ಮೊಬೈಲ್ ಐಎಂಇಐ ಬದಲಿಸುವ ಭೂಪರು...!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 4
ನಿಮ್ಮ ಬೆಲೆ ಬಾಳುವ ಮೊಬೈಲ್ ಕಳ್ಳತನವಾಗಿದೆಯಾ? ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೀರಾ? ಕಳೆದು ಹೋಗಿರುವ ಮೊಬೈಲ್ನ ಐಎಂಇಐ ನಂಬರ್ನಿಂದ ಪೊಲೀಸರು ಮೊಬೈಲ್ನ್ನು ಪತ್ತೆ ಹಚ್ಚಿಕೊಡುತ್ತಾರೆಂದು ನೀವು ನಿಶ್ಚಿಂತರಾಗಿದ್ದೀರಾ? ಹಾಗಿದ್ದರೆ ಇಲ್ಲಿ ಗಮನ ಹರಿಸಿ, ಕದ್ದ ಮೊಬೈಲ್ನ ಐಎಂಇಐ ನಂಬರನ್ನೇ ಬದಲಿಸುವ ನಿಷ್ಣಾತ ಭೂಪರೂ ಇದ್ದಾರೆ. ಹೀಗಾದ್ದಾಗ ಕಳೆದು ಹೋದ ನಿಮ್ಮ ದುಬಾರಿ ಮೊಬೈಲ್ ಸಿಗುವುದು ಕಷ್ಟಸಾಧ್ಯ.
ಹೌದು..., ಇಂಥ ಬೆಚ್ಚಿ ಬೀಳಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಮೊಬೈಲ್ ಐಎಂಇಐ ನಂಬರನ್ನೇ ಬದಲಿಸುವ ವ್ಯವಸ್ಥಿತ ಜಾಲ ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯದವರೂ ಮೊಬೈಲ್ ಐಎಂಇಐ ನಂಬರ್ ಬದಲಿಸಿಕೊಂಡು ಹೋಗಲು ಹುಬ್ಬಳ್ಳಿಗೆ ಬರುತ್ತಿದ್ದಾರೆಂಬುದು ಅರಗಿಸಿಕೊಳ್ಳಲಾಗದವಿಷಯ.
ಏನಿದು ಐಎಂಇಐ ನಂಬರ್?: ಯಾವುದೇ ಮೊಬೈಲ್ ಖರೀದಿಸಿದರೆ ಅದಕ್ಕೆ ಐಎಂಇಐ ನಂಬರ್ ಇದ್ದೇ ಇರುತ್ತದೆ. ಒಂದು ಪ್ರಸಂಗದಲ್ಲಿ ಮೊಬೈಲ್ ಕಳೆದು ಹೋಗಿದ್ದರೆ ಪೊಲೀಸರಿಗೆ ದೂರು ನೀಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್ನ ಐಎಂಇಐ ನಂಬರ್ ದಾಖಲಿಸಲು ಪೊಲೀಸರು ಸೂಚಿಸುತ್ತಾರೆ. ದೂರಿನಲ್ಲಿ ನಮೂದಿಸಿರುವ ಮೊಬೈಲ್ ಐಎಂಇಐ ನಂಬರನ್ನು ಮೊಬೈಲ್ ಕಂಪನಿಗೆ ರವಾನಿಸಲಾಗುತ್ತದೆ. ಕಂಪನಿಯಲ್ಲಿ ವಿಶೇಷ ಸಾಫ್ಟ್ವೇರ್ನಿಂದಾಗಿ ಕಳೆದು ಹೋಗಿರುವ ಮೊಬೈಲ್ ಆನ್ ಮಾಡಿದ ಕೂಡಲೇ ಆ ಮೊಬೈಲ್ಗೆ ಯಾವ ಸಿಮ್ ಬಳಸಲಾಗಿದೆ, ಅದು ಯಾರ ಹೆಸರಲ್ಲಿದೆ ಮತ್ತು ಮೊಬೈಲ್ ಬಳಸಲಾಗುತ್ತಿರುವ ಸ್ಥಳದ ಮಾಹಿತಿ ಲಭ್ಯವಾಗುತ್ತದೆ. ಬಳಿಕ ಕಂಪನಿಯವರು ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸುತ್ತಾರೆ. ತನ್ಮೂಲಕ ಮೊಬೈಲ್ ಕದ್ದ ಕಳ್ಳರು ಪೊಲೀಸರ ಪಾಲಾಗುತ್ತಾರೆ.
ನಂಬರನ್ನೇ ಬದಲಾಯಿಸುತ್ತಾರೆ: ಪೊಲೀಸರು ಹೇಳುವ ಪ್ರಕಾರ ಐಎಂಇಐ ನಂಬರ್ನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಹುಬ್ಬಳ್ಳಿ ಹಾಗೂ ಹೈದ್ರಾಬಾದನಲ್ಲಿರುವ ವ್ಯವಸ್ಥಿತ ಜಾಲ ಐಎಂಇಐ ನಂಬರನ್ನೇ ಬದಲಾಯಿಸುವಷ್ಟು ತಾಂತ್ರಿಕ ಜ್ಞಾನ ಹೊಂದಿದೆ.
ಕದ್ದ ಮೊಬೈಲ್ನ ಐಎಂಇಐ ನಂಬರ್ ಬದಲಾಯಿಸುವ ವೇಳೆ ಇವರು, ಮೊದಲು ಮೊಬೈಲ್ನ ಕಾರ್ಯ ವೈಖರಿಯ ಪ್ರತಿಯೊಂದು ಮಾಹಿತಿಯನ್ನು ಇಂಟರ್ನೆಟ್ ಮುಖಾಂತರ ತಿಳಿದುಕೊಳ್ಳುತ್ತಾರೆ. ಆ ನಂತರ ಮೊಬೈಲ್ನ್ನು ತಮ್ಮ ಬಳಿ ಇರುವ 'ಸಾಫ್ಟ್ವೇರ್ ಸೆಟ್ಅಫ್ ಬಾಕ್ಸ್'ಗೆ ಅಳವಡಿಸಿ ಮತ್ತಷ್ಟು ಸೂಕ್ಷ್ಮ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತಾರಲ್ಲದೇ ಹಾಲಿ ಇರುವ ಐಎಂಇಐ ನಂಬರ್ನ್ನು ರಿಫ್ರೆಶ್ ಮಾಡುತ್ತಾರೆ. ಬಳಿಕ ಮೊಬೈಲ್ನ್ನು ತಾವೇ ಸಿದ್ಧ ಪಡಿಸಿಕೊಂಡಿರುವ 'ಹಾರ್ಡ್ವೇರ್ ಪ್ರೊಫೆಶನಲ್ ಟೂಲ್ ಬಾಕ್ಸ್'ವೊಂದಕ್ಕೆ ಅಳವಡಿಸಿ ರೂಟ್ಫೈಲ್ನಲ್ಲಿ ಎಂಟರ್ ಆಗುತ್ತಾರೆ. ಜಿಪ್ಫೋನ್ ಟೂಲ್, ಚೆಕ್ ಐಎಂಇಐ, 2ಟಿವೆರ್ ವಾಲ್ಯೂಮ್ನಂತಹ ಸಾಫ್ಟವೇರ್ ಮೂಲಕ ಐಎಂಇಐ ನಂಬರ್ನ ಕೊನೆಯ ಎರಡು ಅಥವಾ ಮೂರು ನಂಬರನ್ನು ಬದಲಾಯಿಸಿ ರಿಆ್ಯಕ್ಟಿವೇಟ್ ಮಾಡುತ್ತಾರೆ. ಹಳೆಯ ಮೊಬೈಲ್ನಲ್ಲಿರುವ ಐಎಂಇಐ ನಂಬರ್ ಬದಲಾಗಿ ಅದಕ್ಕೆ ಹೊಸ ನಂಬರ್ ಸಿಗುತ್ತದೆ. ಹೀಗಾದಾಗ ಪೊಲೀಸರು ಐಎಂಇಐ ನಂಬರ್ ಮೂಲಕ ಏನೇ ಕಸರತ್ತು ಮಾಡಿದರೂ ಮೊಬೈಲ್ ಕಳ್ಳರನ್ನು ಬಂಧಿಸಲು ಸಾಧ್ಯವಾಗುವುದಿಲ್ಲ.
ಕಂಪನಿಯಿಂದಲೇ ಹ್ಯಾಕ್: ಮೊಬೈಲ್ ಕಂಪನಿಯಲ್ಲಿ ಮೊಬೈಲ್ಗೆ ಐಎಂಇಐ ನಂಬರ್ ನೀಡುವ ವಿಧಾನವನ್ನು ಐಎಂಇಐ ನಂಬರ್ ಬದಲಾಯಿಸುವವರು ಹ್ಯಾಕ್ ಮಾಡುತ್ತಿದ್ದಾರೆ. ಕಂಪನಿ ಕೆಲಸ ಮಾಡುತ್ತಿರುವವರು ಹಾಗೂ ಕಂಪನಿಯಿಂದ ಕೆಲಸ ತ್ಯಜಿಸಿ ಬಂದವರು ಇಂಥ ದಂಧೆ ಮಾಡುತ್ತಿರುವವರಿಗೆ ಸಾಥ್ ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಐಎಂಇಐ ನಂಬರ್ ಬದಲಾಯಿಸುವ ದಂಧೆಗೆ ಹೈದ್ರಾಬಾದ್ನಲ್ಲಿರುವ ವ್ಯಕ್ತಿ ಮೇನ್ಮೈಂಡ್. ಆತ ಹುಬ್ಬಳ್ಳಿಯಲ್ಲಿ ತನ್ನ ಕೆಲ ಹುಡುಗರನ್ನು ಇಟ್ಟುಕೊಂಡು ಈ ದಂಧೆ ಮಾಡಿಸುತ್ತಿದ್ದಾನೆ.
ರಾಜ್ಯ-ಹೊರ ರಾಜ್ಯದ ಗ್ರಾಹಕರು: ಐಎಂಇಐ ನಂಬರ್ ಬದಲಾಯಿಸಿಕೊಂಡು ಹೋಗಲು ಹುಬ್ಬಳ್ಳಿಗೆ ರಾಜ್ಯ, ಹೊರ ರಾಜ್ಯದಿಂದ ಕಳ್ಳರು ಬರುತ್ತಿದ್ದಾರೆ. ಪ್ರಮುಖವಾಗಿ ಬೆಂಗಳೂರು, ಮಂಗಳೂರು, ಮುಂಬೈ, ಹೈದ್ರಾಬಾದ್ ಕಳ್ಳರೂ ಇಲ್ಲಿನ ಹೆಚ್ಚಿನ ಗ್ರಾಹಕರು. ಮೊಬೈಲ್ವೊಂದರ ಐಎಂಇಐ ನಂಬರ್ ಬದಲಾಯಿಸಲು ರು. 3ರಿಂದ 4 ಸಾವಿರದವರೆಗೆ ಇವರು ಚಾರ್ಚ್ ಮಾಡುತ್ತಾರೆ. ನಂಬರ್ ಬದಲಾಯಿಸಲು ಕನಿಷ್ಠವೆಂದರೂ ಎರಡು ದಿನ ತಗಲುತ್ತದೆ.
ಈ ರೀತಿಯಾಗಿ ಮೊಬೈಲ್ ಐಎಂಇಐ ನಂಬರ್ ಬದಲಾಗುತ್ತಿರುವುದರಿಂದ ಕಳ್ಳತನವಾಗಿರುವ ಮೊಬೈಲ್ ಪತ್ತೆ ಹಚ್ಚುವುದು ಪೊಲೀಸರಿಗೆ ಅಸಾಧ್ಯವಾಗಿದೆ.
ಹು-ಧಾದಲ್ಲಿ ವರ್ಷದಿಂದೀಚೆಗೆ ಕಳ್ಳತನವಾದ ಮೊಬೈಲ್ ಪತ್ತೆಯಾದ ಉದಾಹರಣೆಯೇ ಇಲ್ಲ. ಸಮಾಜ ಘಾತುಕ ಶಕ್ತಿಗಳು ಈ ರೀತಿಯಾಗಿ ಐಎಂಇಐ ನಂಬರ್ ಬದಲಾಯಿಸಿ ಕುಕೃತ್ಯ ನಡೆಸುವ ಮುನ್ನ ಪೊಲೀಸರು ಈ ಜಾಲ ಭೇದಿಸಬೇಕಿದೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

