ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲು ಟೆಂಡರ್
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ರನ್ವೇ ಮೇಲ್ದರ್ಜೆಗೇರಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಇದೇ ಸೆಪ್ಟೆಂಬರ್ನಲ್ಲಿ ಅಂತಿಮಗೊಳ್ಳಲಿದ್ದು, ಮುಂದಿನ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲೇಬೇಕು.
ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕುರಿತು ನಗರದಲ್ಲಿ ಮಂಗಳವಾರ ನಡೆದ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಸಂಸದ ಪ್ರಹ್ಲಾದ ಜೋಶಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರನ್ವೇ ಮೇಲ್ದರ್ಜೆಗೇರಿಸಲು ನಗರದ ವಿವಿಧೆಡೆ ಇರುವ ಮೊಬೈಲ್ ಟವರ್ ತೆರವುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನೃಪತುಂಗ ಬೆಟ್ಟದಲ್ಲಿರುವ ಟವರ್ನ್ನು ತೆರವುಗೊಳಿಸಲು ಜೋಶಿ ಸೂಚನೆ ನೀಡಿದರು.
ಆದರೂ ವಿಮಾನ ಇಳಿಯಲು ಹಾಗೂ ಮೇಲೇರಲು ನೃಪತುಂಗ ಬೆಟ್ಟದ ಎತ್ತರ ಅಡ್ಡಿಯಾಗುವುದರಿಂದ 20 ಅಡಿ ಎತ್ತರವನ್ನು ತೆರವುಗೊಳಿಸಬೇಕೆಂದು ಸಭೆಯಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನೃಪತುಂಗ ಬೆಟ್ಟದ ಎತ್ತರ ಕಡಿತಗೊಳಿಸಲು ನಿರಾಕರಿಸಿದ ಸಂಸದ ಜೋಶಿ, ರನ್ವೇ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಬದಲಾವಣೆ ತರುವಂತೆ ನಿರ್ದೇಶನ ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೇರಿಸಲು ಈಗಾಗಲೇ 140 ಕೋಟಿ ಹಣ ಮಂಜೂರಾಗಿದ್ದು, ನಿಲ್ದಾಣದ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದರೊಂದಿಗೆ ರನ್ವೇ ಮೇಲ್ದರ್ಜೆಗೆ ಕೆಲ ಸ್ಮಶಾನ ಹಾಗೂ ಮರಗಳನ್ನೂ ತೆರವುಗೊಳಿಸುವಂತೆ ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಬಸವರಾಜ್ ತಿಳಿಸಿದರು.
ರನ್ವೇ ಮೇಲ್ದರ್ಜೆಗೇರಿಸಲು ಕೈಗೊಳ್ಳಬೇಕಿರುವ ಪೂರ್ವಭಾವಿ ಕೆಲಸಗಳಿಗೆ ಬೇಕಾಗುವ ವೆಚ್ಚ ತಮ್ಮ ಬಳಿ ಇಲ್ಲವೆಂದು ಕಳೆದ ಜನೇವರಿಯಲ್ಲಿ ನಡೆದಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ವೆಚ್ಚಕ್ಕಾಗಿ ಸುಮಾರು 8 ಕೋಟಿ ಬಿಡುಗಡೆ ಮಾಡಿಸಲು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಪತ್ರ ಬರೆಯುವಂತೆ ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಅವರಿಗೆ ಸಂಸದ ಪ್ರಹ್ಲಾದ ಜೋಶಿ ಸೂಚನೆ ನೀಡಿದ್ದರು. ಆದರೆ, ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಕುರಿತು ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಸಂಸದ ಪ್ರಹ್ಲಾದ ಜೋಶಿ ಅವರು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಮತ್ತೊಮ್ಮೆ ಪತ್ರ ಬರೆಯುವಂತೆ ಸೂಚನೆ ನೀಡಿದರು.
ವಿಮಾನ ನಿಲ್ದಾಣದ ರನ್ವೇ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಮಧ್ಯೆ ಸಂವಹನದ ಕೊರತೆ ಇರುವುದಕ್ಕೆ ಸಂಸದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಮಾಹಿತಿಯ ಕೊರತೆ ಇರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಾಂತ್ರಿಕ ಅಧಿಕಾರಿ ನೀರಜ್ಕುಮಾರ, ಡಿಸಿಪಿ ಶ್ರೀನಾಥ ಜೋಶಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎನ್.ಪಿ. ಜವಳಿ ಹಾಗೂ ಮತ್ತಿತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

