ಧಾರವಾಡ ಜಿಲ್ಲೆಗೆ ನಿರಾಸೆ ಬಜೆಟ್
ವಿಶೇಷ ವರದಿ
ಧಾರವಾಡ: ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿರುವ ಬಜೆಟ್ ಹೇಳಿಕೊಳ್ಳುವ ಯೋಜನೆಗಳನ್ನು ಪ್ರಕಟಿಸದಿರುವುದು ಈ ಭಾಗದ ಜನತೆಯಲ್ಲಿ ನಿರಾಸೆ ಮೂಡಿಸಿದೆ.
ಈ ಮುಂಚೆಯೇ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಭರವಸೆ ನೀಡಿದಂತೆ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ ರು. 45 ಕೋಟಿಯನ್ನು ಈ ಬಜೆಟ್ನಲ್ಲಿ ತೆಗೆದಿರಿಸಲಾಗಿದೆ. ಕರ್ನಾಟಕ ವಿವಿ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ತಾರಾಲಯಕ್ಕೆ ರು. 1 ಕೋಟಿ ಹಾಗೂ ಧಾರವಾಡದಲ್ಲಿ ಐಎಎಸ್, ಐಪಿಎಸ್ ಅಕಾಡೆಮಿ ಮಾದರಿ ಸಂಸ್ಥೆಯಾಗಿ ಉನ್ನತ ಶಿಕ್ಷಣ ಅಕಾಡೆಮಿಯೊಂದನ್ನು ಆರಂಭಿಸುವುದು. ಧಾರವಾಡದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸುವುದಾಗಿ ಮುಖ್ಯಮಂತ್ರಿ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಅಂಶಗಳನ್ನು ಹೊರತುಪಡಿಸಿ ಧಾರವಾಡ ಜಿಲ್ಲೆಗೆ ಅಗತ್ಯವಿರುವ ಮತ್ತಾವ ಯೋಜನೆಗಳನ್ನು ಘೋಷಿಸದಿರುವುದು ಹಾಗೂ ಹಿಂದಿನ ಯೋಜನೆಗಳಿಗೆ ಹಣ ನಿಗದಿಪಡಿಸಿಲ್ಲ.
ಏನೇನಾಗಬೇಕಿತ್ತು:
ರಾಜಧಾನಿ ಬೆಂಗಳೂರು ಬಿಟ್ಟರೆ 2ನೇ ಅತಿ ದೊಡ್ಡ ನಗರ ಹುಬ್ಬಳ್ಳಿ-ಧಾರವಾಡ. ಈ ಅವಳಿ ನಗರಗಳ ಅಭಿವೃದ್ಧಿ ಕಾರ್ಯ ಸಾಕಷ್ಟು ಬಾಕಿ ಇದ್ದು, ವಿಶೇಷ ಅನುದಾನ ಘೋಷಿಸುವ ಭರವಸೆ ಇಟ್ಟಿದ್ದ ಅವಳಿ ನಗರದ ಜನತೆಗೆ ಬಜೆಟ್ ಬೇಸರ ತಂದಿದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಕಿಮ್ಸ್ ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಪ್ರಸ್ತಾಪವಿಲ್ಲ. ಧಾರವಾಡದ ಜಿಲ್ಲಾಸ್ಪತ್ರೆ ಅಭಿವೃದ್ಧಿ ಹಾಗೂ ಪ್ರಸ್ತುತ ಪಾಲಿಕೆಯ ಎಂಟು ವಾರ್ಡ್ಗಳಿಗೆ ಮಾತ್ರ 24 ಗಂಟೆ ನಿರಂತರ ಕುಡಿಯುವ ನೀರು ಯೋಜನೆ ಜಾರಿಯಲ್ಲಿದ್ದು, ಇನ್ನುಳಿದ ವಾರ್ಡ್ಗಳಿಗೆ ವಿಸ್ತರಿಸುವ ಕುರಿತಂತೆಯೂ ಬಜೆಟ್ನಲ್ಲಿ ಉತ್ತರವಿಲ್ಲ.
ಇನ್ನು, ಎರಡು ವರ್ಷಗಳಿಂದ ಧಾರವಾಡ ಜಿಲ್ಲೆ ಬರಗಾಲದಿಂದ ನರಳುತ್ತಿದ್ದು, ಈ ಭಾಗಕ್ಕೆ ಅಗತ್ಯವಿರುವ ನೂತನ ನೀರಾವರಿ ಯೋಜನೆ ಜಾರಿಗೆ ತರಬಹುದೆಂಬ ನಿರೀಕ್ಷೆಯನ್ನು ಈ ಬಜೆಟ್ ಸುಳ್ಳು ಮಾಡಿದೆ. ಉತ್ತರ ಕರ್ನಾಟಕದ ಪೈಕಿ ಚಿಕ್ಕಪಡಸಲಗಿ ನೀರಾವರಿ ಯೋಜನೆ ಹೊರತುಪಡಿಸಿ ಬೇರಾವ ಯೋಜನೆ ಇಲ್ಲ. ಅದಕ್ಕಿಂತ ಹೆಚ್ಚಾಗಿ ಕಳೆದ ಮಾರ್ಚ್ಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಅವಳಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಕೆಲ ಯೋಜನೆಗಳನ್ನು ಪ್ರಕಟಿಸಿದ್ದರು. ಈ ಯೋಜನೆಗಳ ಕುರಿತಂತೆ ಬಜೆಟ್ನಲ್ಲಿ ಮುಖ್ಯಮಂತ್ರಿ ಮಾತನಾಡಿಲ್ಲ. ಧಾರವಾಡದ ಈಜುಗೊಳದ ಅಭಿವೃದ್ಧಿಗೆ ರು. 5 ಕೋಟಿ, ಹು-ಧಾ ಮಧ್ಯೆ ಕ್ರೀಡಾ ಸಮುಚ್ಚಯಕ್ಕೆ ರು. 50 ಕೋಟಿಯನ್ನು ಜಗದೀಶ ಶೆಟ್ಟರ್ ಘೋಷಿಸಿದ್ದರು. ಕಲಘಟಗಿಯ ಬೂದನಗುಡ್ಡದಲ್ಲಿ ವನ್ಯಧಾಮ ಮಾಡುವುದಾಗಿ ತಮ್ಮ ಬಜೆಟ್ನಲ್ಲಿ ಹೇಳಿಕೊಂಡಿದ್ದರು. ಆದರೆ, ಸಿದ್ದರಾಮಯ್ಯನವರು ಈ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಈ ಯೋಜನೆಗಳು ಬರೀ ಬಜೆಟ್ ಘೋಷಣೆಗಳಾಗಿ ಉಳಿದವು ಎಂಬಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

