ವಿಮರ್ಶೆ ಹೊಸಕಿ ಹಾಕುವ ಕೆಲಸ ನಡೆಯುತ್ತಿದೆ
ಕನ್ನಪ್ರಭ ವಾರ್ತೆ, ಧಾರವಾಡ, ಜ. 27
ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮ, ರಾಜಕೀಯ ಮತ್ತು ಬಂಡವಾಳ ಶಾಹಿಗಳು ಅಧಿಕಾರ ಕೇಂದ್ರಗಳಾಗಿ ವಿಮರ್ಶೆಯನ್ನು ಹೊಸಕಿ ಹಾಕುವ ವ್ಯವಸ್ಥಿತ ಸಂಚು ರೂಪಿಸಿವೆ. ಹೀಗಾಗಿ ವಿಮರ್ಶೆ ಇಂದು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಧಾರವಾಡ ಸಾಹಿತ್ಯ ಸಂಭ್ರಮದ ಕೊನೆಯ ದಿನದಂದು ನಡೆದ ಕನ್ನಡ ವಿಮರ್ಶೆಯ ಸಂಕೀರ್ಣತೆ-ಜಟಿಲತೆ ಕುರಿತ 13ನೇ ಗೋಷ್ಠಿಯಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.
ವಿಮರ್ಶೆಯ ಆಳ, ಅಗಲ ಬಹು ವಿಸ್ತಾರವಾದುದು, ವಿಮರ್ಶೆಗೆ ನಿರ್ದಿಷ್ಟವಾದ ಮತ್ತು ಸೀಮಿತವಾದ ಚೌಕಟ್ಟು ಎಂಬುದೇ ಇಲ್ಲ. ಸಾಮಾಜಿಕ ವ್ಯವಸ್ಥೆಯ ಎಲ್ಲ ಕ್ಷೇತ್ರಗಳನ್ನು ಸಮರ್ಪಕವಾಗಿ ವಿವಿಧ ಮಜಲುಗಳಲ್ಲಿ ವಿಮರ್ಶೆ ಮಾಡಬೇಕು. ಆದರೆ ಇಂದು ವಿಮರ್ಶೆ ಸಾಹಿತ್ಯದ ಭಾಗಗಳಾಗಿರುವ ಕವನ, ಕಥೆ, ಕಾದಂಬರಿ, ಕವಿತೆಗಳಿಗೆ ಮಾತ್ರ ಸೀಮಿತಗೊಂಡಿರುವುದಕ್ಕೆ ಪರೋಕ್ಷವಾಗಿ ಆ ಮೂರು ಸಾಂಸ್ಥಿಕ ಅಧಿಕಾರ ಕೇಂದ್ರಗಳೇ ಕಾರಣ. ವಿಮರ್ಶೆಯನ್ನು ಒಂದು ನಿರ್ದಿಷ್ಟ ಪರಿಧಿಯಲ್ಲಿಡುವ ಪ್ರಯತ್ನ ನಡೆಯುತ್ತಿದೆ. ಸಾಹಿತ್ಯ ಎನ್ನುವುದು ಸಾಂಸ್ಥಿಕ (ಧರ್ಮ, ರಾಜಕೀಯ) ರೂಪವನ್ನು ಮೊದಲಿನಿಂದಲೂ ವಿರೋಧಿಸಿದೆ. ಅದನ್ನು ನಾವುಗಳು ವಚನಕಾರರ ವಚನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಆದರೆ ಇಂದು ಸಾಹಿತ್ಯ, ಸಾಹಿತಿಗಳು ಸಾಂಸ್ಥಿಕ ವ್ಯವಸ್ಥೆಯನ್ನು ವಿರೋಧಿಸದೇ ಅದರೊಂದಿಗೆ ಹೊಂದಾಣಿಕೆ ಅಥವಾ ಅದರತ್ತ ಗಮನ ಹರಿಸದಿರುವುದು ನಡೆದಿದೆ ಎಂಬ ಭಾವ ಭಾಸವಾಗುತ್ತಿದೆ. ಇದು ಸಾಹಿತ್ಯ, ವಿಮರ್ಶೆಯ ಲಕ್ಷಣವಲ್ಲ ಎಂದರು.
ವಿಮರ್ಶೆ ಚಿಂತನೆ ಮಾರ್ಗ: ವಿಮರ್ಶೆ, ವಿಮರ್ಶಕ ಕೇವಲ ಸಾಹಿತ್ಯಕ್ಕೆ ಸಂಬಂಧಿಸಿಲ್ಲ. ಆದರೆ ಸಾಹಿತ್ಯ ಚಿಂತನೆಯ ಮಾರ್ಗವಾಗಿದೆ. ವಿಮರ್ಶೆ ತನ್ನ ಸೃಜನಶೀಲತೆಯಿಂದ ಸೂಕ್ಷ್ಮಜಗತ್ತನ್ನು ಜನತೆಗೆ ತೋರಿಸುತ್ತದೆ. ಯಾವುದೇ ವ್ಯವಸ್ಥೆಯಲ್ಲಿನ ಆಗು ಹೋಗುಗಳನ್ನು, ಸಾಧ್ಯಾಸಾಧ್ಯತೆಗಳನ್ನು ಕಟುವಾಗಿ, ವಿಮರ್ಶಾತ್ಮಕವಾಗಿ ವಿಡಂಬನೆ ಮಾಡಲಾಗುತ್ತದೆ. ಆ ಮೂಲಕ ವ್ಯವಸ್ಥೆಯ ಮೂಲವನ್ನು ಪ್ರಶ್ನಿಸಿ ಸಮರ್ಪಕ ಉತ್ತರ ಪಡೆಯುವ ಏಕೈಕ ಮಾರ್ಗ ವಿಮರ್ಶೆ. ಆದರೆ ಇಂದು ಆ ಕೆಲಸ ವಿಮರ್ಶೆ ಮತ್ತು ವಿಮರ್ಶಕನಿಂದ ಆಗದಿರುವುದೇ ದುರಂತ. ಸಾಮಾನ್ಯನೂ ಪ್ರತಿಯೊಂದು ವ್ಯವಸ್ಥೆ ಕುರಿತು ವಿಮರ್ಶೆ ಮಾಡಬೇಕು. ಯಾವುದೇ ವಾದವನ್ನು ಅಥವಾ ವ್ಯವಸ್ಥೆಯನ್ನು ಸರಳವಾಗಿ ಒಪ್ಪಿಕೊಳ್ಳಬಾರದು. ಅದನ್ನು ಪ್ರಶ್ನೆ, ವಿಮರ್ಶೆ ಮಾಡಿ ಅದರ ನಿಜವಾದ ಹಿತಾಸಕ್ತಿಯನ್ನು ಅರಿತು ಅದು ಸರಿ ಅನಿಸಿದಾಗ ಮಾತ್ರ ಸ್ವೀಕರಿಸಬೇಕೆ ವಿನಃ ಮೌನವಹಿಸುವುದು ತರವಲ್ಲ ಎಂದರು.
ಕಲಾತ್ಮಕ ಸಿನಿಮಾಕ್ಕೆ ಅವಕಾಶವಿಲ್ಲ: ಗಿರೀಶ್ ಕಾಸವಳ್ಳಿಯಂತಹ ಉತ್ತಮ ನಿರ್ದೇಶಕರ ನಿರ್ದೇಶನದ ಕಲಾತ್ಮಕ ಚಲನಚಿತ್ರಗಳು ರಾಜ್ಯದ ಒಂದೇ ಒಂದು ಚಿತ್ರಮಂದಿರದಲ್ಲಿ ತೆರೆಕಂಡು ಜನತೆ ನೋಡುವ ಅವಕಾಶವನ್ನೇ ಇಂದಿನ ವ್ಯವಸ್ಥೆ ಕಸಿದುಕೊಂಡಿದೆ. ಅಂತಹ ಸಂದರ್ಭವನ್ನು ಸಾಂಸ್ಥಿಕತೆ ಎಂಬುದು ವ್ಯವಸ್ಥಿತವಾಗಿ ನಿರ್ಮಾಣ ಮಾಡುತ್ತಿದೆ. ಇಲ್ಲಿನ ಬಂಡವಾಳಶಾಹಿಗಳು ಆ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ವಿಮರ್ಶೆ ಒಪ್ಪಿಕೊಳ್ಳಲಿ: ದಲಿತ ಸಾಹಿತ್ಯದ ವಿಮರ್ಶೆಗೆ ಮಾನದಂಡಗಳೇನು? ಎಂಬ ಪ್ರಶ್ನೆಗೆ ಉತ್ತರಿಸಿದ ವಿಮರ್ಶಕ ರಾಜೇಂದ್ರ ಚಿನ್ನಿ, ಮೂಲತಃ ದಲಿತ ಹಾಗೂ ಮುಸ್ಲಿಂಪರ ಬರಹಗಾರರು ವಿಮರ್ಶೆಯನ್ನು ಇದುವರೆಗೆ ಒಪ್ಪಿಕೊಂಡಿಲ್ಲ. ಹೀಗಾಗಿ ಅದಕ್ಕೆ ಮಾನದಂಡ ಎನ್ನುವ ಪ್ರಶ್ನೆ ಉದ್ಭವಿಸದು ಎಂದರು. ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ ಮೊದಲಿನಿಂದಲೂ ತಮ್ಮನ್ನು ದೂರ ತಳ್ಳಿವೆ ಎಂದೇ ದಲಿತ, ಮುಸ್ಲಿಂಪರ ಬರಹಗಾರರು ತಿಳಿದುಕೊಂಡಿದ್ದಾರೆ. ಅಲ್ಲದೇ ಅದೇ ಮನೋಭಾವದಿಂದ ತಮ್ಮ ಬರಹಗಳನ್ನು ಮಂಡಿಸಿದ್ದಾರೆ. ಅವರು ಮೊದಲು ವಿಮರ್ಶೆಯನ್ನು ಒಪ್ಪಿಕೊಳ್ಳಬೇಕು. ವಿಮರ್ಶೆ ಹೊಸದನ್ನೆ ನೀಡುತ್ತದೆ. ಯಾವುದೇ ಕ್ಷೇತ್ರದ ಕುರಿತ ವಿಮರ್ಶೆಯಲ್ಲಿ ನಿಜವಾದ ತಿರುಳು, ಸತ್ಯ ಕಾಣಲು ಸಾಧ್ಯ ಎಂದರು.
ಮತ್ತೊಬ್ಬ ವಿಮರ್ಶಕ ವಿಕ್ರಮ್ ವಿಸಾಜಿ ವಿಮರ್ಶೆಯ ಸಂಕೀರ್ಣತೆ- ಜಟಿಲತೆ ಕುರಿತು ವಿಷಯ ಮಂಡಿಸಿದರು. ಎಂ.ಜಿ. ಹೆಗಡೆ ಕಾರ್ಯಕ್ರಮದ ನಿರೂಪಕರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

