ಧಾರವಾಡ

ಡಾ. ವಸಂತಾ ಕಾಮತ್‌ರಿಂದ ಅಕ್ರಮ: ತಮಗೊಂಡ

Published On :

ಧಾರವಾಡ: ಹುಬ್ಬಳ್ಳಿ ಕಿಮ್ಸ್ ನಿರ್ದೇಶಕಿಯಾಗಿದ್ದ ಡಾ.ವಸಂತಾ ಕಾಮತ್ ಅವರ ವಿರುದ್ಧ ನಿವೃತ್ತ ಸರ್ಜನ್ ಡಾ.ಜಿ.ಆರ್. ತಮಗೊಂಡ ಅವರು ದುರಾಡಳಿತದ ಆರೋಪ ಹೊರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಸಂತಾ ಕಾಮತ್ ಅವರ ಆಡಳಿತಾವಧಿಯಲ್ಲಿ ಅನೇಕ ಅಕ್ರಮಗಳು ನಡೆದಿದ್ದು, ಅವುಗಳ ಬಗ್ಗೆ ತನಿಖೆ ನಡೆಯಬೇಕೆಂದು ವೈದ್ಯಕೀಯ ಶಿಕ್ಷಣ ಮಂತ್ರಿ ಡಾ. ಶರಣ ಪ್ರಕಾಶ ಪಾಟೀಲರಿಗೂ ಮನವಿ ಮಾಡಲಾಗಿದೆ. ಕೊನೆಗೆ ಲೋಕಾಯುಕ್ತರಿಗೂ ಈ ಕುರಿತು ದೂರು ನೀಡುತ್ತೇನೆ ಎಂದರು.
ಉತ್ತರ ಕರ್ನಾಟಕದ ಪ್ರಮುಖ ಸಂಸ್ಥೆಗಳಾದ ಹುಬ್ಬಳ್ಳಿಯ ಕಿಮ್ಸ್ ಮತ್ತು ಧಾರವಾಡದ ಮಾನಸಿಕ ಆಸ್ಪತ್ರೆಗೆ ಈ ಭಾಗದವರನ್ನೇ ನಿರ್ದೇಶಕರನ್ನಾಗಿ ನೇಮಿಸಬೇಕಿದ್ದು, ಸರ್ಕಾರ ಈ ವಿಷಯದಲ್ಲಿ ಅನ್ಯಾಯ ಮಾಡಿದೆ. ಪ್ರಾದೇಶಿಕ ಅಸಮತೋಲನ ಕುರಿತು ಡಾ.ಡಿ.ಎಂ. ನಂಜುಂಡಪ್ಪ ಅವರು ಸಲ್ಲಿಸಿರುವ ವರದಿಯಲ್ಲಿ ಕಿಮ್ಸ್ ಮತ್ತು ಮಾನಸಿಕ ಆಸ್ಪತ್ರೆ ಅಭಿವೃದ್ಧಿ ಮತ್ತು ಹಿತದೃಷ್ಟಿಯಿಂದ ಉತ್ತರ ಕರ್ನಾಟಕದವರನ್ನೇ ನಿರ್ದೇಶಕರಾಗಿ ನೇಮಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಇದಾವುದನ್ನೂ ಪರಿಗಣಿಸದೆ ಡಾ.ವಸಂತಾ ಕಾಮತ್ ಅವರನ್ನು ಕಿಮ್ಸ್ ಮತ್ತು ಅವರ ಪತಿ ಡಾ.ನಾಗರಾಜ ಅವರನ್ನು ಮಾನಸಿಕ ಆಸ್ಪತ್ರೆ ನಿರ್ದೇಶಕರನ್ನಾಗಿ ನೇಮಿಸಿತು ಎಂದರು.
ಕಿಮ್ಸ್‌ನ ನಿಯಮಾವಳಿ ಪ್ರಕಾರ 60 ವರ್ಷ ವಯೋವುತಿ ಹೊಂದಿದವರನ್ನು ನೇಮಿಸಲು ಅವಕಾಶವಿಲ್ಲ. ಆದರೆ, ವಿಶೇಷ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು ವಯೋವುತಿಯಲ್ಲಿ ಸಡಿಲಿಕೆ ಮಾಡಿ ಡಾ.ವಸಂತಾ ಕಾಮತ್ ಅವರನ್ನು ನೇಮಿಸಿದ್ದಾರೆ. ಇದು ಕಾನೂನು ಬಾಹಿರ. ಕಾಮತ್ ಅವರು ನಿರ್ದೇಶಕರಾಗುವ ಅಪೇಕ್ಷೆ ಹೊಂದಿರಲಿಲ್ಲ. ಅಲ್ಲದೆ, ಸಂದರ್ಶನ ಕೂಡ ಎದುರಿಸಿರಲಿಲ್ಲ. ಹೀಗಾಗಿ ಇದು ಅಕ್ರಮ ನೇಮಕಾತಿ ಎಂದರು.
ಸರ್ಕಾರ ಮಾಡಿರುವ ನೇಮಕಾತಿ ಹಿಂದೆ ನಾಗರಾಜ ಅವರ ಸಂಬಂಧಿಯೊಬ್ಬರು ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ ಜೋಶಿ ಅವರ ಮೇಲೆ ಒತ್ತಡ ತಂದರು. ಇದರಿಂದ ಆಂದಿನ ವೈದ್ಯಕೀಯ ಶಿಕ್ಷಣ ಸಚಿವ ಎ. ರಾಮದಾಸ ಡಾ. ಕಾಮತ ಮತ್ತು ನಾಗರಾಜರನ್ನು ನೇಮಕ ಮಾಡಿದ್ದರು. ಎರಡು ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಔಷಧ ಹಾಗೂ ಉಪಕರಣಗಳ ಖರೀದಿಯಲ್ಲಿ ಅಕ್ರಮ, ಕಾಮಗಾರಿ ಟೆಂಡರ್‌ಗಳಲ್ಲಿ, ಆವರಣ ಉಸ್ತುವಾರಿಗಾಗಿ ಕೂಲಿಕಾರರ ಸೇವೆ ಮತ್ತು ನಿರ್ವಹಣಾ ಸಾಮಗ್ರಿಗಳ ಖರೀದಿಯಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.