ಉತ್ಸವಕ್ಕೆ ಜಿಲ್ಲಾಡಳಿತ ಸಜ್ಜು
ಧಾರವಾಡ: ಧಾರವಾಡ ಜಿಲ್ಲಾ ಉತ್ಸವವನ್ನು ಡಿ. 13ರಿಂದ 15ರವರೆಗೆ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣವಾಗಿ ಸಂಘಟಿಸಲಾಗುತ್ತಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಜಿಲ್ಲಾಧಿಕಾರಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ-ಸಾಂಪ್ರದಾಯಿಕ ಕಲೆಗಳು, ಸಾಹಸ ಕ್ರೀಡೆಗಳು, ಪತಂಗ ಉತ್ಸವ, ಮಕ್ಕಳಿಗಾಗಿ ಪ್ರತ್ಯೇಕ ಕಿಡ್ ಝೋನ್, ಕವಿಗೋಷ್ಠಿ, ಚಿತ್ರಕಲೆ, ಚಲನಚಿತ್ರ ಪ್ರದರ್ಶನ ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಬಾರಿಯ ಜಿಲ್ಲಾ ಉತ್ಸವ ಜನಮನ ಸೂರೆಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಉತ್ಸವಕ್ಕೆಂದು ಧಾರವಾಡದ 10, ಹುಬ್ಬಳ್ಳಿಯ 5 ಸ್ಥಳಗಳಲ್ಲಿ ವೇದಿಕೆ ರಚಿಸಲಾಗಿದೆ. ಇದರ ಜೊತೆಗೆ ಅಳ್ನಾವರ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳಗಳಲ್ಲೂ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಈ ಬಾರಿ ಜಿಲ್ಲಾ ಉತ್ಸವದಲ್ಲಿ ಪ್ರಥಮ ಬಾರಿಗೆ ದೇಶದ ಖ್ಯಾತನಾಮರ ಮುಷಾಯರಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿ. 14ರ ಸಂಜೆ ಅಂಜುಮನ್ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಖ್ಯಾತನಾಮ ಶಾಯರ್ಗಳು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ಲಾ ವಿವರಿಸಿದರು.
ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಉತ್ಸವದಲ್ಲಿ ಪ್ರತ್ಯೇಕ ಕಿಡ್ಝೋನ್ ನಿರ್ಮಿಸಲಾಗಿದೆ. ಇಲ್ಲಿ 25 ವಿವಿಧ ಆಟಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಲ್ಲಿ ಕ್ರಿಯಾಶೀಲತೆ, ಸೃಜನಶೀಲತೆ ಬೆಳೆಸುವುದು ಇದರ ಉದ್ದೇಶವಾಗಿದ್ದು, ಎಲ್ಲ ಶಾಲಾ ಮುಖ್ಯಸ್ಥರಿಗೆ ಈ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದು ತರಲು ಸೂಚಿಸಲಾಗಿದೆ ಎಂದರು.
ಧಾರವಾಡ ಉತ್ಸವ ಸಾರ್ವಜನಿಕರ ಉತ್ಸವವಾಗಬೇಕೆಂಬ ಉದ್ದೇಶದಿಂದ ಈ ಬಾರಿ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿದೆ. ಈಗಾಗಲೇ ಈ ಕುರಿತಂತೆ ವಿವಿಧ ಸಂಘ ಸಂಸ್ಥೆಗಳು, ಶಾಲಾ ಮುಖ್ಯಸ್ಥರು, ಮಹಿಳಾ ಮಂಡಳಗಳ ಜತೆ ಚರ್ಚಿಸಲಾಗಿದ್ದು, ಪ್ರತಿವರ್ಷಕ್ಕಿಂತ ಈ ಬಾರಿಯ ಮೆರವಣಿಗೆ ವಿಶೇಷವಾಗಲಿದೆ. ಮೆರವಣಿಗೆಯಲ್ಲಿ 50 ಕಲಾ ತಂಡಗಳು, 3-4 ಸಾವಿರ ಮಹಿಳೆಯರು ಪಾಲ್ಗೊಳ್ಳಲಿದ್ದು ಜಿಲ್ಲೆಯ ಎಲ್ಲ ಭಾಗದ ಜನರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಾ ಉತ್ಸವ ನಡೆಯುವ ವೇದಿಕೆಗಳ ಬಳಿ ಸೂಕ್ತ ಬಂದೋಬಸ್ತ್ ಏರ್ಪಡಿಸುವ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಮಹಾನಗರ ಪೊಲೀಸ್ ಆಯುಕ್ತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರೊಡನೆ ಸ್ಥಳ ಪರಿಶೀಲನೆ ನಡೆಸಿ ಬಂದೋಬಸ್ತ್ ನಿಗದಿ ಪಡಿಸುವ ಕುರಿತು ಚರ್ಚಿಸಲಾಗಿದೆ. ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೂ ಅಗತ್ಯ ಸೂಚನೆ ನೀಡಲಾಗಿದೆ. ಅವಳಿನಗರದ 15 ಬೇರೆಬೇರೆ ವೇದಿಕೆಗಳಲ್ಲಿ ಜಿಲ್ಲಾ ಉತ್ಸವದ ವಿವಿಧ ಕಾರ್ಯಕ್ರಮ ನಡೆಯಲಿದ್ದು ಪರಸ್ಪರ ಸಂಚರಿಸುವ ಜನರಿಗಾಗಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥ್ಥೆಯೊಂದಿಗೆ ಚರ್ಚಿಸಲಾಗಿದೆ. ರಾತ್ರಿ ವೇಳೆ ಕಾರ್ಯಕ್ರಮ ಮುಗಿದ ಬಳಿಕ ಜನರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಹೆಚ್ಚುವರಿ ಬಸ್ ಬಿಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಕ್ಲಾ ತಿಳಿಸಿದರು.
ಜಿಲ್ಲಾ ಉತ್ಸವಕ್ಕೆಂದು ರಾಜ್ಯ ಸರ್ಕಾರ ರು. 30 ಲಕ್ಷ ಬಿಡುಗಡೆ ಮಾಡಿತ್ತು. ಜಿಲ್ಲಾಡಳಿತದಿಂದ ರು. ಒಂದು ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಅನುದಾನವನ್ನು ರು. 50 ಲಕ್ಷಕ್ಕೆ ಹೆಚ್ಚಿಸಿ ಬಿಡುಗಡೆ ಮಾಡಿದೆ. ಮಹಾನಗರ ಪಾಲಿಕೆಯವರು ರು. 25 ಲಕ್ಷ ನೀಡಿದ್ದಾರೆ. ಜಿಲ್ಲಾ ಉತ್ಸವ ಸಮಿತಿಯಲ್ಲಿ ರು. 10 ಲಕ್ಷ ಬ್ಯಾಲನ್ಸ್ ಹಣವಿದೆ. ಉಳಿದಂತೆ ಬ್ಯಾಂಕ್ಗಳು, ಉದ್ದಿಮೆದಾರರಿಂದ ಪ್ರಾಯೋಜಕತ್ವ ಕೇಳಲಾಗಿದೆ. ಹೀಗಾಗಿ ಉತ್ಸವಕ್ಕೆ ಹಣದ ಕೊರತೆ ಆಗದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಾ. ಗಿರಡ್ಡಿ ಗೋವಿಂದರಾಜ, ಮೋಹನ ನಾಗಮ್ಮನವರ, ಮನೋಜ ಹಾನಗಲ್, ಹೇಮಾ ವಾಘ್ಮೋರೆ, ಬಿ.ಡಿ. ಹಿರೇಗೌಡರ, ಎಂ. ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

