ಒಂದೇ ರಾತ್ರಿಯಲ್ಲಿ ಮೂರು ಕಳ್ಳತನ
ಧಾರವಾಡ: ಇತ್ತೀಚಿನ ಒಂದು ತಿಂಗಳಲ್ಲಿ ಧಾರವಾಡ ನಗರದಲ್ಲಿ ಕಳ್ಳತನಗಳ ಸಂಖ್ಯೆ ಹೆಚ್ಚಿದ್ದು, ಮಂಗಳವಾರ ಒಂದೇ ದಿನ ರಾತ್ರಿ ಉಪ ನಗರ ವ್ಯಾಪ್ತಿ ವಿವಿಧ ಪ್ರದೇಶಗಳಲ್ಲಿ ಮೂರು ಕಡೆ ಕಳ್ಳತನವಾಗಿದೆ. ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿನ ಶಾಂತಿ ನಿವಾಸ ಚಾಳನಲ್ಲಿನ ರುಕ್ಮಿಣಿ ನಿಂಗಪ್ಪ ಸೊಪ್ಪಿನ ಎಂಬುವರ ಮನೆಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು, ಸುಮಾರು 2.29 ಲಕ್ಷ ಮೌಲ್ಯದ 11 ತೊಲೆ ಚಿನ್ನದ ಆಭರಣ ಮತ್ತು ಐದು ಸಾವಿರ ನಗದು ದೋಚಿದ್ದಾರೆ. ಕೆಲಗೇರಿ ಆಂಜನೇಯ ನಗರದಲ್ಲಿ ಜೀವನ ಶೆಟ್ಟಿ ಮಾಲಿಕತ್ವದ ಎಸ್.ಎಸ್. ವೈನ್ಸ್ ಶಟರ್ಸ್ ಮುರಿದು ಅಂದಾಜು 19 ಸಾವಿರ ಮೌಲ್ಯದ ವಿವಿಧ ತರಹದ ಮದ್ಯದ ಬಾಟಲಿ ಕಳ್ಳತನ ಮಾಡಲಾಗಿದೆ. ಸದಾಶಿವನಗರದಲ್ಲಿನ ಎಂ.ಎಫ್. ಹಿರೇಮಠರ ಮನೆಯಲ್ಲಿ ಬಾಡಿಗೆ ಇದ್ದ ಮಹೇಶ ಶೆಟ್ಟಿ ಎಂಬುವರ ಮನೆಯಲ್ಲೂ ಮಂಗಳವಾರ ರಾತ್ರಿ ಕಳ್ಳತನ ನಡೆದಿದೆ. ಉಪನಗರ ಠಾಣಾ ಸಿಪಿಐ ರವಿ ನಾಯಕ, ಪಿಎಸ್‌ಐ ಬಸವರಾಜ ಬುದ್ನಿ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಪಹರಣ: ಆರೋಪಿ ಸೆರೆ
ಹುಬ್ಬಳ್ಳಿ: ವರೂರು ಎಜಿಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ರಮೇಶ ಹುಲಕುಂದನನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಂಧಿಸಲಾಗಿದೆ. ವರೂರು ನವಗ್ರಹ ತೀರ್ಥ ಕ್ಷೇತ್ರದ ಎಜಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಹುಲಕುಂದ ಅದೇ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶೋದಾಳನ್ನು ಪುಸಲಾಯಿಸಿ ಅಪಹರಿಸಿದ್ದ. ರಮೇಶನ ಜೊತೆಗೆ ವಿದ್ಯಾರ್ಥಿನಿ ಯಶೋದಾಳನ್ನು ಕೂಡ ಮಹಾರಾಷ್ಟ್ರದಿಂದ ಕರೆತರಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಲಾಗಿದೆ.
ಗಾಯಗೊಂಡಿದ್ದ ವ್ಯಕ್ತಿ ಸಾವು
ಧಾರವಾಡ: ಕಳೆದ ಜು. 10ರಂದು ಇಲ್ಲಿನ ಸೈದಾಪುರದ ಅಂಬಾಭವಾನಿ ದೇವಸ್ಥಾನದ ಬಳಿ ಆಟೋ ಹಾಗೂ ದ್ವಿಚಕ್ರವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ದ್ವಿಚಕ್ರ ಸವಾರನೋರ್ವ ಬುಧವಾರ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಗುಲಗಂಜಿಕೊಪ್ಪದ ನಿವಾಸಿ ಅಶೋಕ ಕೆಂಚನಹಳ್ಳಿ(46) ಮೃತ ವ್ಯಕ್ತಿ. ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅಶೋಕ ಅವರನ್ನು ಸಮೀಪದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.
ಅಪಘಾತ: ವ್ಯಕ್ತಿ ಸಾವು
ಧಾರವಾಡ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಾಲೂಕಿನ ಕೋಗಿಲೆಗೇರಿ ಗ್ರಾಮದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ರುದ್ರಪ್ಪ ಚುಚ್ಚನೂರ(26) ಮೃತಪಟ್ಟ ವ್ಯಕ್ತಿ. ಜು. 9ರಂದು ತಾಲೂಕಿನ ಕಡಬಗಟ್ಟಿ ಗ್ರಾಮದ ಬಳಿ ಬೊಲೆರೋ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

