ಹುಬ್ಬಳ್ಳಿ: ನಾಳೆ ಉಚಿತ ಕಣ್ಣಿನ ತಪಾಸಣಾ ಶಿಬಿರ
ಹುಬ್ಬಳ್ಳಿ: ನಗರದ ಉಣಕಲ್ ಕ್ರಾಸ್ನ ಕಿರೇಸೂರ ಕಾಂಪ್ಲೆಕ್ಸ್ನಲ್ಲಿರುವ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯಲ್ಲಿ ಜು. 19ರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಚಿಕ್ಕಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಬೆಂಗಳೂರಿನ ತಜ್ಞ ವೈದ್ಯರು ಚಿಕ್ಕಮಕ್ಕಳ ಕಣ್ಣಿನ ತಪಾಸಣೆ ಮಾಡಿ, ಉಚಿತವಾಗಿ ಸಲಹೆ-ಸೂಚನೆ ನೀಡುವರು.
ಪೇದೆ ಮೇಲೆ ಹಲ್ಲೆ
ಹುಬ್ಬಳ್ಳಿ: ಕರ್ತವ್ಯ ನಿರತ ಮುಖ್ಯ ಪೇದೆ ಮೇಲೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪ್ಸರಾ ಟಾಕೀಸ್ನಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ಸೆಟ್ಲಮೆಂಟ್ ಕಾಲೋನಿಯ ರಾಘವೇಂದ್ರ ನಾಗವೇಕರ್ ಈತನಿಗೆ ಬುದ್ಧಿ ಹೇಳಿ ಸಿನಿಮಾ ಟಾಕೀಸ್ನಿಂದ ಹೊರಗೆ ಕಳುಹಿಸಿದ್ದ ಮುಖ್ಯಪೇದೆ ಎಚ್.ಡಿ. ಬಡೇಖಾನ್ ಮೇಲೆ ಹಲ್ಲೆ ನಡೆದಿದೆ. ಟಾಕೀಸ್ನಲ್ಲಿ ನಡೆದ ಘಟನೆ ನಂತರ ಮುರಳಿ ಕೋ-ಆಪರೇಟಿವ್ ಆಸ್ಪತ್ರೆ ಹತ್ತಿರ ಕರ್ತವ್ಯ ನಿರ್ವಹಿಸುತ್ತಿದ್ದ ಬಡೇಖಾನ್ ಹತ್ತಿರ ತಗಾದೆ ತೆಗೆದ ರಾಘವೇಂದ್ರ ನಾಗವೇಕರ್ ಅವರನ್ನು ಹಿಡಿದು ಎಳೆದಾಡಿದ್ದು ಅಲ್ಲದೇ ಹಲ್ಲೆ ಎಸಗಿ ಗಾಯಗೊಳಿಸಿದ್ದಾನೆ. ಸರ್ಕಾರಿ ಸೇವೆಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಅನಧಿಕೃತ ಜಾಹೀರಾತು ಫಲಕ ತೆರವು
ಹುಬ್ಬಳ್ಳಿ: ನಗರದ ವಿವಿಧೆಡೆ ಅನಧಿಕೃತ ಜಾಹೀರಾತು ಫಲಕಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು. ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿನ ಮಾವೋ ಬಸ್ ಶೆಲ್ಟರ್ನ ಜಾಹೀರಾತು ಹಾಗೂ ಸಮೀಪದ ಪೆಟ್ರೊಲ್ ಬಂಕ್ ಬಳಿಯ ಫಲಕ, ಉಣಕಲ್ ಕೆರೆ ಎದುರಿನ ಫಲಕಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಜಾಹೀರಾತು ಪ್ರದರ್ಶನದ ನಿಗದಿತ ಅವಧಿ ಮುಗಿದಿದ್ದರೂ ಜಾಹೀರಾತು ಸಂಸ್ಥೆಗಳು ಪಾಲಿಕೆಗೆ ಶುಲ್ಕ ಪಾವತಿಸದ ಕಾರಣ ಅಧಿಕಾರಿಗಳು ಫಲಕಗಳನ್ನು ತೆರವುಗೊಳಿಸಿದರು. ಜಾಹೀರಾತು ಫಲಕಗಳ ಅವಧಿ ಪೂರ್ಣಗೊಂಡ ಜಾಹೀರಾತು ಸಂಸ್ಥೆಗಳು ಫಲಕ ಪ್ರದರ್ಶನದ ಅನುಮತಿಯನ್ನು ನವೀಕರಿಸಿಕೊಳ್ಳದಿದ್ದರೆ ಫಲಕಗಳನ್ನು ತೆರವುಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

