ಧಾರವಾಡ

ರಾಷ್ಟ್ರಕವಿ ನೆನೆದು ಮರುಗಿತು ಮನ

Published On :

ಕಳಚಿತು ನವೋದಯ ಸಾಹಿತ್ಯದ ಕೊನೆ ಕೊಂಡಿ
ಕುವೆಂಪು ಅವರ ಶಿಷ್ಯರ ಪೈಕಿ ನವೋದಯ ಕಾವ್ಯ ಸಾಹಿತ್ಯದ ಕೊನೆ ಕೊಂಡಿ ಜಿ.ಎಸ್. ಶಿವರುದ್ರಪ್ಪನವರು. ಇದೀಗ ಅವರೂ ಕಳಚಿಕೊಂಡಿದ್ದು ಕನ್ನಡದ ಸಾರಸ್ವತ ಲೋಕಕ್ಕೆ ತುಂಬಲಾರದ ಹಾನಿ. ಮೊದಮೊದಲು ಕುವೆಂಪು ಪ್ರಭಾವಿತ ಕಾವ್ಯಗಳನ್ನು ಬರೆಯುತ್ತಿದ್ದ ಜಿ.ಎಸ್. ಶಿವರುದ್ರಪ್ಪ ನಂತರದಲ್ಲಿ ತಮ್ಮದೇ ಹಾದಿ ತುಳಿದು ಪ್ರಗತಿಪರ, ನವ್ಯ, ಬಂಡಾಯ ಹಾಗೂ ಸಮಾಜಮುಖಿ ಧೋರಣೆಗೆ ತೆರೆದುಕೊಂಡರು. ಪ್ರತಿಭೆ, ಪ್ರಾಮಾಣಿಕತೆ ಹಾಗೂ ದಕ್ಷತೆ ಈ ಮೂರು ಒಂದೇ ವ್ಯಕ್ತಿಯಲ್ಲಿರೋದು ಕಷ್ಟ. ಆದರೆ, ಶಿವರುದ್ರಪ್ಪನವರಲ್ಲಿ ಈ ಗುಣಗಳಿದ್ದವು.
ಸಾಮಾನ್ಯವಾಗಿ ಹಿರಿಯ ಸಾಹಿತಿಗಳು ಎನಿಸಿಕೊಂಡವರು ತಮ್ಮಷ್ಟಕ್ಕೆ ತಾವೇ ಇದ್ದು ಬಿಡುತ್ತಾರೆ. ಆದರೆ, ಶಿವರುದ್ರಪ್ಪನವರು ಶಿಕ್ಷಣ ಹಾಗೂ ಸಾಂಸ್ಕೃತಿಕ ಚಳವಳಿಯಲ್ಲಿ ಭಾಗವಹಿಸಿದರು. ಜಾತಿ ವಿರೋಧಿ ಸಮ್ಮೇಳನದಲ್ಲೂ ಮುಂಚೂಣಿಯಲ್ಲಿದ್ದವರು. ಬೆಂಗಳೂರು ವಿವಿ ಕನ್ನಡ ವಿಭಾಗ ಕಟ್ಟಿ ಬೆಳೆಸಿದವರು ಶಿವರುದ್ರಪ್ಪನವರು. ಈ ವಿಭಾಗವನ್ನು ಗಟ್ಟಿಯಾಗಿ ಕಟ್ಟಿ ಅದಕ್ಕೊಂದು ಸ್ವರೂಪ ನೀಡಿದವರು. ವಿದ್ಯಾರ್ಥಿಗಳಿಗೆ ಸಾಹಿತ್ಯದ ಹೊಸ ದಿಕ್ಕು ತೋರಿಸಿದವರು. ವಿಭಾಗದಲ್ಲಿ 8ರಿಂದ 10 ದಿನ ನಿರಂತರವಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳುವ ಮೂಲಕ ಮೊಟ್ಟ ಮೊದಲ ಬಾರಿಗೆ ಭಿನ್ನ ರೀತಿಯ ವಿಷಯಗಳ ಚೆರ್ಚೆ ಆರಂಭಿಸಿದರು. ಸಾಹಿತ್ಯ, ಸಂಸ್ಕೃತಿ ಬಗ್ಗೆ ಎಲ್ಲರಿಗೂ ವಿಶೇಷ ಉತ್ಸಾಹ ಹುಟ್ಟಿಸಿದರು. ಇದೀಗ ಕಳೆದ ವರ್ಷದಿಂದ ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ಎಂಬ ಸಮಾರಂಭ ಹುಟ್ಟಿಕೊಂಡಿದ್ದು, ಶಿವರುದ್ರಪ್ಪನವರು ಕನ್ನಡ ವಿಭಾಗದಲ್ಲಿ ನಡೆಸಿದ್ದ ವಿಭಿನ್ನ ಮಾದರಿಯಲ್ಲಿಯೇ ವಿಷಯಗಳ ಗಂಭೀರ ಚರ್ಚೆಯನ್ನು ಬರುವ ಜನವರಿಯಲ್ಲಿ ನಡೆಯುವ ಸಾಹಿತ್ಯ ಸಂಭ್ರಮದಲ್ಲಿಯೂ ನಡೆಸಲು ತೀರ್ಮಾನಿಸಲಾಗಿದೆ. ವಿಚಾರ ಸಂಕಿರಣಗಳಲ್ಲಿ ಭಾಷಣದ ಸಂಪ್ರದಾಯ ಬದಲಿಸಲಾಗಿದೆ.
ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರು. ಅಲ್ಲದೆ, ಓಡಾಡಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದರು. ಪುಸ್ತಕ ಪ್ರಕಟಣೆ ಮಾಡಿದರು. ಆರು ಸಮಗ್ರ ಸಂಪುಟಗಳನ್ನು ಹೊರ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಮಾರ್ಗದರ್ಶನ ನಾನೂ ಪಡೆದಿದ್ದೇನೆ. ಅವರನ್ನು ಕಳೆದುಕೊಂಡ ಕನ್ನಡ ನಾಡಿಗೆ ತುಂಬಲಾರದ ಹಾನಿ.
- ಗಿರಡ್ಡಿ ಗೋವಿಂದರಾಜ, ಧಾರವಾಡ

ಎಲ್ಲೆಡೆ ಜಿಎಸ್ಸೆಸ್ ಛಾಪು
ಕಳೆದ ವರ್ಷದಿಂದೀಚೆಗೆ ಜಿಎಸ್‌ಎಸ್ ಅವರನ್ನು ಕಾಣಲೇಬೇಕಾಗಿ ಅವರ ಮನೆಗೆ 3-4 ಬಾರಿ ಹೋಗಿದ್ದೆ. ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಮಟ್ಟಕ್ಕೆ ಅವರ ಪ್ರವಾಸ ಕಥನ 'ಗಂಗೆಯ ಶಿಖರಗಳಲ್ಲಿ' ಪಠ್ಯವಾಗಿತ್ತು. ಅದರ ಪ್ರಕಾಶನ-ವಿತರಣೆಯ ಜವಾಬ್ದಾರಿ ಸಾಹಿತ್ಯ ಪ್ರಕಾಶನಕ್ಕೆ ಒದಗಿ ಬಂದಿತ್ತು.
ಧಾರವಾಡದ ಜಿ.ಎಂ. ಹೆಗಡೆ ಅವರ ಸೂಚನೆ ಮೇರೆಗೆ ಜಿಎಸ್‌ಎಸ್ ಅವರನ್ನು ತುಂಬ ಹತ್ತಿರದಿಂದ ಕಾಣುವ, ಮಾತನಾಡುವ ಅವಕಾಶ ಬಂದಿತ್ತು. ಹನ್ನೊಂದು ಗಂಟೆಗೆ ಬನ್ನಿ ಎಂದರೆ ಆ ಹನ್ನೊಂದಕ್ಕೆ ಫ್ರೆಷ್ ಆಗಿ ಕಾಯುತ್ತ ಕುಳಿತಿರುತ್ತಿದ್ದರು. ದೇಹ ತುಂಬ ಬಳಲಿ, ಬೇರೊಬ್ಬರ ಸಹಾಯವಿಲ್ಲದೆ ಓಡಾಡಲು, ಕೂಡಲು ಯಾವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಮಾನಸಿಕವಾಗಿ ತುಂಬ ಚುರುಕಾಗಿ ಇರುತ್ತಿದ್ದರು. ಪುಸ್ತಕ ಪ್ರಕಾಶನಕ್ಕೆ ಸಂಬಂಧಿಸಿದಂತೆ ಅವರು ಆಡಿದ ಒಂದೆರೆಡು ಮಾತುಗಳು ನನಗೆ ನನ್ನ ದೊಡ್ಡಪ್ಪ ಶ್ರೀ ಗೋವಿಂದರಾಯರನ್ನು ನೆನಪಿಗೆ ತಂದಿತ್ತು.
'ಸುಮ್ಮನೆ ಕಾಗದ ವ್ಯರ್ಥ ಮಾಡಬೇಡಿ. ತುಂಬ ಖಾಲಿ ಜಾಗ ಬಿಟ್ಟು ಪುಸ್ತಕವನ್ನು ದಪ್ಪದಾಗಿ ಕಾಣುವಂತೆ ಮಾಡುವುದು ನೀಚ ಕೆಲಸ. ಕಾಗದ ರಾಷ್ಟ್ರೀಯ ಸಂಪತ್ತೆಂಬ ಎಚ್ಚರ ನಮ್ಮಲ್ಲಿ ಯಾವಾಗಲೂ ಇರಬೇಕು' ಇತ್ಯಾದಿ ಮಾತುಗಳು. ಹಾಗೆಯೇ ಅವರು ನಿರೀಕ್ಷಿಸಿದಕ್ಕಿಂತ ಹೆಚ್ಚೇ ಗೌರವಧನ ನೀಡಿದಾಗ 'ಕೈ ಸುಟ್ಟುಕೊಳ್ಳಬೇಡ. ನಷ್ಟವಾಗದ ಹಾಗೆ ರಾಯಲ್ಟಿ ಕೊಟ್ಟರೆ ಸಾಕು.'
ಆ ಪುಸ್ತಕದ ಹಿಂದಿನ ಮುದ್ರಣದಲ್ಲಿದ್ದ ತಪ್ಪುಗಳನ್ನು ತೋರಿಸಿ, 'ಅದು ತಪ್ಪಲ್ಲವೇ? ಈಗಿನ ಮುದ್ರಣದಲ್ಲಿ ಸರಿ ಮಾಡಿದ್ದೇನೆ, ಆಗಬಹುದಲ್ಲವೇ?' ಎಂದು ಕೇಳಿದಾಗ, 'ಧಾರಾಳವಾಗಿ ಮಾಡು' ಎನ್ನುತ್ತ ತಮ್ಮ ವಿದ್ಯಾರ್ಥಿ ಮಿತ್ರ ಪ್ರೊ. ಗಣೇಶ್ ಎಂಬವರಿಗೆ ಪೋನ್ ಮಾಡಿ, 'ಗಣೇಶ್, ಪ್ರೂಫ್‌ನ್ನು ಸರಿಯಾಗಿ ತಿದ್ದೀಪಾ. ತಪ್ಪುಗಳು ಇರಕೂಡದು' ಎಂದು ಸೂಚನೆ ಕೊಟ್ಟಿದ್ದರು.
'ಮತ್ತೆ ಬಾ, ಬೇರೆ ಪುಸ್ತಕಗಳ ಪ್ರಕಾಶನದ ಬಗ್ಗೆ ಹೇಳುತ್ತೇನೆ...' ಎಂದಿದ್ದರು. ಕೆಲಸದ ಒತ್ತಡದಲ್ಲಿ ಅವರ ಅನಾರೋಗ್ಯದ ಕಾರಣಕ್ಕಾಗಿ ಮತ್ತೆ ತೊಂದರೆಕೊಡಕೂಡದೆಂಬ ಎಚ್ಚರದಿಂದಾಗಿ ಹೋಗಿರಲಿಲ್ಲ. ಈಗ ಅವರೇ ಹೋಗಿಬಿಟ್ಟರು. ಅವರೊಬ್ಬ 'ದೊಡ್ಡ ಕವಿ' ಎಂಬುದನ್ನು ನಂಬಿಕೊಂಡು (ಬೇರೇನೇನೊ ಕಲ್ಪಿಸಿಕೊಂಡು ಹೋದಾಗ ದೊಡ್ಡ ದೊಡ್ಡ ಕವಿ, ಲೇಖಕರು ತುಂಬ ಬೇಸರಪಡಿಸಿದ್ದ ಅನುಭವಗಳಿದ್ದವು.) ಜಿಎಸ್‌ಎಸ್ ಮನೆಕಡೆ ಹೆಜ್ಜೆ ಹಾಕಿದ್ದೆ. ಅಷ್ಟಾಗಿ ಅವರನ್ನು ಬಲ್ಲವನಲ್ಲದ ನನಗೆ ಅವರ ಈ ಥರದ ಕಾಳಜಿ, ಎಚ್ಚರ, ಸಂಬಂಧಗಳು ಮೂಕವಿಸ್ಮಿತವಾಗಿಸಿದ್ದವು. ಕವಿ ಹೃದಯದ ಈ ಭಾವಜೀವಿಯಲ್ಲೂ ನಿರಂತರವಾಗಿ ಎಚ್ಚರವಿದ್ದ ಆ ಕಾಳಜಿ, ಸಾಮಾಜಿಕತೆ, ಜವಾಬ್ದಾರಿ, ವ್ಯವಹಾರಿಕತೆಗಳಿಂದಾಗಿ ಜೆಎಸ್‌ಎಸ್ ನಿಭಾಯಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸ್ಥಾನಗಳಲ್ಲಿ ಬಹುಮುಖಿ ಕೆಲಸ ನಿರ್ವಹಿಸಿ, ಎಲ್ಲೆಲ್ಲ ಅವರ ಛಾಪು ಇರಿಸಿ, ಅವುಗಳಿಗೊಂದು ಘನತೆ ತಂದಿತ್ತರು. ಈಗ ಜಿಎಸ್‌ಎಸ್ ಅಂಥವರನ್ನು ಎಲ್ಲಿ ಹುಡುಕೋಣ.
- ಸುಬ್ರಹ್ಮಣ್ಯ, ಸಾಹಿತ್ಯ, ಪ್ರಕಾಶನ, ಹುಬ್ಬಳ್ಳಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.