ಧಾರವಾಡ

ಕನ್ನಡಪ್ರಭ ಸರಣಿ ವರದಿಗೆ ಸ್ಪಂದಿಸಿದ ಪಾಲಿಕೆ ೤ ವಾರದಲ್ಲಿ ಅತ್ಯಾಧುನಿಕ ಕಂಟೇನರ್ ನಗರಕ್ಕೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 31
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಳಾಗಿರುವ ಕಂಟೇನರ್‌ಗಳನ್ನು ಕಾರವಾರ ರಸ್ತೆಯಲ್ಲಿರುವ ಗಾರ್ಬೇಜ್ ಯಾರ್ಡ್‌ಗೆ ಸ್ಥಳಾಂತರಿಸುವ ಕೆಲಸ ಆರಂಭಿಸಿದೆ.
ಕಸ ಮುಕ್ತ ಹುಬ್ಬಳ್ಳಿ ನಗರಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭದ ಸರಣಿ ವರದಿಗೆ ಸ್ಪಂದಿಸಿರುವ ಹು-ಧಾ ಮಹಾನಗರ ಪಾಲಿಕೆ ಮೊದಲನೇ ಹಂತವಾಗಿ ಹಾಳಾಗಿರುವ ಎಲ್ಲ ಕಂಟೇನರ್‌ಗಳನ್ನು ಎತ್ತಿ ಹಾಕುತ್ತಿದ್ದು, ಹೊಸ ಕಂಟೇನರ್‌ಗಳು ಇನ್ನೊಂದು ವಾರದಲ್ಲಿ ನಗರಕ್ಕೆ ಆಗಮಿಸಲಿವೆ.
ಹುಬ್ಬಳ್ಳಿ ನಗರದ ವ್ಯಾಪ್ತಿಯಲ್ಲಿ ಹಾಳಾಗಿರುವ 175 ಕಂಟೇನರ್‌ಗಳನ್ನು ಮತ್ತು ಧಾರವಾಡ ನಗರದ ವ್ಯಾಪ್ತಿಯಲ್ಲಿ ಹಾಳಾಗಿರುವ ಸುಮಾರು 70ಕ್ಕೂ ಹೆಚ್ಚು ಕಂಟೇನರ್‌ಗಳನ್ನು ಕಾರವಾರ ರಸ್ತೆಯಲ್ಲಿರುವ ಗಾರ್ಬೇಜ್ ಯಾರ್ಡ್‌ನಲ್ಲಿ ಕೂಡಿ ಹಾಕಲಾಗುತ್ತಿದೆ.
ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಪಾಲಿಕೆ ಪರಿಸರ ಅಭಿಯಂತರ ಗಿರೀಶ, ಅವಳಿ ನಗರವನ್ನು ಕಸ ಮುಕ್ತ ನಗರವನ್ನಾಗಿಸುವಲ್ಲಿ ಪಾಲಿಕೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಹಾಳಾಗಿರುವ ಕಂಟೇನರ್‌ಗಳನ್ನು ಬದಲಿಸಲಾಗುತ್ತಿದ್ದು, ವಿಭಿನ್ನ ಮಾದರಿಯ ನೂತನ ಕಂಟೇನರ್‌ಗಳು ಒಂದು ವಾರದಲ್ಲಿ ನಗರಕ್ಕೆ ಬರಲಿರುವುದಾಗಿ ತಿಳಿಸಿದರು.
ಹುಬ್ಬಳ್ಳಿ ನಗರಕ್ಕೆ 93 ಹೊಸ ಕಂಟೇನರ್‌ಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಬೀದಿ ಬದಿ ಇರಿಸುವ ಈ ಕಂಟೇನರ್‌ಗಳನ್ನು ಖಾಲಿ ಮಾಡುವುದಕ್ಕೆ ಪೌರ ಕಾರ್ಮಿಕರು ಬೇಕಾಗಿಲ್ಲ.
ಇವುಗಳಿಗೆ ಗಾಲಿಗಳನ್ನು ಅಳವಡಿಸಲಾಗಿದ್ದು, ಈ ಕಂಟೇನರ್‌ಗಳನ್ನು ಕಾಂಪ್ಯಾಕ್ಟ್ ಮಷಿನ್ ಇರುವ ವಾಹನಕ್ಕೆ ಖಾಲಿ ಮಾಡುವ ಸಂದರ್ಭ ಅಳವಡಿಸಿದರೆ ಕಾಂಪ್ಯಾಕ್ಟ್ ಮಷಿನ್ ವಾಹನ ತಾನಾಗಿಯೇ ಕಂಟೇನರ್‌ದಲ್ಲಿರುವ ಕಸ ಎತ್ತಿಕೊಳ್ಳುತ್ತದೆ. ಮಹಾನಗರ ಪಾಲಿಕೆ ಖರೀದಿಸಿರುವ ಕಾಂಪ್ಯಾಕ್ಟ್ ಮಷಿನ್ ವಾಹನ ಕನಿಷ್ಠ ಏನಿಲ್ಲವೆಂದರೂ 10 ಟನ್ ತ್ಯಾಜ್ಯವನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತದೆ. ಹೀಗಾಗಿ ಒಂದು ವಾರ್ಡ್‌ನ ಕಸವನ್ನು ಏಕಕಾಲಕ್ಕೆ ವಿಲೇವಾರಿ ಮಾಡಬಹುದು.
ಹುಬ್ಬಳ್ಳಿ ನಗರವೊಂದರಿಂದಲೇ ಕಾರವಾರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತಿದಿನ ನೂರಕ್ಕೂ ಹೆಚ್ಚು ಟ್ರಿಪ್‌ಗಳಲ್ಲಿ ಟ್ರ್ಯಾಕ್ಟರ್‌ಗಳು ತ್ಯಾಜ್ಯ ತಂದು ಸುರಿಯುತ್ತಿದ್ದು, ಒಂದು ಅಂದಾಜಿನ ಪ್ರಕಾರ ಗಾರ್ಬೇಜ್ ಯಾರ್ಡ್‌ಗೆ ಬಂದು ಬೀಳುತ್ತಿರುವ ತ್ಯಾಜ್ಯದ ಪ್ರಮಾಣ ನಾನ್ನೂರು ಟನ್.
ಪ್ರತಿದಿನ ನಾನ್ನೂರಕ್ಕೂ ಹೆಚ್ಚು ಟನ್ ತ್ಯಾಜ್ಯ ವಿಲೇವಾರಿಯಾಗುತ್ತಿದ್ದರೂ ಕೂಡ ಹುಬ್ಬಳ್ಳಿಯ ಬಹುತೇಕ ಪ್ರದೇಶಗಳಲ್ಲಿ ಇಂದಿಗೂ ಎಲ್ಲಿ ನೋಡಿದಲ್ಲಿ ಅಲ್ಲಿ ಕಸದ ರಾಶಿ ಎದ್ದು ಕಾಣುತ್ತದೆ.
ಹಾಳಾದ ಕಂಟೇನರ್‌ಗಳ ಮೂಲಕ ಕಸದ ರಾಶಿ ರಸ್ತೆ ಮೇಲೆಲ್ಲ ಹರಡಿರುವ ಕುರಿತು 'ಕನ್ನಡಪ್ರಭ' ಸಚಿತ್ರ ವರದಿ ಪ್ರಕಟಿಸಿತ್ತು. ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆ ಬಗ್ಗೆಯೂ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಪತ್ರಿಕೆ ತನ್ನ ವಿಶೇಷ ಸರಣಿ ವರದಿಯಲ್ಲಿ ಮಾಡಿತ್ತು. ಮಾಜಿ ಮೇಯರ್ ಹಾಗೂ ಪಾಲಿಕೆ ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಹಾಗೂ ಹಿರಿಯ ತಜ್ಞ ವೈದ್ಯ ಡಾ. ಜಿ.ಬಿ. ಸತ್ತೂರ ಅವರು ಸಹ ಪತ್ರಿಕೆಯ ಕಳಕಳಿಗೆ ಸ್ಪಂದಿಸಿ, ಕಸಮುಕ್ತ ನಗರ ನಿರ್ಮಾಣಕ್ಕೆ ಜನಸಾಮಾನ್ಯರ ಜವಾಬ್ದಾರಿ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಪತ್ರಿಕೆ ಪ್ರಕಟಿಸಿತ್ತು.
ಇದೆಲ್ಲದರ ಪರಿಣಾಮವೆನ್ನುವಂತೆ ಹು-ಧಾ ಮಹಾನಗರ ಪಾಲಿಕೆ ಹಾಳಾಗಿರುವ ಕಂಟೇನರ್‌ಗಳನ್ನು ಅವಳಿ ನಗರದಿಂದ ಹೊರಹಾಕುವ ಮೊದಲ ಕಾರ್ಯಕ್ಕೆ ಚಾಲನೆ ನೀಡಿದೆ.
ಇದರೊಂದಿಗೆ ಅವಳಿ ನಗರದ ಕೆಲವೇ ಪ್ರದೇಶದ ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಯ ಎಲ್ಲೆಡೆ ವಿಸ್ತರಿಸಬೇಕಾಗಿದೆ. ಕಸ ವಿಂಗಡಣೆಯ ಕೆಲಸವೂ ಪ್ರತಿ ಮನೆಯಿಂದಲೇ ಆಗಬೇಕಿದ್ದು, ಈ ಕುರಿತು ನಾಗರಿಕರಿಗೆ ತಿಳಿವಳಿಕೆ ನೀಡುವ ಜವಾಬ್ದಾರಿ ಪಾಲಿಕೆ ಮೇಲಿದೆ.

ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.