ಲಿಡಕರ್ ಕಾಲನಿಗೆ ಸಚಿವ ಲಾಡ್ ಭೇಟಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 8
ನಗರ ಗೋಕುಲ ರಸ್ತೆಯಲ್ಲಿನ ಸಣ್ಣ ಕೈಗಾರಿಕೆಗಳ ವಸಾಹತು ಪ್ರದೇಶದಲ್ಲಿನ ಲಿಡಕರ್ ಕಾಲೋನಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಬೆಳಗ್ಗೆ ದಿಢೀರನೇ ಭೇಟಿ ನೀಡಿದರು.
25 ವರ್ಷಗಳಿಂದ ಇಲ್ಲಿ ವಾಸವಾಗಿರುವ ನಿವಾಸಿಗಳು ಸಚಿವ ಲಾಡ್ ಬಳಿ, ತಮಗೆ ನೀಡಲಾಗಿರುವ ವಾಸಸ್ಥಾನದ ಕಟ್ಟಡದ ಹಣ ಹಾಗೂ ಇತರೆ ಕರ ಲಿಡಕರ್ ಸಂಸ್ಥೆಯು ಭರಿಸಿಕೊಂಡಿದ್ದು, ಜಾಗೆಯ ಹಕ್ಕು ಪತ್ರವನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
1983ರಲ್ಲಿ ಕೆಎಸ್ಎಸ್ಐಡಿಸಿ ನಿಗಮವು ಗೋಕುಲ ರಸ್ತೆಯಲ್ಲಿ ಅಭಿವೃದ್ಧಿ ಪಡಿಸಿದ ಕೈಗಾರಿಕಾ ವಸಾಹತುವಿನ 3 ಎಕರೆ ಪ್ರದೇಶದಲ್ಲಿ 24 ಚರ್ಮಗಾರಿಕೆ ಶೆಡ್ಗಳನ್ನು ನಿರ್ಮಿಸಿ ಲಿಡಕರ್ ನಿಗಮಕ್ಕೆ ನೀಡಿತ್ತು. ಲಿಡಕರ್ ಸಂಸ್ಥೆಯು ಚರ್ಮಗಾರಿಕೆ ಕರ್ಮಿಗಳಿಂದ ನಿಗದಿತ ಹಣ ಪಡೆದು ಶೆಡ್ಗಳನ್ನು ನೀಡಿ ಆ ಜಾಗ ಅಭಿವೃದ್ಧಿ ಪಡಿಸಿತ್ತು. ಇದೀಗ ನಿವಾಸಿಗಳಿಗೆ ಹಕ್ಕು ಪತ್ರ ಒದಗಿಸಲು ಸಣ್ಣ ಕೈಗಾರಿಕೆ ನಿಗಮದಿಂದ ಜಮೀನು ಲಿಡಕರ್ ಸಂಸ್ಥೆಗೆ ಹಸ್ತಾಂತರಗೊಳ್ಳಬೇಕು. ಲಿಡಕರ್ ಸಂಸ್ಥೆಗೆ ಜಾಗ ನೀಡುವ ಸಂದರ್ಭದಲ್ಲಿ ಅದರ ಮೊತ್ತ ರು. 3.5 ಲಕ್ಷ ಇತ್ತು. ಇದನ್ನು 2011ರಲ್ಲಿ ಲಿಡಕರ್ ಸಂಸ್ಥೆ ಪಾವತಿಸಿದೆ. ಸಣ್ಣ ಕೈಗಾರಿಕೆ ನಿಗಮ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆ ಮೊತ್ತಕ್ಕೆ 1983ರಿಂದ ನಿಗದಿತ ಬಡ್ಡಿ ಸೇರಿಸಿ ಮೊತ್ತ ಪಾವತಿಸಬೇಕು. ಇಲ್ಲವೇ ಜಮೀನು ಹಕ್ಕು ಹಸ್ತಾಂತರಿಸಬೇಕೆಂದು ಪಟ್ಟು ಹಿಡಿದಿದೆ. ಲಿಡಕರ್ ಸಂಸ್ಥೆ ಪಾವತಿಸಬೇಕಾದ ಬಡ್ಡಿ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕೆಂದು ನಿವಾಸಿಗಳು ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲಾಡ್, ಲಿಡಕರ್ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕುರಿತಾಗಿ ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಲಿಡಕರ್ ನಿಗಮಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಆದಷ್ಟು ಬೇಗ ನಿವಾಸಿಗಳಿಗೆ ಹಕ್ಕು ಪತ್ರ ಹಾಗೂ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದರು.
ಡಾ. ಮಹೇಶ ನಾಲವಾಡ್, ಪ್ರಕಾಶ ಕ್ಯಾರಕಟ್ಟಿ, ಮೋಹನ ಹಿರೇಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

