ಮರಿಗಳೊಂದಿಗೆ ತಾಯಿ ಚಿರತೆ ಕಾಡಿಗೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಡಿ. 17
ತಾಲೂಕಿನ ಕಡೂರ ಗ್ರಾಮದ ಹೊರವಲಯದಲ್ಲಿ ಮೂರು ಮರಿಗಳೊಂದಿಗೆ ಬೀಡುಬಿಟ್ಟಿದ್ದ ತಾಯಿ ಚಿರತೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಬಿಟ್ಟಿದ್ದಾರೆ.
ಮೂರು ದಿನಗಳಿಂದ ಅಹೋರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದರು. ಆದರೆ ಸೋಮವಾರ ರಾತ್ರಿ ತಾಯಿ ಚಿರತೆ ತನ್ನ ಮೂರು ಮರಿಗಳೊಂದಿಗೆ ಕಾಡಿಗೆ ಮರಳಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಇದರೊಂದಿಗೆ ಜನರ ಆತಂಕವೂ ದೂರವಾಗಿದೆ.
ಮಂಗಳವಾರ ಬೆಳಗ್ಗೆ ನೀರು ಹಾದು ಹೋಗುವ ಪೈಪ್ನಲ್ಲಿ ಮರಿಗಳಿಲ್ಲದಿರುವುದು ಮತ್ತು ಆದರ ಸಮೀಪ ಚಿರತೆ ಹೆಜ್ಜೆ ಗುರುತುಗಳನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಜಾಡನ್ನು ಹುಡುಕುತ್ತ ಸಾಗಿದಾಗ ಅದು ಗುಡ್ಡದ ಕಡೆಗೆ ತೆರಳಿರುವುದು ಕಂಡುಬಂದಿದೆ. ಗ್ರಾಮದ ಕುಡುಪಲಿ ಕಡೂರ ರಸ್ತೆಯ ಪಕ್ಕದಲ್ಲಿ ಜಮೀನಿನಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡದ್ದರಿಂದ ಭಾರಿ ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಜನರನ್ನು ಕಂಡು ಬೆದರಿದ ಚಿರತೆ ತನ್ನ ಮರಿಗಳೊಂದಿಗೆ ಕಾಲುವೆ ನೀರು ಹಾಯ್ದುಹೋಗುವ 30 ಅಡಿ ಸಿಮೆಂಟ್ ಪೈಪ್ನಲ್ಲಿ ಅವಿತುಕೊಂಡಿತ್ತು. ಇದನ್ನು ಕಂಡ ಕೆಲ ರೈತರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಕಾವಲು ಕಾಯುತ್ತಿದ್ದರು. ಆದರೆ ಚಿರತೆ ಹಾಗೂ ಮರಿಗಳು ಸುರಕ್ಷಿತವಾಗಿ ಗುಡ್ಡಕ್ಕೆ ವಾಪಾಸಾಗಿರುವುದು ಅರಣ್ಯ ಇಲಾಖೆಯ ಸಿಬ್ಬಂದಿಗೆ ನೆಮ್ಮದಿ ತಂದಿದೆ.
ಈ ಕುರಿತು ವಲಯಾರಣ್ಯಾಧಿಕಾರಿ ಎಸ್.ಜಿ. ಪೂಜಾರ ಮಾತನಾಡಿ, ಮರಿಗಳು ಹಾಗೂ ತಾಯಿ ಚಿರತೆ ಸುರಕ್ಷಿತವಾಗಿ ಜೀವಂತವಾಗಿ ಗುಡ್ಡಕ್ಕೆ ಮರಳಿದ್ದು ನೆಮ್ಮದಿ ಮೂಡಿಸಿದೆ. ಇಲ್ಲಿನ ಜನತೆ ಭಯಭೀತರಾಗಬೇಕಿಲ್ಲ. ಒಂದುವೇಳೆ ಚಿರತೆ ಕಾಣಿಸಿಕೊಂಡರೆ ತಕ್ಷಣವೇ ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಆನಂದ ಮದನೆ, ಅರಣ್ಯ ಸಿಬ್ಬಂದಿ ಚೆನ್ನಪ್ಪ ಪೂಜಾರ, ಮಲ್ಲಿಕಾರ್ಜುನ ಪೂಜಾರ, ಎಚ್.ಸಿ. ಲಮಾಣಿ, ಆರ್.ಎಸ್. ಹಳ್ಳಳ್ಳಿ, ಸಿ.ಎಸ್. ಪೂಜಾರ, ಹನುಮಂತಪ್ಪ ಮೂಲಿಮನಿ, ನಿಂಗಪ್ಪ ಬೂಮಳ್ಳೇರ ಪಾಲ್ಗೊಂಡಿದ್ದರು.
ಜನತೆಗೆ ತೀರದ ಆತಂಕ
ಚಿರತೆ ತನ್ನ ಮರಿಗಳೊಂದಿಗೆ ಗುಡ್ಡಕ್ಕೆ ವಾಪಸಾಗಿಲ್ಲ. ಇಲ್ಲಿರುವ ಕಬ್ಬಿನ ಗದ್ದೆಗಳಲ್ಲಿ ಇದೆ ಎಂದು ಇಲ್ಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಎರಡು ದಿನಗಳ ಕಾಲ ಕೆಲ ಗದ್ದೆಗಳಲ್ಲಿ ಕಾಣಿಸಿಕೊಂಡಿತ್ತು. ಮಾದಾಪುರ ಗ್ರಾಮದಲ್ಲಿರುವ ರೈತರು ರಾತ್ರಿ ವೇಳೆ ತೋಟದ ಮನೆಗಳಿಗೆ ಹೋಗುತ್ತಿಲ್ಲ, ಚಿರತೆ ಈ ಭಾಗದಲ್ಲಿದೆ ಎಂದು ರೈತ ಬಸನಗೌಡ ಮಾಜಿಗೌಡ್ರ ತಿಳಿಸಿದರು. ಕಡೂರ ಗ್ರಾಮದ ರೈತ ಶಂಕರಗೌಡ ಶಿರಗಂಬಿ, ತಾಯಿ ಚಿರತೆ ತನ್ನ ಮರಿಗಳೊಂದಿಗೆ ಗುಡ್ಡಕ್ಕೆ ಹೋಗಿಲ್ಲ. ಇಲ್ಲಿಯೇ ಸಮೀಪದ ಕಬ್ಬಿನ ಗದ್ದೆಗಳಲ್ಲಿ ವಾಸ ಮಾಡುತ್ತಿದೆ. ಹೀಗಾಗಿ ಭಯ ದೂರವಾಗಿಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

