ಧಾರವಾಡ

ಅವಳಿನಗರ ಹೊರವಲಯದಲ್ಲಿ ಕಸಾಯಿಖಾನೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 17
ಈಗಿರುವ ಧಾರವಾಡ ಹಾಗೂ ಹುಬ್ಬಳ್ಳಿಯ ಕಸಾಯಿಖಾನೆಗಳನ್ನು ನಗರದ ಹೊರ ವಲಯಗಳಲ್ಲಿ ಆಧುನಿಕ ಸೌಲಭ್ಯಗಳನ್ನು ನೀಡಿ ಮರು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೋ ಸೇವಾ ಆಯೋಗದ ಸದಸ್ಯ ಡಾ.ಎಸ್.ಕೆ. ಮಿತ್ತಲ್ ಹೇಳಿದ್ದಾರೆ.
ಇಲ್ಲಿನ ಹೆಬ್ಬಳ್ಳಿ ರಸ್ತೆಯಲ್ಲಿನ ಅವ್ಯವಸ್ಥೆಯ ಆಗರವಾಗಿರುವ ಕಸಾಯಿಖಾನೆಗೆ ಮಂಗಳವಾರ ಭೇಟಿ ನೀಡಿದ ಅವರು, ನಗರದ ಮಧ್ಯೆ ಕಸಾಯಿಖಾನೆ ಇರುವುದರಿಂದ ಸುತ್ತಮುತ್ತಲಿನ ಪ್ರದೇಶದ ಆರೋಗ್ಯ ಹದಗೆಡುತ್ತದೆ. ಅಲ್ಲದೇ, ಇಲ್ಲಿ ಯಾವುದೇ ಕಾನೂನು ಪಾಲಿಸದೇ ಜಾನುವಾರುಗಳನ್ನು ಕತ್ತರಿಸಲಾಗುತ್ತಿದೆ. ಕೆಲಮೊಮ್ಮೆ ಚರಂಡಿಯಲ್ಲಿಯೇ ರಕ್ತ ಹರಿದು ಬಂದ ವರದಿಗಳಿವೆ. ಈ ಹಿನ್ನೆಲೆಯಲ್ಲಿ ನಗರ ಬಿಟ್ಟು ಹೊರ ವಲಯದಲ್ಲಿ ಈ ಕಸಾಯಿಖಾನೆಗಳನ್ನು ಸ್ಥಾಪಿಸಿದರೆ ನಗರದ ಜನತೆಯ ಆರೋಗ್ಯದ ದೃಷ್ಟಿಯಿಂದ ಉತ್ತಮ. ಈಗಾಗಲೇ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಸದ್ಯದಲ್ಲಿಯೇ ಇದಕ್ಕೆ ಒಪ್ಪಿಗೆ ಸಿಗುವ ಭರವಸೆ ಇದೆ ಎಂದು ಹೇಳಿದರು.
ಜಾನುವಾರುಗಳನ್ನು ಕಡಿಯುವ ಮುಂಚೆ ಹಾಗೂ ಕಡಿದು ಮಾಂಸ ಮಾರಾಟ ಮಾಡುವಾಗ ಪಶುವೈದ್ಯರ ದೃಢೀಕರಣ ಅಗತ್ಯ. 12 ವರ್ಷದೊಳಗಿನ ಜಾನುವಾರು ಹಾಗೂ ರೋಗ ಬಂದ ಜಾನುವಾರುಗಳನ್ನು ಕಡಿಯುವಂತಿಲ್ಲ. ಈ ಕಸಾಯಿ ಖಾನೆಯಲ್ಲಿ ಎಲ್ಲವೂ ಕಾನೂನು ವಿರುದ್ಧವಾಗಿ ನಡೆಯುತ್ತಿದೆ. ಸ್ವಚ್ಛತೆಯನ್ನೂ ಕಾಪಾಡಿಲ್ಲ. ಕೂಡಲೇ ಪಾಲಿಕೆ ಹಾಗೂ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಕಸಾಯಿಖಾನೆ ವಿರುದ್ಧ ಕ್ರಮ ಕೈಗೊಂಡು, ಇಲ್ಲಿನ ಸ್ಥಿತಿ ಸುಧಾರಿಸಬೇಕೆಂದು ಆದೇಶಿಸಿದರು.
ಬ್ರಿಟಿಷ್ ಅಧಿಕಾರಿ ಥ್ಯಾಕರೆ ಅವರ ಸಮಾಧಿ ಬಳಿಯೇ ಜಾನುವಾರುಗಳನ್ನು ಕಟ್ಟಿರುವ ದೃಶ್ಯ ನೋಡಿದ ಡಾ. ಮಿತ್ತಲ್ ಪಾಲಿಕೆ ಅಧಿಕಾರಿಗಳ ಮೇಲೆ ಹರಿಹಾಯ್ದರು. ಜಾಗ ಒತ್ತುವರಿಯಾಗಿದ್ದು, ಈ ಕುರಿತು ಯಾರೂ ಗಮನಿಸಿಲ್ಲವೇ? ಕೂಡಲೇ ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಇಲ್ಲದಿದ್ದರೆ ಕಾನೂನು ಕ್ರಮವನ್ನು ನಾನೇ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು.
ಈ ಸಂದರ್ಭದಲ್ಲಿ ಪಶುವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ. ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ.ಎಲ್. ಬಾಡಗಿ, ಡಾ. ಬೆನ್ನೂರ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಬಿರಾದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.