹುತೇಕ ವ್ಯಾಜ್ಯಗಳು ನ್ಯಾಯಾಲಯದ ಹೊರಗೆ ಪರಸ್ಪರ ಸಂಧಾನ, ರಾಜಿ ಮುಖಾಂತರ ಪರಿಹಾರ ಕಂಡುಕೊಳ್ಳುತ್ತಿವೆ. ಭಾರತೀಯ ನ್ಯಾಯಾಂಗ ವ್ಯವಸ್ಥೆ ಜಗತ್ತಿನಲ್ಲಿಯೇ ಅತ್ಯುತ್ತಮವಾಗಿದ್ದರೂ ತೀರ್ಪು ನೀಡುವಲ್ಲಿ ಆಗುತ್ತಿರುವ ವಿಳಂಬ ಅಡೆತಡೆ ಹುಟ್ಟು ಹಾಕಿದೆ ಎಂದರು. ನ್ಯಾಯಾಂಗೀಯ ಪ್ರಕ್ರಿಯೆ ಅಗತ್ಯವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದ ಪ್ರಕರಣಗಳ ವಿಲೇವಾರಿಯಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಚಿಕ್ಕಪುಟ್ಟ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ದೇಶದಲ್ಲಿನ ನಿಧಾನ ವಿಳಂಬ ನ್ಯಾಯಾಂಗೀಯ ಪ್ರಕ್ರಿಯೆ ಹಿನ್ನೆಲೆಯಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆಗೆ ಪ್ರಾಮುಖ್ಯ ಬಂದಿದೆ. ರಾಷ್ಟ್ರೀಯ ಕಾನೂನು ಸೇವಾ ಕಾಯ್ದೆ 1987ರಡಿ ಲೋಕ ಅದಾಲತ್ ವ್ಯವಸ್ಥೆಯನ್ನು ಜಾರಿಗೆ ಬಂದಿದೆ ಎಂದರು.
ವ್ಯಾಜ್ಯ ಪರಿಹಾರದಲ್ಲಿ ಸಂಧಾನ ಅಂತಿಮ ಹಂತದ ಪ್ರಕ್ರಿಯೆಯಾಗಿದ್ದು, ಇದಕ್ಕೂ ಮೊದಲು ವಿವಾದವನ್ನು ವಿಚಾರಣೆ, ಸಲಹೆ ಮತ್ತು ಲೋಕ್ ಅದಾಲತ್ ಮುಖಾಂತರ ಪರಿಹರಿಸುವ ಯತ್ನ ಮಾಡಲಾಗುತ್ತದೆ. ಕಾನೂನು ವಿದ್ಯಾರ್ಥಿಗಳು ಅಶಿಕ್ಷಿತರಲ್ಲಿ ಕಾನೂನು ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದರು. ರಾಜ್ಯ ಕಾನೂನು ವಿವಿಯ ಕುಲಪತಿ ಪ್ರೊ. ಟಿ.ಆರ್. ಸುಬ್ರಹ್ಮಣ್ಯ, ರಿಜಿಸ್ಟ್ರಾರ್ ಡಾ. ಬಿ.ಎಸ್. ರೆಡ್ಡಿ ಮತ್ತು ಸುಭಾಷ್ ಮಲಖೇಡ್ ಇದ್ದರು.
--
ರಾಷ್ಟ್ರಧ್ವಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿನೋದಕುಮಾರ ಗುಂಜಾಳ ಗೆಳೆಯರ ಬಳಗ ಹೊರತಂದ ರಾಷ್ಟ್ರಾಭಿಮಾನಿ ಕರಪತ್ರ ಹಾಗೂ ರಾಷ್ಟ್ರಧ್ವಜ ವಿತರಣಾ ಕಾರ್ಯಕ್ರಮವನ್ನು ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಎನ್.ಜಿ. ಗುಂಜಾಳ ನಗರದಲ್ಲಿ ಮಂಗಳವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಬದುಕಿನತ್ತ ಆಕರ್ಷಿತರಾಗಿರುವ ಯುವ ಜನತೆ ಭಾವೈಕ್ಯ, ದೇಶಾಭಿಮಾನ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದ್ದು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಗೌರವ ಕೊಡಬೇಕು ಎಂದರು. ಅತಿಥಿಯಾಗಿದ್ದ ಸರೋಜಾದೇವಿ ಮಾತನಾಡಿ, ದೇಶಾಭಿಮಾನ ಬೆಳೆಸಿಕೊಳ್ಳುವುದರಿಂದ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ. ಐಕ್ಯತಾ ಭಾವದಿಂದ ಯಶಸ್ವಿ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿದರು.ದೇಶದ ಪ್ರಗತಿಯಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯವಾದಿ ವಿಜಯಲಕ್ಷ್ಮೀ ಹಾದಿಮನಿ, ದೇಶಾಭಿಮಾನ ಬೆಳೆಸಿಕೊಳ್ಳುವಂತೆ ತಿಳಿಸಿದರು. ಗೆಳೆಯರ ಬಳಗದಿಂದ ನಡೆಯಲಿರುವ ರಾಷ್ಟ್ರಧ್ವಜ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವವರು ಮೊ: 90084 47609 ಸಂಪರ್ಕಿಸುವಂತೆ ಇದೇ ಸಂದರ್ಭ ಕೋರಲಾಯಿತು.  ನಿಖಿಲ್ ಹಾದಿಮನಿ, ನಂದೀಶ, ವಿನೋದಕುಮಾರ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.