ಬಾಲಾಪರಾಧಕ್ಕೆ ಮನೆ, ವಾತಾವರಣವೇ ಕಾರಣ
ಧಾರವಾಡ: ಬಾಲಾಪರಾಧಗಳ ಬಹುತೇಕ ಪ್ರಕರಣಗಳಲ್ಲಿ ಮನೆ, ಸಮಾಜದ ವಾತಾವರಣ ಬಹುವಾಗಿ ಪ್ರಭಾವ ಬೀರಿದ್ದು, ಈ ಹಿನ್ನೆಲೆಯಲ್ಲಿ ಸಮಾಜದ ಆಚಾರ - ವಿಚಾರಗಳ ಸಮಗ್ರ ಬದಲಾವಣೆ, ಜಾಗೃತಿ ಹಾಗೂ ಜವಾಬ್ದಾರಿಗಳು ಬಾಲಾಪರಾಧಗಳು ಕಡಿಮೆಯಾಗಲು ಮುಖ್ಯ ಅಂಶವೆಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹಾಗೂ ನ್ಯಾಯಮೂರ್ತಿ ವಿಶ್ವನಾಥ ಅಂಗಡಿ ಇಲ್ಲಿ ಅಭಿಪ್ರಾಯಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಮಗ್ರ ರಕ್ಷಣಾ ಸಂಸ್ಥೆ, ಜಿಲ್ಲಾ ಕಾನೂನು ನೆರವು ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಂಟಿಯಾಗಿ ಇಲ್ಲಿನ ಜಿಪಂ ಸಭಾಭವನದಲ್ಲಿ ಭಾನುವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಬಾಲನ್ಯಾಯ ಕಾಯ್ದೆ ಕುರಿತ ಸಂವೇದನಾ ಹಾಗೂ ಪುನರ್ ಮನನ ಕಾರ್ಯಾಗಾರದಲ್ಲಿ ಅವರು ಮಾತನಾಡಿರು.
ಬಾಲಾಪರಾಧಿಗಳ ನ್ಯಾಯವಿಚಾರಣೆ ಕುರಿತ ಸಮಿತಿಯ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಜಿ. ರಮೇಶ ಸಮಾರಂಭ ಉದ್ಘಾಟಿಸಿ, ಅಪರಾಧಿ ಮಕ್ಕಳ ವಿಚಾರಣೆ ಮಾಡುವ ಸಂದರ್ಭದಲ್ಲಿ ಅವರ ಮನಸ್ಥಿತಿ, ಅಪರಾಧ ಎಂತಹದು ಎನ್ನುವ ಅಂಶಗಳ ಕುರಿತು ಸಮಗ್ರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಕ್ಕಳ ಮೇಲೆ ವಿಶೇಷವಾಗಿ ತಂದೆ ತಾಯಿ, ಪಾಲಕರು, ಶಿಕ್ಷಕರು ಹಾಗೂ ಸುತ್ತಲಿನ ವಾತಾವರಣಗಳು ಅವರ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಸಮಾಜದ ಎಲ್ಲ ವರ್ಗದ ಮಕ್ಕಳ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲು ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಇನ್ನೋರ್ವ ನ್ಯಾಯಮೂರ್ತಿ ಬಿ.ಎಸ್. ಇಂದ್ರಕಲಾ ಮಾತನಾಡಿ, ಬಾಲಾಪರಾಧಕ್ಕೆ ಶಿಕ್ಷೆ ಆದ ಮಕ್ಕಳಲ್ಲಿ ಧನಾತ್ಮಕ ಹಾಗೂ ಆರೋಗ್ಯಕರ ಬದಲಾವಣೆ ತಂದು ಅವರನ್ನು ಪುನಃ ಸಮಾಜದ ಗೌರವಯುತ ಪ್ರಜೆಯನ್ನಾಗಿಸುವುದೇ ಬಾಲನ್ಯಾಯ ಕಾಯ್ದೆ. ಅವರಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ವೃತ್ತಿಪರ ಮಾಹಿತಿ ಹಾಗೂ ತರಬೇತಿ ನೀಡುವುದಕ್ಕೆ ಬಾಲ ಕಾರಾಗೃಹಗಳಲ್ಲಿ ಆದ್ಯತೆ ನೀಡಬೇಕಿದೆ ಎಂದರು. ದೆಹಲಿಯ ಅತ್ಯಾಚಾರ ಪ್ರಕರಣದಲ್ಲಿ ಬಾಲಾಪರಾಧಿಯು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅಪರಾಧದ ಗಂಭೀರತೆಯಿಂದಾಗಿ ಈ ಕಾಯ್ದೆಯನ್ನು ಅವನಿಗೆ ಅನ್ವಯಿಸಯವ ಕುರಿತು ಪರ ಹಾಗೂ ವಿರೋಧ ವಾದ ಆರಂಭವಾಗಿದೆ. ಆದರೆ ಒಟ್ಟಾರೆ ಇಡೀ ಪ್ರಕರಣವೇ ಸಮಾಜಕ್ಕೆ ನಾಚಿಕೆಗೇಡು ಎನ್ನುವ ಅಂಶ ಮರೆಯಾಗುತ್ತಿದ್ದು, ಸಮಾಜವಿಂದು ಈ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.
ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕೆ. ನಟರಾಜನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ. ಉಷಾ, ನ್ಯಾಯಾಧೀಶ ಸಿ. ರಾಜಶೇಖರ್, ರಾಣಿ ಚನ್ನಮ್ಮ ವಿವಿ ಕ್ರಿಮಿನಾಲಜಿ ವಿಭಾಗದ ನಿರ್ದೇಶಕ ಡಾ. ಎಸ್.ಎಂ. ಜಾಮದಾರ, ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಜಿಪಂ ಸಿಇಓ ಪಿ.ಎ. ಮೇಘಣ್ಣವರ, ವಿ.ಡಿ. ಕಾಮರೆಡ್ಡಿ, ಡಾ. ಆನಂದ ಪಾಂಡುರಂಗಿ, ಡಾ. ಸಿ.ಎಸ್. ಪಾಟೀಲ, ಶಶಿಕಲಾ ಶೆಟ್ಟಿ, ಬಿ.ಎಸ್. ಸಂಗಟಿ, ಪ್ರಫುಲ್ಲಾ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ತ್ರಿಶಲಾ ಅಪ್ಪಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

