ಧಾರವಾಡ

ಅಭಿವೃದ್ಧಿ ಬಿಜೆಪಿಗೆ ಶ್ರೀರಕ್ಷೆ: ಸಿಎಂ ಶೆಟ್ಟರ್

Published On :

ಹುಬ್ಬಳ್ಳಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಅನುದಾನದ ಮುಖಾಂತರ ಅವಳಿ ನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಹು-ಧಾ ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳ ಪಕ್ಷದ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ಸಿಎಂ ಶೆಟ್ಟರ್ ಹೇಳಿದರು.
ಶುಕ್ರವಾರ ನಗರದಲ್ಲಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಮತ್ತೆ ಬಿಜೆಪಿಗೆ ದೊರೆತಲ್ಲಿ ಅವಳಿ ನಗರದ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ವ್ಯಾಪಕ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅವಳಿ ನಗರದ ಪ್ರತಿಯೊಂದು ಮನೆಗೂ ಪೈಪ್ ಮುಖಾಂತರ ಗ್ಯಾಸ್ ಸಂಪರ್ಕ ನೀಡಲಾಗುವುದು ಎಂದರು.
ನಗರದ ಸೌಂದರೀಕರಣಕ್ಕೆ ಸಂಬಂಧಿಸಿದಂತೆ ನೃಪತುಂಗ ಬೆಟ್ಟ, ಉಣಕಲ್ ಕೆರೆ, ಬಾರೋ ಸಾಧನಕೇರಿ ಮತ್ತು ಇಂದಿರಾಗಾಜಿನ ಮನೆ ಅಭಿವೃದ್ಧಿಪಡಿಸಲಾಗಿದೆ. ಎಪಿಎಂಸಿ ಯಾರ್ಡ್‌ನಲ್ಲಿ ಅಂತಾರಾಷ್ಟ್ರೀಯ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾನಗರದ ಪ್ರಮುಖ ಬೀದಿ ಮತ್ತು ವೃತ್ತಗಳಲ್ಲಿ ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಹೈಮಾಸ್ಟ್ ದೀಪ ಸೇರಿದಂತೆ ವಿವಿಧ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಈ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಪಕ್ಷದ ಅಭ್ಯರ್ಥಿಗಳು ಎಲ್ಲ ವಾರ್ಡ್‌ಗಳಲ್ಲಿ ಜಯ ಸಾಧಿಸಲಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ಪಕ್ಷ ಆಡಳಿತಕ್ಕೆ ಬಂದರೆ ನಗರದ ಸಮಗ್ರ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆ ರೂಪಿಸಲಾಗಿದೆ. ಈ ಯೋಜನೆಗಳು ಜನರ ಆಶೋತ್ತರಗಳನ್ನು ಈಡೇರಿಸಲಿವೆ ಎಂದರು.
 ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ, ರಂಗಾ ಬದ್ದಿ ಮುಖಂಡರಾದ ನಾಗೂಸಾ ಕಲಬುರ್ಗಿ, ಶಂಕ್ರಪ್ಪ ಛಬ್ಬಿ ಇದ್ದರು.
ಏನೇನಿದೆ ಬಿಜೆಪಿ ಪ್ರಣಾಳಿಕೆಯಲ್ಲಿ?
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅವಳಿ ನಗರದ ಎಲ್ಲ ಮನೆಗಳಿಗೆ ಪೈಪ್‌ಲೈನ್ ಮುಖಾಂತರ ಗ್ಯಾಸ್ ಸಂಪರ್ಕ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಪಾಲಿಕೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಶ್ರೀಸಾಮಾನ್ಯನಿಗೂ ಲಭ್ಯವಾಗುವಂತಹ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬಡ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಶಿಕ್ಷಣ ನೀಡುವುದಕ್ಕೆ ಸಿಬಿಎಸ್‌ಇ ಶಾಲೆಗಳ ಸ್ಥಾಪನೆ.
ಕೊಳಚೆ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸೌಲಭ್ಯ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಬೆಳಗಾವಿ-ಬೆಂಗಳೂರು ಹೈಸ್ಪೀಡ್ ಯೋಜನೆ ಜಾರಿಗೆ ಕ್ರಮ.
ಹುಬ್ಬಳ್ಳಿ ಹಳೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಮಲ್ಟಿಸ್ಟೋರ್ ಕಾಂಪ್ಲೆಕ್ಸ್ ನಿರ್ಮಾಣ.
ನಗರದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ.
ಹುಬ್ಬಳ್ಳಿಯ ಕೇಶ್ವಾಪುರ, ಜನತಾ ಬಜಾರ್ ಮತ್ತು ಧಾರವಾಡದ ಸೂಪರ್ ಮಾರುಕಟ್ಟೆಗಳಲ್ಲಿ ಸುಸಜ್ಜಿತ ವ್ಯಾಪಾರ ಮಳಿಗೆಗಳ ನಿರ್ಮಾಣ.
ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಈಜುಕೊಳ ನಿರ್ಮಾಣ.
ಧಾರವಾಡ ನಗರದಲ್ಲಿ 55 ಎಕರೆಯಲ್ಲಿ ಕ್ರೀಡಾ ಸಮುಚ್ಚಯ ಮತ್ತು ಹುಬ್ಬಳ್ಳಿಯಲ್ಲಿ 10 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು.
18 ಕೋಟಿ ವೆಚ್ಚದಲ್ಲಿ ಅವಳಿ ನಗರದ ಮಧ್ಯೆ ಪರಿಸರ ಸ್ನೇಹಿ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು.
ಸ್ವರ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್ ಅವರ ನಿವಾಸವನ್ನು ಸಂಗೀತ ಶಾಲೆ ಮತ್ತು ವಸ್ತು ಸಂಗ್ರಹಾಲಯವನ್ನಾಗಿ ಮಹಾನಗರ ಪಾಲಿಕೆ ಅಭಿವೃದ್ಧಿ ಪಡಿಸಲಿದೆ.
ನಗರದ ವಾಹನ ದಟ್ಟಣೆ ನಿಯಂತ್ರಣಕ್ಕೆ ಈಗಾಗಲೇ ಬಜೆಟ್‌ನಲ್ಲಿ ಅನುಮೋದನೆಗೊಂಡಿರುವ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.