ಶೋಷಿತರ ಧ್ವನಿಯಾಗಿದ್ದ ನಾಯ್ಕರ್
ಧಾರವಾಡ: ಯಾರೂ ಶತಮಾನಗಳಿಂದ ಶೋಷಣೆ, ತುಳಿತಕ್ಕೆ ಒಳಗಾಗಿದ್ದರೋ ಅವರ ಪರವಾಗಿ ಧ್ವನಿ ಎತ್ತಿ ಸಮಾಜದಲ್ಲಿ ಸಮಾನತೆ ತಂದುಕೊಟ್ಟವರು ದಿ. ಡಿ.ಕೆ. ನಾಯ್ಕರ್ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ ಹೇಳಿದರು.
ಕಾಳಿದಾಸ ವಿದ್ಯಾವರ್ಧಕ ಸಂಘ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಡಿ.ಕೆ. ನಾಯ್ಕರ್ ಅವರ 14ನೇ ಸ್ಮರಣೆ ಮತ್ತು ಅವರ ಜೀವನ ಸಾಧನೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರೆಯಬೇಕು. ಸ್ವತಂತ್ರವಾಗಿ ಚಿಂತಿಸುವ ಸಮಾಜ ಹುಟ್ಟಿಕೊಳ್ಳಬೇಕೆಂದು ಪ್ರತಿಪಾದಿಸಿದ ನಾಯ್ಕರ್, ಸಮಾಜಮುಖಿ ಕೆಲಸ ಮಾಡಿ ಸದಾ ನೆನಪಿನಲ್ಲಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮಂತ್ರಿ ಮಂಡಳದಲ್ಲಿ ಕಾನೂನು ಸಚಿವರಾಗಿದ್ದ ನಾಯ್ಕರ್ ಅವರು ಕಾನೂನು ಪಂಡಿತರಾಗಿದ್ದರು ಎಂದ ಅವರು, ಹಿರಿಯ ರಾಜಕಾರಣಿಗಳನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದು ಅಭಿಪ್ರಾಯಿಸಿದರು.
ಮಂತ್ರಿಗಾಗಿ ಓಡಾಡಲಿಲ್ಲ: ಹಿರಿಯ ವಿಮರ್ಶಕ ಡಾ ಗಿರಡ್ಡಿ ಗೋವಿಂದರಾಜ ಮಾತನಾಡಿ, ದೇವರಾಜ ಅರಸು ಅವರು ಸ್ವತಃ ನಾಯ್ಕರ್ ಅವರನ್ನು ಹುಡುಕಿ ಚುನಾವಣೆಗೆ ನಿಲ್ಲಲು ಟಿಕೆಟ್ ನೀಡಿದ್ದರು. ಅಂತಹ ಸಹಜ ವ್ಯಕ್ತಿತ್ವ ನಾಯ್ಕರ್ ಅವರಲ್ಲಿತ್ತು. ಇಂದು ಅನೇಕರು ಚುನಾಯಿತರಾದ ನಂತರ ಮಂತ್ರಿಗಳಾಗಬೇಕು ಎಂದು ಓಡಾಡುತ್ತಾರೆ. ಆದರೆ, ನಾಯ್ಕರ್ ಮಂತ್ರಿಯಾಗಬೇಕು ಎಂದು ಹಾತೊರೆಯಲಿಲ್ಲ. ಅವರ ವ್ಯಕ್ತಿತ್ವ ಗಮನಿಸಿ ದೇವರಾಜ ಅರಸು ಅವರು ಮಂತ್ರಿಮಂಡಲದಲ್ಲಿ ಉನ್ನತ ಸ್ಥಾನ ನೀಡಿದರು. ಇಂದು ನಾಯ್ಕರ್ ಅವರ ವ್ಯಕ್ತಿತ್ವವನ್ನೇ ಹೊಂದಿರುವ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಅನುಭವಗಳನ್ನು ಈಗಲೇ ಪುಸ್ತಕ ರೂಪದಲ್ಲಿ ಬರೆಯಿಸಿ ಇಡಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ದೇವರಾಜ ಅರಸು ಅವರ ಕಾಲಾನಂತರ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತತ್ವಪೂರ್ಣ ಆಡಳಿತ ರಾಜ್ಯದಲ್ಲಿ ನಡೆಯುತ್ತಿದೆ. ಸಚಿವರಾಗಿದ್ದ ನಾಯ್ಕರ್ ಅವರು ಅಂದು ತಮ್ಮ ವ್ಯಕ್ತಿತ್ವದ ಮೂಲಕ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡರು. ಅಲ್ಲದೇ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಮಲಪ್ರಭಾ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದುಕೊಟ್ಟರು ಎಂದು ಸ್ಮರಿಸಿದರು. ಪುಸ್ತಕದ ಲೇಖಕ ಓಂಕಾರ ಕಾಕಡೆ ಅನುಭವ ಹಂಚಿಕೊಂಡರು. ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಲ್ಲಮ್ಮ ನಾಯ್ಕರ್, ಮಹೇಶ ನಾಲವಾಡ, ಮಾಜಿ ಸಂಸದ ಪ್ರೊ ಐ.ಜಿ. ಸನದಿ, ಶಿವಾ ನಾಯ್ಕ್ ಇದ್ದರು. ಡಾ ಲೋಹಿತ ನಾಯ್ಕರ್ ಸ್ವಾಗತಿಸಿದರು. ನಾಗರಾಜ ಗುರಿಕಾರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

