ಧಾರವಾಡ

33 ಕೊಳಚೆ ಪ್ರದೇಶಗಳ ಸ್ಥಳಾಂತರಕ್ಕೆ ಸಹಕಾರ ನೀಡಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 16
ಹುಬ್ಬಳ್ಳಿ-ಧಾರವಾಡದ 33 ಕೊಳಚೆ ಪ್ರದೇಶಗಳನ್ನು ಸ್ಥಳಾಂತರಿಸಲು ಸರ್ಕಾರ ಗುರುತಿಸಿದ್ದು, ಇದಕ್ಕೆ ಆಯಾ ಪ್ರದೇಶಗಳ ನಿವಾಸಿಗಳು ಸಹಕಾರ ನೀಡುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವಿನಂತಿಸಿಕೊಂಡರು.
ಗೋಕುಲ ರಸ್ತೆಯ ಸಾಮ್ರಾಟ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು.
ಕೊಳಚೆ ಪ್ರದೇಶ ವಾಸಿಗಳ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ. ಅವಳಿನಗರದಲ್ಲಿ ಬಹಳಷ್ಟು ಕೊಳಚೆ ಪ್ರದೇಶಗಳಿದ್ದು ಈ ಪೈಕಿ 33 ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದರು.
ಪಕ್ಷಕ್ಕೆ ಆಭಾರಿ: ಒಮ್ಮೆ ಮಂತ್ರಿ ಆಗಬೇಕೆಂಬ ಕನಸು ತಮ್ಮದಾಗಿತ್ತು. ಕಲಘಟಗಿ ಕ್ಷೇತ್ರದ ಮತದಾರರ ಆರ್ಶೀವಾದ ಹಾಗೂ ಪಕ್ಷದ ನಾಯಕರು ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸದಿಂದಾಗಿ ಈ ಬಾರಿ ತಮಗೆ ಮಂತ್ರಿಯಾಗುವ ಸೌಭಾಗ್ಯ ದೊರಕಿದೆ. ಇದಕ್ಕಾಗಿ ಪಕ್ಷಕ್ಕೆ ಹಾಗೂ ಮತದಾರರ ಆಭಾರಿಯಾಗಿದ್ದೇನೆ ಎಂದು ಧನ್ಯತೆಯಿಂದ ನುಡಿದರು.
ಇಪ್ಪತ್ತನಾಲ್ಕು ತಾಸು: ಅಧಿಕಾರಿದಲ್ಲಿ ಇರುವಷ್ಟು ದಿನ 24 ತಾಸುಗಳ ಕಾಲವೂ ಬಡವರ ಏಳಿಗೆ ಹಾಗೂ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕಾಂಗ್ರೆಸ್‌ನಿಂದ ಮಾತ್ರ ದೀನದಲಿತ ಉದ್ಧಾರ ಸಾಧ್ಯ. ಆದ್ದರಿಂದ ಶೀಫ್ರದಲ್ಲೇ ಎದುರಾಗಲಿರುವ ಸಂತಸ ಚುನಾವಣೆಗೆ ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಒಗ್ಗಟ್ಟಾಗಿ ದುಡಿಯುವ ಮೂಲಕ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವಂತೆ ಪಣತೊಡೋಣ ಎಂದು ಸಚಿವ ಲಾಡ್ ಹೇಳಿದರು.
ಕಾಂಗ್ರೆಸ್ ಕೊಡುಗೆ: ರೈತ ರು. 75 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದ ಲಾಡ್, ಮಾಹಿತಿ ಹಕ್ಕು, ಕಡ್ಡಾಯ ಶಿಕ್ಷಣ ಕಾಯ್ದೆ, ಬಡವರಿಗೆ ಆರೋಗ್ಯ ಸೇವೆ ನೀಡುವ 108 ಅಂಬ್ಯುಲೆನ್ಸ್ ವಾಹನ ವ್ಯವಸ್ಥೆ ಜಾರಿಗೆ ತಂದಿದ್ದೆ ಕಾಂಗ್ರೆಸ್ ಎಂದರು.
ಸಿಎಂ ಸಿದ್ದರಾಮಯ್ಯ ಜುಲೈ ತಿಂಗಳಿಂದ ರು. 1ಗೆ ಕೆಜಿಯಂತೆ ಅಕ್ಕಿ ವಿತರಿಸುವುದಾಗಿ ಘೋಷಿಸಿದ್ದು, ಈ ಕಾರ್ಯವೂ ಆರಂಭಗೊಳ್ಳಲಿದೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರು ಪಡೆದ ರು. 4,500 ಕೋಟಿ ಸಾಲವನ್ನೂ ಕೇಂದ್ರ ಸರ್ಕಾರ ಮನ್ನಾ ಮಾಡುವ ಮೂಲಕ ಬಡವರ ಪರವಾಗಿ ನಿಂತಿದೆ ಎಂದು ಹೆಮ್ಮೆಯಿಂದ ನುಡಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಮಹೇಶ ನಾಲವಾಡ, ಕೆಲವೇ ದಿನಗಳಲ್ಲಿ ಮತದಾರ ಪ್ರಭುವಿನ ಮನಗೆದ್ದು 43 ಸಾವಿರ ಮತಗಳನ್ನು ಪಡೆದಿದ್ದು ಸಾಧನೆಯೇ ಆಗಿದೆ ಎಂದರಲ್ಲದೆ, ಮುಂಬರುವ ದಿನಗಳಲ್ಲಿ ನಾಲವಾಡ ಅವರ ಬೆಂಬಲಕ್ಕೆ ಇಡೀ ಪಕ್ಷಕ್ಕೆ ನಿಲ್ಲಲಿದೆ ಎಂದರು.
ಶಾಸಕ ವಿನಯ ಕುಲಕರ್ಣಿ, ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ದುಡಿದವರಿಗೆ ಗುರುತಿಸುವ ಕೆಲಸ ಆಗಬೇಕಿದೆ. ಇದರಿಂದ ಪಕ್ಷಕ್ಕೆ ಶಕ್ತಿ ಬರುತ್ತದೆ ಎಂದರು.
ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಅಷ್ಟೊಂದು ಪಾತ್ರವಹಿಸದವರು ಈಗ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಶಾಸಕ ಕುಲಕರ್ಣಿ ವಿಷಾದ ವ್ಯಕ್ತಪಡಿಸಿದರಲ್ಲದೆ, ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ವಿಫಲವಾಗಲು ಕಾರಣ ಏನು ಎಂಬುದರ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಕಾಂಗ್ರೆಸ್‌ನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಕಾಂಗ್ರಸ್ಸಿಗರೇ ಮುಳುವಾಗಿದ್ದಾರೆ. ಆದ್ದರಿಂದ ಪರಸ್ಪರರಲ್ಲಿನ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿ ಮುಂಬರುವ ಪಾರ್ಲಿಮೆಂಟ್ ಚುನಾವಣೆಗಳು ಎದುರಿಸೋಣ ಎಂದರು.
ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಕಾರ್ಯಕರ್ತರೇ ಪಕ್ಷದ ಮಹಾಶಕ್ತಿಯಾಗಿದ್ದಾರೆ. ಕೈ ತಪ್ಪಿ ಹೋಗಿದ್ದ ಕಲಘಟಗಿ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಬಿಗಿ ಹಿಡಿತ ಸಾಧಿಸುವಂತೆ ಮಾಡಿರುವ ಕೀರ್ತಿ ಸಚಿವ ಲಾಡ್‌ಗೆ ಸಲ್ಲುತ್ತದೆ. ಉತ್ತರ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಶಾಸಕರು ಆಯ್ಕೆಯಾದಗಲೆಲ್ಲಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ. ಆದ್ದರಿಂದ ಪಕ್ಷದ ಸಂಘಟನೆಗಾಗಿ ವೈಯಕ್ತಿಕ ಆಸೆ-ಆಮಿಷಗಳನ್ನು ಬದಿಗಿಟ್ಟು ಪ್ರತಿಯೊಬ್ಬರು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಚಿವ ಲಾಡ್, ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ಕೂ ತಾವೂ ಎಲ್ಲ ರೀತಿಯಿಂದಲೂ ಸಹಕಾರ ನೀಡುವುದಾಗಿ ಹೇಳಿದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಾಜಿ ಸಂಸದರಾದ ಮಂಜುನಾಥ ಕುಣ್ಣೂರ, ಪ್ರೊ. ಐ.ಜಿ. ಸನದಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಶಿವಾ ನಾಯ್ಕ, ಪ್ರಕಾಶ ಕ್ಯಾರಕಟ್ಟಿ, ಮಹ್ಮದಯುಸೂಫ್ ಸವಣೂರ, ರಾಜಾ ದೇಸಾಯಿ, ಸತೀಶ ಮೆಹರವಾಡೆ, ಜಿ. ದೇವಕಿ ಯೋಗಾನಂದ, ನೀಲಕಂಠ ಅಸೂಟಿ, ಕಾಡಯ್ಯ ಹಿರೇಮಠ, ಎಫ್.ಎಚ್. ಜಕ್ಕಪ್ಪನವರ, ಸುನೀಲ ಸಾಂಡ್ರಾ, ಡಾ. ಮಹೇಶ ನಾಲವಾಡ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.