ಗೊಂದಲದ ಗೂಡಾದ ಮತ ಎಣಿಕೆ ಕೇಂದ್ರ
ಧಾರವಾಡ: ವಿಧಾನ ಪರಿಷತ್ ಉಪ ಚುನಾವಣೆ ನಿಮಿತ್ತ ಇಲ್ಲಿನ ಕೃಷಿ ವಿವಿ ಮುಖ್ಯ ಕಟ್ಟಡದಲ್ಲಿ ಸ್ಥಾಪಿಸಿದ್ದ ಮತ ಎಣಿಕೆ ಕೇಂದ್ರವು ಗೊಂದಲದ ಗೂಡಾಗಿ ಪರಿಣಮಿಸಿತು.
ಎಣಿಕಾ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದ್ದರಿಂದ ಆಗಾಗ ಅನೇಕ ವಿಚಿತ್ರ ಘಟನೆಗಳು ಅಲ್ಲಿ ನಡೆದವು.
ಬೆಳಗ್ಗೆ 8ಕ್ಕೆ ಮತ ಎಣಿಕೆ ಎಂದು ಘೋಷಿಸಿದ್ದರೂ 11.25ಕ್ಕೆ ಮತ ಎಣಿಕೆ ಶುರುವಾಯಿತು. ಬಳಿಕವೂ ಮತಗಳ ವಿವರ ಸರಿಯಾಗಿ ಸಿಗದೆ ಮಾಧ್ಯಮದವರು ಪರದಾಡುವಂತಾಯಿತು. ಮತ ಎಣಿಕೆ ಪೂರ್ಣಗೊಂಡ ಬಳಿಕ ಯಾವ ಅಭ್ಯರ್ಥಿಗೆ ನಿಖರವಾಗಿ ಎಷ್ಟು ಮತ ಬಿದ್ದಿವೆ ಎಂಬುದು ತಿಳಿಯಲೇ ಇಲ್ಲ. ಒಂದು ಹಂತದಲ್ಲಿ ನಾಗರಾಜ ಛಬ್ಬಿಗೆ ಗೆಲವು ಎಂದು ತಿಳಿಯಲಾಗಿದ್ದು, ನಂತರ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯುತ್ತಿದೆ ಎಂಬ ಸುದ್ದಿ. ಇದರಿಂದ ಕೆಲ ಹೊತ್ತು ಕಾಂಗ್ರೆಸ್ ಮುಖಂಡರು ಸೇರಿದಂತೆ ಮಾಧ್ಯಮದವರು ಕಕ್ಕಾಬಿಕ್ಕಿಯಾದರು. ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ಅಧಿಕೃತವಾಗಿ ಘೋಷಣೆಗೂ ಮುಂಚೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಸಹ ಆಚರಿಸಿದ್ದರು.
ಮಧ್ಯಾಹ್ನ 12.30ಕ್ಕೆ ಮತ ಎಣಿಕೆ ಪಕ್ರಿಯೆ ಮುಗಿಸಿದ್ದರೂ ಮೂರನೇ ಅಭ್ಯರ್ಥಿಗೆ ಬಿದ್ದ ಮತಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯ ಬಳಿಕವೂ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲೇ ಇಲ್ಲ. ಇನ್ನೂ ಮಧ್ಯಾಹ್ನ 1.30ರ ಸಮಯದಲ್ಲಿ ಮಾಧ್ಯಮದವರಿಗೆ ನೀಡಿದ ಕೂಪನ್ ತೆಗೆದುಕೊಂಡು ಊಟಕ್ಕೆ ಹೋದರೆ ಅಲ್ಲಿಯೂ ಅಯೋವುಯ ವ್ಯವಸ್ಥೆ. ಕೂಪನ್ ನೀಡಿದರೂ ಊಟ ಸಿಗದಂತಾಗಿ ಮಧ್ಯಾಹ್ನ 4ರ ವರೆಗೆ ಬರೀ ನೀರೇ ಅಲ್ಲಿ ಆಹಾರವಾಗಿತ್ತು. ಈ ಎಲ್ಲ ದೂರುಗಳು ಜಿಲ್ಲಾಧಿಕಾರಿ ಸಮೀರ ಶುಕ್ಲ ಅವರ ಬಳಿ ಹೋದಾಗ ಅವರಿಂದ ಬಂದ ಒಂದೇ ಉತ್ತರ ಸಾರಿ, ಇನ್ಮುಂದೆ ಹೀಗಾಗೋದಿಲ್ಲ.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

