ಅವ್ಯವಸ್ಥೆ ಆಗರ ಕಲಘಟಗಿ ಬಸ್ ನಿಲ್ದಾಣ
- ಚಿತ್ರ-ವರದಿ: ರವಿ ಕೆ. ಬಡಿಗೇರ
ಕನ್ನಡಪ್ರಭ ವಾರ್ತೆ, ಕಲಘಟಗಿ, ಆ. 23
ನಮ್ಮ ಬಸ್ ಯಾವಾಗ ಬರತೇತ್ರಿ, ಈ ಬಸ್ಗೆ ಬೋರ್ಡ್ ಇಲ್ಲರೀ.. ಇದು ಕೆಟ್ಟನಿಂತೈತ್ರಿ, ನಿಲ್ದಾಣಾಧಿಕಾರಿಗಳು ಇನ್ನೂ ಬಂದಿಲ್ಲರ್ರೀ... ಇದು ಪಟ್ಟಣದ ಹೆದ್ದಾರಿ ಬಸ್ ನಿಲ್ದಾಣದಲ್ಲಿ ಬರುವ, ಹೋಗುವ ಪ್ರಯಾಣಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರದಾಡುವ ಪರಿಯಿದು.
ಕಳೆದ ಎರಡು ವರ್ಷಗಳ ಹಿಂದೆಯೇ ಡಾ ನಂಜುಂಡಪ್ಪ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು ರು. 2 ಕೋಟಿ ವೆಚ್ಚದಲ್ಲಿ ನವೀಕೃತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆಯಷ್ಟೆ. ಆದರೆ, ಪ್ರಯಾಣಿಕರ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಯವರನ್ನು ಶಪಿಸುತ್ತಿದ್ದಾರೆ.
ಅಂದಿನ ಸಾರಿಗೆ ಸಚಿವ ಆರ್. ಅಶೋಕ ಅವರು ನವೀಕೃತ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಸ್ಥಳದ ಕೊರತೆಯಿಂದಾಗಿ ದಶಕಗಳಿಂದಲೂ ಮಿನಿ ಬಸ್ ಡಿಪೋ ಸ್ಥಾಪಿಸುವ ಉತ್ತಮ ಸಾರಿಗೆ ಸೇವಾ ಸೌಲಭ್ಯ ನೀಡುವ ಭರವಸೆ ನೀಡಿದ್ದರು.
ಈ ಕುರಿತು ಅಂದಿನಿಂದ ಇಂದಿನವರೆಗೂ ಸ್ಥಳೀಯ ಶಾಸಕ ಸಂತೋಷ ಲಾಡ್, ಸರ್ಕಾರಕ್ಕೆ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೂ ಆಗಿದೆ. ಆದರೆ, ನೂತನ ಮಿನಿ ಬಸ್ ಡಿಪೋ ನಿರ್ಮಾಣ ಕಾರ್ಯ ಮಾತ್ರ ಗಗನಕುಸುಮವಾಗಿ ಉಳಿದಿದೆ. ತಾಲೂಕು ಕೇಂದ್ರದಿಂದ ಮುತ್ತಗಿ ಮಾರ್ಗವಾಗಿ ಧಾರವಾಡ ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಲ್ಪಿಸುವ ಹಾಗೂ ಕಾರವಾರ ಜಿಲ್ಲೆಯ ಹಳಿಯಾಳ, ಮುಂಡಗೋಡ, ಶಿಗ್ಗಾಂವಿ ತಾಲೂಕಿನ ತಡಸ ಮಾರ್ಗದ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೆ ಸಾರ್ವಜನಿಕರಿಗೆ ಪರದಾಟ ಮಾತ್ರ ತಪ್ಪಿಲ್ಲ. ಸದ್ಯ ಬಸ್ ನಿಲ್ದಾಣದಲ್ಲಿ ಇನ್ನೂ ಇಬ್ಬರು ನಿಲ್ದಾಣಾಧಿಕಾರಿಗಳು, ಇಬ್ಬರು ಮೆಕ್ಯಾನಿಕ್ ಸಿಬ್ಬಂದಿ ನೌಕರರ ಕೊರತೆ ಇದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಿಗದಂತಾಗಿದೆ.
ಸಂಜೆ 7ರಿಂದ ಬೆಳಗಿನ 7 ಗಂಟೆವರೆಗೆ ನಿಲ್ದಾಣಾಧಿಕಾರಿಗಳು ಬರುವವರೆಗೂ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಹಗಲು-ರಾತ್ರಿ ಬಸ್ ನಿಲ್ದಾಣದಲ್ಲಿ ಬಿಡಾಡಿ ದನಗಳು, ನಾಯಿಗಳು ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿವೆ. ಸಾರಿಗೆ ಇಲಾಖೆ ಸೇವಾ ಸೌಲಭ್ಯಗಳ ಮಾಹಿತಿಯ ನಾಮಫಲಕ ಬಸ್ ನಿಲ್ದಾಣದಲ್ಲಿ ಸರಿಯಾಗಿ ಕಂಡು ಬರುತ್ತಿಲ್ಲ. ಇನ್ನೂ ಹೆಚ್ಚುವರಿ ಶೌಚಾಲಯ, ಮೂತ್ರಾಲಯಗಳ ನಿರ್ಮಾಣ ಪ್ರಯಾಣಿಕರ ರಕ್ಷಣೆಗೆ ರಾತ್ರಿ ವೇಳೆಯಲ್ಲಿ ಕಾವಲುಗಾರರ ಕೊರತೆಯಿದೆ ಎಂದು ಸಾರ್ವಜನಿಕರು ಸಾರಿಗೆ ಇಲಾಖೆಗೆ ಮನವಿ ನೀಡಿ ಆಗ್ರಹಿಸಿದ್ದಾರೆ. ಕೂಡಲೆ ಆಡಳಿತಾರೂಢ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸಂತೋಷ ಲಾಡ್ ಅವರು ಕಲಘಟಗಿಯಲ್ಲಿ ಮಿನಿ ಬಸ್ ಡಿಪೋ ಸ್ಥಾಪಿಸಿ ಪ್ರಯಾಣಿಕರಿಗೆ ಹೆಚ್ಚಿನ ಸೇವೆ ಕಲ್ಪಿಸಬೇಕೆಂದು ಸಾರ್ವಜನಿಕರ ಆಶಯವಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

