ಶೆಟ್ಟರ್-ಜೋಶಿ ತವರಲ್ಲೇ ಕಮರಿದ ಕಮಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 26
ಬಿಜೆಪಿ ಮೇಲಿನ ಮತದಾರನ ಮುನಿಸು ತಣಿದಿಲ್ಲ. ಪರಿಣಾಮ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ತವರು ಜಿಲ್ಲೆಯಲ್ಲಿಯೇ ಕಮಲ ಕಮರಿದೆ. ಅವಿಭಜಿತ ಧಾರವಾಡ ಜಿಲ್ಲೆಯ ವಿಧಾನಪರಿಷತ್ ಉಪಚುನಾವಣೆಯಲ್ಲಿ ಸೋಲಾಗಿರುವುದು ಬಿಜೆಪಿ ಪಾಲಿಗೆ ದೊಡ್ಡ ಆಘಾತವೇ ಸರಿ.
ಹೌದು, ಉಪಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆ ಎಂದೇ ಪರಿಗಣಿಸಲಾಗಿತ್ತು. ಏಕೆಂದರೆ ಬಿಜೆಪಿಯ ಮುಂಚೂಣಿ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿಯವರು ಪ್ರಬಲವಾಗಿ ಬೇರೂರಿರುವ ಕ್ಷೇತ್ರದಲ್ಲಿ ಈ ಚುನಾವಣೆ ನಡೆದಿತ್ತು. ಇದಕ್ಕಿಂತ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿಯವರ ಖಾಸಾ ಸಹೋದರ ಪ್ರದೀಪ ಶೆಟ್ಟರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ತಮ್ಮನ ಸೋಲು-ಗೆಲವು ಜಗದೀಶ ಶೆಟ್ಟರ್ ಅವರ ಹೆಗಲಿಗೇರುತ್ತಿತ್ತು. ಇದೀಗ ಆಗಿದ್ದೂ ಇದೆ. ಈ ಚುನಾವಣೆಯಲ್ಲಿ ಕೇವಲ ಪ್ರದೀಪ ಶೆಟ್ಟರ್ಗೆ ಮಾತ್ರ ಸೋಲಾಗಿಲ್ಲ, ಬದಲಿಗೆ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಅಷ್ಟೇ ಏಕೆ ಸಂಪೂರ್ಣ ಬಿಜೆಪಿಯ ಸೋಲು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಪ್ರದೀಪ ಶೆಟ್ಟರ್ ಅವರನ್ನು ಗೆಲ್ಲಿಸಿಯೇ ತೀರಬೇಕೆಂದು ಸ್ವತಃ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಕ್ಷೇತ್ರದಲ್ಲಿ ಠಿಕಾಣಿ ಹೊಡೆದಿದ್ದರು. ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ್ದರು. ಚಿತ್ರದುರ್ಗ, ಮೈಸೂರನಲ್ಲಿಯೂ ವಿಧಾನಪರಿಷತ್ ಉಪಚುನಾವಣೆ ನಡೆಯುತ್ತಿದ್ದರೂ ಬಹುಪಾಲು ಸಮಯವನ್ನು ಪ್ರದೀಪ ಸ್ಪರ್ಧೆಗಿಳಿದಿದ್ದ ಈ ಕ್ಷೇತ್ರಕ್ಕೇ ಮೀಸಲಾಗಿರಿಸಿದ್ದರು. ಆದಾಗಿಯ್ಯೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ವಿಫಲರಾದರು.
ಸೂಕ್ಷ್ಮವಾಗಿ ಗಮನಿಸಿದರೆ ಕ್ಷೇತ್ರದವರು ಹೊರತು ಪಡಿಸಿ ಕಾಂಗ್ರೆಸ್ನ ಪ್ರಮುಖ ನಾಯಕರು ಇಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಇದೇ ವೇಳೆ ಶೆಟ್ಟರ್ ಹಾಗೂ ಜೋಶಿಯಂತಹ ಘಟಾನುಘಟಿಗಳು ಬಿಜೆಪಿ ಪರ ಮತ ಕೇಳಿದರೂ ಮತದಾರರು ಕೃಪೆ ತೋರಲಿಲ್ಲ.
ಒಡೆದ ಮನಸ್ಸು ಒಂದಾಗಲಿಲ್ಲ: ಏತನ್ಮಧ್ಯೆ ಗಮನಿಸಬೇಕಾದ ಸಂಗತಿಯೆಂದರೆ ಬಿಜೆಪಿಗೆ ಬೆಂಬಲವಾಗಿ ಕೆಜೆಪಿ ಹಾಗೂ ಜೆಡಿಎಸ್ ನಿಂತಿತ್ತು. ಈ ಮೂರೂ ಪಕ್ಷಗಳು ಒಟ್ಟಾದರೂ 'ಕೈ' ಮಣಿಸಲು ಸಾಧ್ಯವಾಗಿಲ್ಲದಿರುವುದು ಗಮನಾರ್ಹ. ಅಸಲಿಗೆ ಮೇಲ್ನೋಟಕ್ಕೆ ಈ ಮೂರು ಪಕ್ಷಗಳು ಒಂದಾಗಿವೆ ಎಂಥಾದರೂ ಒಳಗೊಳಗೇ ಒಡಕಿನ ಬೆಗುದಿ ಇದ್ದೇ ಇತ್ತು. ಅದರಲ್ಲಿಯೂ ಬಿಜೆಪಿಯಿಂದ ಸಿಡಿದು ಬಂದಿರುವ ಕೆಜೆಪಿ ಪ್ರಾಮಾಣಿಕವಾಗಿ ಬಿಜೆಪಿಯ ಗೆಲುವಿಗೆ ಶ್ರಮಿಸಲೇ ಇಲ್ಲ. ಬಿಜೆಪಿಯನ್ನು ಬೆಂಬಲಿಸುವ ಪ್ರಸಂಗ ಬಂದಾಗ ಹಾವೇರಿಯಲ್ಲಿ ಕೆಜೆಪಿ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ತದ ನಂತರದ ಬೆಳವಣಿಗೆಯಲ್ಲಿ ಕೆಜೆಪಿ ಮುಖಂಡರು ಕೆಳ ಹಂತದ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದರಾದರೂ ಒಡೆದ ಮನಸ್ಸು ಮಾತ್ರ ಒಂದಾಗಿರಲಿಲ್ಲ. ಅದರ ಪರಿಣಾಮವನ್ನೂ ಬಿಜೆಪಿ ಅನುಭವಿಸುವಂತಾಯಿತು.
ಎಚ್ಕೆ ನೇತೃತ್ವ ಪ್ಲಸ್: ಗೆಲುವಿನ ನಿಟ್ಟಿನಲ್ಲಿ ಕಾಂಗ್ರೆಸ್ಗೆ ಕೆಲ ಅಂಶಗಳು ಪೂರಕವಾದವು. ಮೊದಲನೇಯದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿರುವುದರಿಂದ ಮತದಾರರು ಸಹ ಆ ಪಕ್ಷದ ಪರವಾಗಿಯೇ ಒಲವು ತೋರಿದ್ದು, ಜತೆಗೆ ಸರ್ಕಾರದ ವಿನೂತನ ಯೋಜನೆಗಳೂ ಮತದಾರನ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇನ್ನು ಹಿರಿಯ ಮುಖಂಡರಾದ ಸಚಿವ ಎಚ್. ಕೆ. ಪಾಟೀಲ ನೇತೃತ್ವದಲ್ಲಿ ಸಿದ್ಧವಾದ ಪ್ರಚಾರ ತಂತ್ರಗಾರಿಕೆಯಿಂದ ಕಾಂಗ್ರೆಸ್ ಜಯದ ಹಾದಿಯಲ್ಲಿ ಸಾಗುವಂತಾಯಿತು.
ಒಂದು ಹಂತದಲ್ಲಿ ಎಚ್. ಕೆ. ಪಾಟೀಲರು ಸಹೋದರ ಡಿ. ಆರ್. ಪಾಟೀಲರಿಗೆ ಅಥವಾ ಮಿತ್ರ ಎ. ಎಂ. ಹಿಂಡಸಗೇರಿಯವರಿಗೆ ಟಿಕೆಟ್ ಸಿಗದ ಕಾರಣ ನಾಗರಾಜ ಛಬ್ಬಿಯವರ ಪರವಾಗಿ ಕೆಲಸ ಮಾಡುವುದಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಪ್ರತಿ ಸ್ಪರ್ಧಿ ಪಕ್ಷಗಳಿಗೂ ಈ ಅಂಶ ಆಹಾರವಾಗಿತ್ತು. ಆದರೆ ವ್ಯಕ್ತಿಗಿಂತ ಪಕ್ಷ ನಿಷ್ಠೆ ದೊಡ್ಡದು ಎಂದು ಸಾಬೀತುಪಡಿಸಿದ ಎಚ್ಕೆ ಪಾಟೀಲರು, ಅನ್ಯ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹೆಚ್ಚಿನ ಸಮಯ ನಾಗರಾಜ ಛಬ್ಬಿ ಪರ ಪ್ರಚಾರಕ್ಕಾಗಿಯೇ ಮೀಸಲಿಟ್ಟಿರು ಹಾಗೂ ಗೆಲ್ಲಿಸಿಕೊಂಡು ಬರುವಲ್ಲಿಯೂ ಸಫಲರಾದರು. ಇದರೊಟ್ಟಿಗೆ ಸಚಿವ ಸಂತೋಷ ಲಾಡ್, ಜಿ. ಎಸ್. ಪಾಟೀಲ, ವಿನಯ ಕುಲಕರ್ಣಿ, ಮನೋಹರ ತಹಸೀಲ್ದಾರ್ ಸೇರಿದಂತೆ ಕಾಂಗ್ರೆಸ್ ಶಾಸಕರು ಲಾಡ್ ಮತ್ತಿತರರು ಸಂಘಟಿತ ಕಾರ್ಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸಿತು.
ರಾಜ್ಯಾಧ್ಯಕ್ಷರ ಅದೃಷ್ಟವೇ ಸರಿಯಿಲ್ಲ
ಸಂಸದ ಪ್ರಹ್ಲಾದ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅದೃಷ್ಟವೇ ಸರಿಯಿಲ್ಲದಂತಾಗಿದೆ. ಪ್ರಹ್ಲಾದ ಜೋಶಿ ಇನ್ನೂ ಯುವಕರಾಗಿರುವುದರಿಂದ ಲವಲವಿಕೆಯಿಂದ ಓಡಾಡಿಕೊಂಡು ಪಕ್ಷ ಸಂಘಟನೆ ಮಾಡಬಹುದು ಎನ್ನುವ ಉದ್ದೇಶದಿಂದ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಅಧಿಕಾರ ವಹಿಸಿಕೊಂಡ ಹೊಸತರಲ್ಲೇ ಜೋಶಿಯವರ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಬೇಕಾಯಿತು. ಆದರೆ ಫಲಿತಾಂಶ ಬಂದಾಗ ಬಿಜೆಪಿ ಧೂಳಿಪಟವಾಗಿತ್ತು. ಇದು ಬಿಜೆಪಿ ಸೇರಿದಂತೆ ಸ್ವತಃ ಜೋಶಿಯವರಿಗೂ ಆಘಾತವನ್ನುಂಟು ಮಾಡಿತ್ತು. ಇದೀಗ ಲೋಕಸಭೆ ಉಪಚುನಾವಣೆ, ವಿಪ ಚುನಾವಣೆಯನ್ನೂ ಜೋಶಿ ನೇತೃತ್ವದಲ್ಲಿಯೇ ಎದುರಿಸಲಾಯಿತಾದರೂ, ಇಲ್ಲಿಯೂ ಬಿಜೆಪಿ ನಾಮಾವಶೇಷವಾಯಿತು. ಇದೀಗ ಬರುವ ಲೋಕಸಭೆಯಲ್ಲಿಯೂ ಇದೇ ಕಥೆಯಾದರೆ ಮುಂದೇನು ಗತಿ ಎನ್ನುವ ಚಿಂತೆ ಬಿಜೆಪಿಗರದ್ದು.
- ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

