ಧಾರವಾಡ

ಮಹದಾಯಿ ಸೇರಿ ಜಲವಿವಾದದಲ್ಲಿ ರಾಜ್ಯದ ಹಿತಕ್ಕೆ ಸರ್ಕಾರ ಬದ್ಧ: ಸಿಎಂ

Published On :

ಕನ್ನಡಪ್ರಭವಾರ್ತೆ, ಬೆಂಗಳೂರು, ಡಿ. 23
ಮಹದಾಯಿ ಯೋಜನೆ ಸೇರಿದಂತೆ ಎಲ್ಲ ಜಲ ವಿವಾದ ಸಂಬಂಧ ರಾಜ್ಯದ ಹಿತ ಕಾಯಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಹದಾಯಿ ಯೋಜನೆ ಸಂಬಂಧ ಸದನ ಪ್ರಮುಖರ ಜತೆ ನಡೆಸಿದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮವಾರ ಈ ವಿಷಯ ತಿಳಿಸಿದ್ದಾರೆ.
ಮಹದಾಯಿ ಯೋಜನೆ ಸಂಬಂಧ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ನಡುವೆ ವಿವಾದವಿದೆ. ಈ ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾಧಿಕರಣದ ಸದಸ್ಯರು ಈ ಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಡಿಸೆಂಬರ್ 18ರಿಂದ 21ರವರೆಗೆ ರಾಜ್ಯದ ಯೋಜನಾ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಲಾಗಿದೆ ಎಂದರು.
ರಾಜ್ಯದ ಹಿತದೃಷ್ಟಿಯಿಂದ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಹಾಗೂ ರಾಜ್ಯದ ನಿಲುವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಈ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡುವುದಕ್ಕೆ ಸರ್ಕಾರ ಬದ್ಧ. ಮಾತ್ರವಲ್ಲ ಅರಣ್ಯ ಪ್ರದೇಶದಲ್ಲಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಪರವಾನಗಿ ಪಡೆಯಲು ಕೇಂದ್ರ ಸರ್ಕಾರದ ಮನವೊಲಿಸುವ ಪ್ರಯತ್ನವೂ ನಡೆದಿದೆ ಎಂದು ಹೇಳಿದರು.
ಅದೇ ರೀತಿ ಕೃಷ್ಣಾ ವಿವಾದ ಸಂಬಂಧ ಕಾನೂನು ಪಂಡಿತರ ಜತೆ ಚರ್ಚೆ ನಡೆಸಲಾಗುವುದು. ಡಿಸೆಂಬರ್ 16ರಂದು ಈ ಸಂಬಂಧ ದೆಹಲಿಯಲ್ಲಿ ಖ್ಯಾತ ನ್ಯಾಯವಾದಿ ನಾರೀಮನ್ ಹಾಗೂ ಅವರ ತಂಡದ ಜತೆ ಸಭೆ ನಿಯೋಜನೆಗೊಂಡಿತು. ಆದರೆ ಕಾರಣಾಂತರಗಳಿಂದ ಸಭೆ ನಡೆದಿಲ್ಲ. ಹೀಗಾಗಿ ಡಿಸೆಂಬರ್ 24ರಂದು ಸಭೆ ನಡೆಯಲಿದೆ. ಇದಾದ ನಂತರ ಮತ್ತೆ ಸರ್ವಪಕ್ಷಗಳ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್, ಐಟಿಬಿಟಿ ಸಚಿವ ಡಾ.ಎಸ್.ಆರ್.ಪಾಟೀಲ್, ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಕೋನರಡ್ಡಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.