ಧಾರವಾಡ

ಹಿಂದೂ ಧರ್ಮ ಉಳಿಸಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 22
ಹಿಂದೂ ಧರ್ಮದ ಮೇಲೆ ಶೋಷಣೆ ನಡೆದಾಗಲೆಲ್ಲ ಹಿಂದೂಗಳೆಲ್ಲರೂ ಸಂಘಟಿತರಾಗಿ ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಾಗಬೇಕು ಎಂದು ಕೆಳದಿ ಸಂಸ್ಥಾನದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ನೆಹರು ಮೈದಾನದಲ್ಲಿ ಭಾನುವಾರ ಸಂಜೆ ಹಿಂದೂ ಜನಜಾಗೃತಿ ಸಮಿತಿ ಏರ್ಪಡಿಸಿದ್ದ ಹಿಂದು ಧರ್ಮ ಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಹಿಂದೂ ಧರ್ಮ ಎಂಬುದು ಆಲದ ಮರವಿದ್ದಂತೆ. ಆ ಮರದ ರಂಬೆ-ಕೊಂಬೆಗಳು ಆ ಮತ-ಈ ಮತ ಇದ್ದಂತೆ. ನಾವೆಲ್ಲರೂ ಎಲೆಗಳಾಗಿವೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ದೂರು ಉಳಿದು ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕಿದೆ ಎಂದರು.
ಸಮಿತಿ ವಕ್ತಾರ ಮೋಹನಗೌಡ, ದೇಶದಲ್ಲಿ ವಾಸವಾಗಿರುವ ನೂರು ಕೋಟಿ ಹಿಂದುಗಳೆಲ್ಲರೂ ನೆಮ್ಮದಿ ಹಾಗೂ ಗೌರವಯುತ ಬದುಕು ಸಾಗಿಸಬೇಕಾದರೆ ಧರ್ಮಕ್ರಾಂತಿ ನಡೆಸಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಹಿಂದೂ ಸ್ವರಾಜ್ಯ ಸ್ಥಾಪನೆಗೆ ಧರ್ಮವೀರರು ಬೇಕಾಗಿದ್ದಾರೆ. ಧರ್ಮವೀರರನ್ನು ರೂಪಿಸಲು ಸಮಿತಿ ಸ್ವಸಂರಕ್ಷಣಾ ಪ್ರಶಿಕ್ಷಣ ವರ್ಗ ನಡೆಸುತ್ತಿದೆ. ಹಿಂದೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಈ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿಕೊಂಡರು.
ಧರ್ಮ ನಿಷ್ಠೆ, ದೇಶಪ್ರೇಮ ಇರುವ ಬೆರಳೆಣಿಕೆಯಷ್ಟು ಜನರಿಂದಲೂ ಹಿಂದೂ ಸ್ವರಾಜ್ಯ ಸ್ಥಾಪನೆ ಸಾಧ್ಯ ಎಂದು ಪ್ರತಿಪಾದಿಸಿದ ಅವರು, 2014ರ ಲೋಕಸಭೆ ಚುನಾವಣೆಯಲ್ಲಿ ಧರ್ಮಪ್ರೇಮಿ, ರಾಷ್ಟ್ರಪ್ರೇಮಿ ನಾಯಕತ್ವವಿರುವ ಪಕ್ಷದ ಕೈಯಲ್ಲಿ ಅಧಿಕಾರ ನೀಡಬೇಕಾದ ಮಹತ್ತರ ಜವಾಬ್ದಾರಿ ಹಿಂದೂಗಳ ಮೇಲಿದೆ ಎಂದರು.
ದೇಶದ ಸಂಪತ್ತು ಲೂಟಿ ಮಾಡುವವರು ಯಾವುದೇ ಪಕ್ಷದಲ್ಲಿದ್ದರೂ ಅವರಿಗೆ ಬೆಂಬಲಿಸಬಾರದು. ಯಾವ ಅಭ್ಯರ್ಥಿ, ಪಕ್ಷ ಬಹಿರಂಗವಾಗಿ ಹಿಂದುತ್ವವನ್ನು ಪ್ರತಿಪಾದಿಸುತ್ತದೆಯೋ ಅದೇ ಪಕ್ಷಕ್ಕೆ ನಮ್ಮ ಬೆಂಬಲ ನೀಡಬೇಕು. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುವವರು ಯಾರೇ ಇದ್ದರೂ ಅವರನ್ನು ತೀರಸ್ಕರಿಸಬೇಕು ಎಂದರು.
ರಾಮಮಂದಿರ ವಿಷಯವನ್ನು ಮುಂದಿಟ್ಟುಕೊಂಡು ಅಧಿಕಾರದ ಗದ್ದುಗೆಗೆ ಏರಿ ನಂತರ ಮಂದಿರ ನಿರ್ಮಾಣದ ಸಂಕಲ್ಪ ಮರೆತವರ ಬಗ್ಗೆಯೂ ಜಾಗೃತರಾಗಿರಬೇಕಿದೆ ಎಂದ ಅವರು, ಭರವಸೆಗಳನ್ನು ಕೃತಿಯಲ್ಲಿ ತರುವ ಛಾತಿ ಹೊಂದಿರುವ ಪಕ್ಷ ಹಾಗೂ ನಾಯಕರನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಪ್ರಯತ್ನಿಸಬೇಕಿದೆ ಎಂದರು.
ಸನಾತನ ಸಂಸ್ಥೆ ಮುಖ್ಯಸ್ಥೆ ಸ್ಫೂರ್ತಿ ಬೆನಕನವಾರಿ, ದೇಶದ ಸಾಧು-ಸಂತರ ಮೇಲೆ ನಿರಂತರವಾಗಿ ಅನ್ಯಾಯ ಎಸಗಲಾಗುತ್ತಿದೆ. ಇದು ದೇಶಕ್ಕೆ, ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಅನ್ಯಾಯವಾಗಿದೆ ಎಂದರು.
ಸಂತ ಆಸಾರಾಮ ಬಾಪು ಅವರ ಬಗ್ಗೆ ಇಲ್ಲಸಲ್ಲದ ದೂರುಗಳನ್ನು ದಾಖಲಿಸುವ ಮೂಲಕ ಸಾಧುಗಳೊಂದಿಗೆ ಅಮಾನುಷ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಭಾರತ ದೇಶದಲ್ಲಿ ಹಿಂದೂಗಳನ್ನು ಭಯೋತ್ಪಾದಕರಂತೆ ನೋಡಲಾಗುತ್ತಿದೆ ಎಂದರು.
ಲವ್ ಜಿಹಾದ್, ಮತಾಂತರದಂತಹ ಚಟುವಟಿಕೆ ರಾಜ್ಯಾದ್ಯಂತ ಅವ್ಯಾಹತವಾಗಿ ನಡೆದುಕೊಂಡು ಹೊರಟಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅತಿ ಹೆಚ್ಚು ಸಂಖ್ಯೆಯಲ್ಲಿರುವ ಹಿಂದೂ ಸಮಾಜ ಬಾಂಧವರನ್ನು ಕಡೆಗಣಿಸುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಹಜ್ ಯಾತ್ರಿಗಳಿಗೆ ಸುಮಾರು ರು. 200 ಕೋಟಿ ಸಬ್ಸಿಡಿ ನೀಡುತ್ತಿದೆ. ಆದರೆ, ಅಯ್ಯಪ್ಪ ಮಾಲಾಧಾರಿಗಳಿಗೆ ಯಾವುದೇ ರೀತಿಯ ಸಬ್ಸಿಡಿ ನೀಡುತ್ತಿಲ್ಲ. ಇದು ಯಾವ ರೀತಿಯ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದುತ್ವವನ್ನು ನಿರ್ನಾಮ ಮಾಡುವ ಹುನ್ನಾರ ನಡೆಸಿದೆ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ ಗೋವುಗಳ ಮಾರಣ ಹೋಮ ನಡೆಯುತ್ತಿದೆ ಎಂದು ದೂರಿದರು.
ನ್ಯಾಯವಾದಿ ಚೇತನ ಮನಿರಿಕರ್ ಮಾತನಾಡಿದರು. ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್, ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.