ಚುನಾವಣೆ: ಮತದಾನಕ್ಕೆ ಕ್ಷಣಗಣನೆ
ಧಾರವಾಡ: ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯ ಪ್ರಮುಖ ಹಂತ ಮತದಾನ ಇನ್ನೇನು ಶುರುವಾಗಲಿದೆ.
ಗುರುವಾರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಜಿಲ್ಲೆಯ 749 ಮತಗಟ್ಟೆಯಲ್ಲಿ ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ತಯಾರಿಯೊಂದಿಗೆ ನಿಂತಿದೆ. ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ಅಣ್ಣಿಗೇರಿ, ನವಲಗುಂದ ಪುರಸಭೆ ಹಾಗೂ ಕುಂದಗೋಳ, ಅಳ್ನಾವರ, ಕಲಘಟಗಿ ಪಪಂಗಳ 156 ವಾರ್ಡ್ಗಳ 156 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು 3,51,193 ಪುರುಷರು, 3,43,431 ಮಹಿಳೆಯರು ಸೇರಿದಂತೆ ಒಟ್ಟೂ 6,95,624 ಮತದಾರರು ಇದ್ದಾರೆ.
ಪಾಲಿಕೆ ವ್ಯಾಪ್ತಿಯ 67 ವಾರ್ಡ್ಗಳಲ್ಲಿ 659 ಮತಗಟ್ಟೆ ನಿರ್ಮಿಸಿದ್ದು, 6,23,518 ಜನ ಮತದಾರರು ಇದ್ದಾರೆ. ನವಲಗುಂದ ಪುರಸಭೆಯಲ್ಲಿ 23 ವಾರ್ಡ್ಗಳಿದ್ದು 24 ಮತಗಟ್ಟೆ ಸ್ಥಾಪಿಸಿದ್ದು, 16,987 ಮತದಾರರಿದ್ದಾರೆ. ಅಣ್ಣಿಗೇರಿ ಪುರಸಭೆಯಲ್ಲಿ 23 ವಾರ್ಡ್ಗಳಿದ್ದು 23 ಮತಗಟ್ಟೆ ಸ್ಥಾಪಿಸಲಾಗಿದ್ದು, 19,091 ಮತದಾರರಿದ್ದಾರೆ. ಇನ್ನು, ಅಳ್ನಾವರ ಪಪಂನಲ್ಲಿ 15 ವಾರ್ಡ್ಗಳ ಪೈಕಿ 15 ಮತಗಟ್ಟೆ ಸ್ಥಾಪಿಸಲಾಗಿದ್ದು, 12,051 ಮತದಾರರಿದ್ದಾರೆ. ಕಲಘಟಗಿ ಪಪಂನಲ್ಲಿ 13 ವಾರ್ಡ್ ಪೈಕಿ 13 ಮತಗಟ್ಟೆ ಸ್ಥಾಪಿಸಿದ್ದು, 10,634 ಮತದಾರರಿದ್ದಾರೆ. ಚುನಾವಣೆಗೆ ನೇಮಕವಾದ ಸುಮಾರು 3,392 ಜನ ಸಿಬ್ಬಂದಿ ಮತದಾರರಿಂದ ಮತ ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ. ಎಲ್ಲಿಯೂ ಗಲಾಟೆ, ಅಕ್ರಮ ಮತದಾನ ನಡೆಯದಂತೆ ಪೊಲೀಸ್ ಇಲಾಖೆ ಬಂದೋಬಸ್ತ್ ಏರ್ಪಡಿಸಿದೆ. ಒಟ್ಟು ಮತಗಟ್ಟೆಗಳ ಪೈಕಿ 260 ಸೂಕ್ಷ್ಮ (ಪ್ರತಿ ಮತಗಟ್ಟೆಗೆ ಇಬ್ಬರು ಪೊಲೀಸ್ ಸಿಬ್ಬಂದಿ), 127 ಅತೀ ಸೂಕ್ಷ್ಮ (ಮೂವರು) ಹಾಗೂ 362 ಸಾಮಾನ್ಯ (ಓರ್ವ) ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಒಟ್ಟು 156 ವಾರ್ಡ್ಗಳಲ್ಲಿ 780 ಜನ ಚುನಾವಣಾ ಕಣದಲ್ಲಿದ್ದಾರೆ.
ಪಾಲಿಕೆ ಚುನಾವಣೆಗೆ ಬಿಜೆಪಿಯಿಂದ 67, ಕಾಂಗ್ರೆಸ್ನಿಂದ 66, ಜೆಡಿಎಸ್ನಿಂದ 65, ಕೆಜೆಪಿಯಿಂದ 63, ಬಿಎಸ್ಸಾರ್ ಪಕ್ಷದಿಂದ 37 ಹಾಗೂ 82 ಜನ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ನ ತ್ರಿಕೋನ ಸ್ಪರ್ಧೆ ಏರ್ಪಟ್ಟು ಬಿಜೆಪಿ ಬಹುಮತ ಪಡೆದಿತ್ತು. ಆದರೆ, ಈ ಬಾರಿ ಬಿಜೆಪಿಗೆ ಸೆಡ್ಡು ಹೊಡೆದು ಕೆಜೆಪಿ ಇದ್ದು, ಜೊತೆಗೆ ಕಾಂಗ್ರೆಸ್, ಜೆಡಿಎಸ್ ಅಲ್ಲದೆ ಬಿಎಸ್ಸಾರ್ ಪಕ್ಷದ ಅಭ್ಯರ್ಥಿಗಳೂ ಪೈಪೋಟಿ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಕಣದ ಅಭ್ಯರ್ಥಿಗಳ ಭವಿಷ್ಯ ಮತದಾನದ ಮೂಲಕ ಮತದಾರರು ನಿರ್ಧರಿಸಲಿದ್ದು, ಮಾ. 11ರಂದು ಮತ ಎಣಿಕೆಯಂದು ತಿಳಿಯಲಿದೆ.
11ಕ್ಕೆ ಫಲಿತಾಂಶ: ಒಟ್ಟು 156 ಸದಸ್ಯ ಸ್ಥಾನಗಳಿಗೆ ಗುರುವಾರ ನಡೆದ ಮತದಾನದ ನಂತರ ಮಾ. 11ರಂದು ಎಣಿಕೆ ಕಾರ್ಯ ನಡೆಯಲಿದೆ. ಪಾಲಿಕೆಯ 1 ರಿಂದ 67 ವಾರ್ಡ್ಗಳ ಮತಗಳ ಎಣಿಕೆ ಹುಬ್ಬಳ್ಳಿಯ ವಿದ್ಯಾನಗರದ ಜ್ಯೂನಿಯರ್ ಟೆಕ್ನಿಕಲ್ ಸ್ಕೂಲ್ನ ಮಹಿಳಾ ಪಾಲಿಟೆಕ್ನಿಕ್ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ನವಲಗುಂದ ಪುರಸಭೆ ಮತ ಎಣಿಕೆಯು ಶಂಕರ ಕಲಾ ಕಾಲೇಜಿನಲ್ಲಿ, ಅಳ್ನಾವರ ಪಪಂ ಮತ ಎಣಿಕೆಯು ಧಾರವಾಡದ ತಹಸೀಲ್ದಾರ ಕಚೇರಿ, ಕಲಘಟಗಿ ಪಪಂ ಮತ ಎಣಿಕೆ ಕಲಘಟಗಿ ತಹಸೀಲ್ದಾರ ಕಚೇರಿ ಹಾಗೂ ಕುಂದಗೋಳದ ತಹಸೀಲ್ದಾರ ಕಚೇರಿಯಲ್ಲಿ ಕುಂದಗೋಳ ಪಪಂ ಚುನಾವಣಾ ಮತ ಎಣಿಕೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

