ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಲಾಬಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 15
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪರ್ವ ಶುರುವಾಗಿದೆ. ಆಯಕಟ್ಟಿನ ಸ್ಥಳ ಆಯ್ಕೆಗಾಗಿ ಲಾಬಿ ನಡೆದಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಅಧಿಕಾರಿಗಳೂ ಈ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿಲ್ಲ. ಅಷ್ಟಕ್ಕೂ ದಿಢೀರನೆ ವರ್ಗಾವಣೆಯ ಶಕೆ ಶುರುವಾಗಲು ಕಾರಣ ಎದುರಾಗಲಿರುವ ವಿಧಾನಸಭೆ ಚುನಾವಣೆ!
ಹೌದು, ಸ್ಥಳೀಯ ಸಂಸ್ಥೆ ಚುನಾವಣೆ ಇನ್ನೇನು ಮುಗಿಯಿತು ಎನ್ನುತ್ತಿರುವಾಗಲೇ ವಿಧಾನಸಭೆ ಚುನಾವಣೆಯ ತಯಾರಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೂ ಮುನ್ನವೇ 'ಪೊಗದಸ್ತಾದ' ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪೈಪೋಟಿ ನಡೆದಿದೆ.
ಅಂದಹಾಗೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅಕ್ರಮ, ಸ್ವಜನ ಪಕ್ಷಪಾತ ನಡೆಯದಿರಲಿ ಎಂಬ ಕಾರಣಕ್ಕಾಗಿ ಸ್ವಂತ ಜಿಲ್ಲೆಯಲ್ಲಿಯೇ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗುತ್ತದೆ. ಇದೇ ವೇಳೆ ಒಂದೇ ಠಾಣೆಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಬೇರೂರಿದ್ದವರನ್ನೂ ಬೇರೆಡೆಗೆ ವರ್ಗಾಯಿಸಲಾಗುತ್ತದೆ. ಹೀಗಿದ್ದಾಗ, ಸ್ವ ಜಿಲ್ಲೆಯವರು ಹಾಗೂ ಮೂರು ವರ್ಷದಿಂದ ಠಿಕಾಣಿ ಹೊಡೆದು ಕುಳಿತಿರುವ ಪೊಲೀಸ್ ಅಧಿಕಾರಿಗಳು, ಹೇಗಾದರೂ ವರ್ಗಾವಣೆ ಕಟ್ಟಿಟ್ಟ ಬುತ್ತಿ ಎಂದು ಲಾಭದಾಯ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ.
ಬೆಂಗಳೂರಿಗೆ ಪಯಣ: ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದಿದ್ದೇ ತಡ, ವರ್ಗಾವಣೆ ಸಾಲಿಗೆ ಸೇರುವ ಹಿರಿಯ ಅಧಿಕಾರಿಗಳಿಂದ ಹಿಡಿದು ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ವರೆಗಿನ ಅಧಿಕಾರಿಗಳು ಕಳೆದೊಂದು ವಾರದಿಂದ ಬೆಂಗಳೂರಿಗೆ ಹೋಗಿ ಬರುವ ಕಾಯಕದಲ್ಲಿ ತೊಡಗಿದ್ದಾರೆ. ದಿನ ಬೆಳಗಾಗುವುದರೊಳಗಾಗಿ ಯಾರಿಗೂ ಗೊತ್ತಾಗದ ಹಾಗೆ ಬೆಂಗಳೂರು ಸೇರಿಕೊಂಡು ಅಲ್ಲಿ ತಮಗೆ ಬೇಕಾದ ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಮುಖಾಂತರ ಒತ್ತಡ ಹೇರಿ ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ವಶೀಲಿ ಬಾಜಿ: ಪೊಲೀಸ್ ಇಲಾಖೆಯಲ್ಲಿ ಆಯ್ದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ವಶೀಲಿ ಬಾಜಿ ಇಲ್ಲದೇ ಆಯ್ದ ಸ್ಥಳ ಸಿಗುವುದು ಅಸಾಧ್ಯದ ಮಾತು. ಒಬ್ಬರ ಪರವಾಗಿ ಮೂರ್ನಾಲ್ಕು ಕಡೆಯಿಂದ ವಶೀಲಿ ಬಂದರೆ ಮಾತ್ರ ಅಂದುಕೊಂಡ ಜಾಗಕ್ಕೆ ವರ್ಗವಾಗುತ್ತದೆ. ಇದಲ್ಲದೇ ಕಾಂಚಾಣವೂ ಇಲ್ಲಿ ಕೆಲಸ ಮಾಡುತ್ತದೆ ಎಂಬ ಸಂಗತಿ ಗುಟ್ಟಾಗಿ ಉಳಿದಿಲ್ಲ. ಕಾಂಚಾಣ ಕೈಗಿತ್ತದೆ ವರ್ಗಾವಣೆ ಕಾರ್ಯ ಫಟಾಫಟ್ ಎಂದು ಮುಗಿದು ಹೋಗುತ್ತದೆ. ಅಷ್ಟಕ್ಕೂ ನೈಜ ವರ್ಗಾವಣೆ ಪ್ರಕ್ರಿಯೆ ಆರಂಭವಾಗದಿದ್ದರೂ ಅಧಿಕಾರಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿರುವುದರ ಹಿಂದಿನ ಗುಟ್ಟೆಂದರೆ, ಮೊದಲೇ ಮಾತುಕತೆ ಮಾಡಿಕೊಂಡು ತಮಗೆ ಇದೇ ಸ್ಥಳ ಬೇಕೆಂದು ಬುಕ್ ಮಾಡಿಕೊಂಡು ಬರುತ್ತಿದ್ದಾರೆ. ಒಂದು ವೇಳೆ ತಡವಾದಲ್ಲಿ ಬೇರೊಬ್ಬ ಅಧಿಕಾರಿ ಆ ಸ್ಥಳಕ್ಕೆ ಬಂದು ಬಿಟ್ಟರೆ ಎಂಬ ಆತಂಕ ಬೇರೆ.
ಎಡಬಿಡದ ಲಾಬಿ: ವಿಧಾನಸಭೆ ಚುನಾವಣೆ ಘೋಷಣೆಯಾದರೆ ಹಾಲಿ ಇರುವ ಮಂತ್ರಿ ಮಹೋದಯರು ಅಧಿಕಾರ ಕಳೆದುಕೊಳ್ಳುತ್ತಾರೆ. ಆ ನಂತರ ಇವರೇನೇ ಸರ್ಕಸ್ ಮಾಡಿದರೂ ಹಿರಿಯ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರ ಚಲಾಯಿಸಿ ವರ್ಗಾವಣೆ ಮಾಡುತ್ತಾರೆ. ಯಾರದೇ ವಶೀಲಿ ತಂದರೂ ವರ್ಗಾವಣೆ ಆಗುವುದು ಅಷ್ಟು ಸುಲಭದ ಕೆಲಸವಲ್ಲ. ಇದನ್ನು ಮನಗಂಡಿರುವ ಪೊಲೀಸ್ ಅಧಿಕಾರಿಗಳು ತಮಗೆ ಬೇಕಾದ ಶಾಸಕ, ಮಂತ್ರಿಗಳ ಮೂಲಕ ಈಗಲೇ ಲಾಬಿ ಮಾಡಿಸುತ್ತಿದ್ದಾರೆ. ತಮಗೆ ಬೇಕಾದ ಸ್ಥಳದಲ್ಲಿ ವರ್ಗಾವಣೆ ಮಾಡಿಸಿಕೊಟ್ಟರೆ ಸದಾ ಕಾಲ ನಿಷ್ಠರಾಗಿರುತ್ತೇವೆಂದು ವಿಶ್ವಾಸ ಗಿಟ್ಟಿಸಿಕೊಳ್ಳಲೆತ್ನಿಸುತ್ತಿದ್ದಾರೆ. ಇದೇ ವೇಳೆ ಶಾಸಕ, ಸಚಿವರೂ ಸಹ ತಮ್ಮ ಕೆಲಸಕ್ಕೆ ಅನುಕೂಲವಾದೀತು ಎಂಬ ಕಾರಣಕ್ಕೆ ಅಗತ್ಯ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಡುತ್ತಿದ್ದಾರೆ.
ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ಬಿಡುವಿಲ್ಲದ ವರ್ಗಾವಣೆ ಚಟುವಟಿಕೆ ನಡೆದಿದ್ದು, ಯಾರು ಎಲ್ಲಿಗೆ ವರ್ಗವಾಗಿ ಹೋಗುತ್ತಾರೆ, ಯಾರು ಮಹಾನಗರ ಪೊಲೀಸ್ ವ್ಯಾಪ್ತಿಗೆ ಬರುತ್ತಾರೆಂಬ ಸಂಪೂರ್ಣ ಚಿತ್ರಣ 15 ದಿನಗಳೊಳಗಾಗಿ ಕಾಣ ಸಿಗಲಿದೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

