ಅಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಹುಬ್ಬಳ್ಳಿ: 67ನೇ ವಾರ್ಡಿನಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಯ ನಾಮಪತ್ರಕ್ಕೆ ಬಿ ಫಾರಂ ಸೇರಿಸಲು ಚುನಾವಣಾ ಅಧಿಕಾರಿಗಳು ಭಾನುವಾರವೂ ಕಚೇರಿ ತೆರೆದಿದ್ದಾರೆ ಎಂದು ಇದೇ ವಾರ್ಡ್ನಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಲಕ್ಷ್ಮೀಬಾಯಿ ಜಾಧವ್ ಹಾಗೂ ಅವರ ಬೆಂಬಲಿಗರು ಭಾನುವಾರ ಕೆಲಕಾಲ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿಯಿಂದ ಸ್ಪರ್ಧಿಸಿರುವ ಕವಿತಾ ಸಿಂಗನಹಳ್ಳಿ ಶನಿವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿ ಫಾರಂ ಸಲ್ಲಿಸಿರಲಿಲ್ಲ. ಭಾನುವಾರ ಅವರಿಗೆ ಬಿ ಫಾರಂ ಲಭಿಸಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಭಾನುವಾರ ನಾಮಪತ್ರಕ್ಕೆ ಬಿ ಫಾರಂನ್ನು ಸೇರಿಸಲು ಅಧಿಕಾರಿಗಳು ಭಾನುವಾರವೂ ಕಾರ್ಯ ನಿರ್ವಹಿಸಲು ಆಗಮಿಸಿದ್ದಾರೆ ಎಂದು ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ಒಟ್ಟು 8 ಚುನಾವಣಾ ಕಚೇರಿಗಳನ್ನು ರಚಿಸಲಾಗಿದ್ದು, ಈ ಪೈಕಿ 64 ರಿಂದ 67ನೇ ವಾರ್ಡ್ನ್ನೊಳಗೊಂಡಿರುವ ಕಚೇರಿ ಸಂಖ್ಯೆ ನಂ. 8 ಭಾನುವಾರವೂ ತೆರೆದಿದ್ದನ್ನು ಕಂಡು ಸಂಶಯಗೊಂಡು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ತೆರಳಿದ್ದರು. ಬಿಜೆಪಿ ಅಭ್ಯರ್ಥಿ ಸಿಂಗನಹಳ್ಳಿ ಅವರ ಬಿ ಫಾರಂ ಅನ್ನು ನಾಮಪತ್ರದೊಂದಿಗೆ ಜೋಡಿಸುವ ಉದ್ದೇಶದಿಂದಲೇ ಚುನಾವಣಾ ಅಧಿಕಾರಿ ಸೇರಿದಂತೆ ಸಿಬ್ಬಂದಿ ಆಗಮಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದರಿಂದಾಗಿ ಪಾಲಿಕೆ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಚುನಾವಣಾಧಿಕಾರಿ ಮಾಲತೇಶ ಜೀವಣ್ಣವರ ಮಾತನಾಡಿ, ನಾಳೆ (ಫೆ. 25) ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು, ಅದರ ಪೂರ್ವಭಾವಿ ಸಿದ್ಧತೆಗಾಗಿ ತಾವು ಹಾಗೂ ಸಿಬ್ಬಂದಿ ಭಾನುವಾರ ಕಚೇರಿಗೆ ಆಗಮಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ, ಕಚೇರಿ ನಂ. 8ನ್ನು ಮಾತ್ರ ತೆರೆದು ತಾವು ಸಿದ್ಧತೆ ಮಾಡಿಕೊಂಡಿಲ್ಲ. 1 ರಿಂದ 8 ಕಚೇರಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಸದಸ್ಯರ ಬಿ ಫಾರ್ಮಂನ್ನು ನಾಮಪತ್ರದೊಂದಿಗೆ ಸೇರಿಸಲು ತಾವು ಬಂದಿದ್ದೇವೆ ಎಂಬ ಕಾಂಗ್ರೆಸ್ ಸದಸ್ಯರ ಆರೋಪದಲ್ಲಿ ಹುರುಳಿಲ್ಲ ಎಂದರು. ನಾಮಪತ್ರಗಳ ಪರಿಶೀಲನೆಯ ಮುನ್ನಾದಿನವೇ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳೇ ತಮಗೆ ಆದೇಶ ನೀಡಿದ್ದರಿಂದ ಭಾನುವಾರ ಕಚೇರಿ ತೆರೆದು ಕೆಲಸ ನಿರ್ವಹಿಸಲಾಗಿದೆ ಎಂದೂ ಅವರು ತಿಳಿಸಿದರು. ನಂತರ, ಸ್ಥಳಕ್ಕೆ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಹಾಗೂ ಉಪನಗರ ಠಾಣೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪಾಲಿಕೆ ಮಾಜಿ ಸದಸ್ಯ ಯಮನೂರು ಜಾಧವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

