ಅಡ್ಡದಾರಿ ಓಲೈಕೆಗೆ ಆಯೋಗ ಬ್ರೇಕ್
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 1
ಮತದಾನಕ್ಕೆ ದಿನಗಣನೆ ಶುರುವಾಗಿದೆ. ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸಲು ಅಭ್ಯರ್ಥಿಗಳು ಅಡ್ಡದಾರಿ ಹಿಡಿಯುವ ಸಂಭವ ಇರುವ ಕಾರಣ ಚುನಾವಣಾ ಆಯೋಗ ತನ್ನ ಕಾರ್ಯಾಚರಣೆ ಚುರುಕುಗೊಳಿಸಿದೆ. ಅಭ್ಯರ್ಥಿಗಳ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಅಕ್ರಮಗಳನ್ನು ಭೇದಿಸಲು ಹಾಗೂ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಚುನಾವಣಾ ಆಯೋಗ ರಚಿಸಿದ 54 ತಂಡಗಳು ಇಷ್ಟು ದಿನ ಚುರುಕಾಗಿ ಕಾರ್ಯನಿರ್ವಹಿಸಿವೆ. ಮತದಾನದ ಮುಂಚಿನ ಮೂರು ದಿನ ತೀವ್ರ ನಿಗಾ ವಹಿಸಿ ಕಾರ್ಯ ನಿರ್ವಹಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಎಲ್ಲ ತಂಡಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಭ್ಯರ್ಥಿಗಳು ಕ್ಷೇತ್ರದಲ್ಲಿ 2-3 ಹಂತಗಳಲ್ಲಿ ಪ್ರಚಾರ ನಡೆಸಿದ್ದಾರೆ. ಪಕ್ಷಗಳ ಅಭ್ಯರ್ಥಿಗಳು ತಮ್ಮ ಮುಖಂಡರನ್ನು, ಚಿತ್ರನಟರನ್ನು ಕರೆಯಿಸಿ ಪ್ರಚಾರ ಮಾಡಿದ್ದಾರೆ. ಮತದಾನಕ್ಕೆ ಮುನ್ನ 48 ಗಂಟೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಬಹಿರಂಗ ಪ್ರಚಾರ ಮುಗಿಸಿ ಮನೆ ಮನೆ ಭೇಟಿ ತವಕದಲ್ಲಿ ಅಭ್ಯರ್ಥಿಗಳಿದ್ದಾರೆ.
ಇಷ್ಟು ದಿನ ಬರೀ ಭಾಷಣ, ಮನವಿಗಳ ಮೂಲಕ ಮತದಾರರ ಓಲೈಕೆಗೆ ಯತ್ನಿಸಿದ ಅಭ್ಯರ್ಥಿಗಳು, ಇನ್ನು ಮುಂದೆ ಅಡ್ಡದಾರಿ ಹಿಡಿಯುವ ಲಕ್ಷಣಗಳು ಸಾಕಷ್ಟಿವೆ. ಮನೆ ಮನೆ ಭೇಟಿ ವೇಳೆ ಹಣ-ಹೆಂಡ ಹಾಗೂ ಇತರೆ ಆಮಿಷವೊಡ್ಡಿ ಮತಗಳನ್ನು ಪಡೆಯುವತ್ತ ಕೆಲ ಅಭ್ಯರ್ಥಿಗಳು ಚಿಂತನೆ ನಡೆಸಿರುವುದು ಹೊಸ ವಿಷಯವೇನಲ್ಲ.
ಆದರೆ, ಮತದಾರರಿಗೆ ಹಣ ಹಾಗೂ ವಸ್ತುಗಳನ್ನು ಹೇಗೆ ಮುಟ್ಟಿಸುವುದು ಎಂಬುದೇ ದೊಡ್ಡ ಚಿಂತೆ.
ಚುನಾವಣಾ ಆಯೋಗದ ಹದ್ದಿನ ಕಣ್ಣು ಎಲ್ಲ ಅಭ್ಯರ್ಥಿಗಳ ಮೇಲಿದ್ದು, ತುಸು ಹೆಚ್ಚು-ಕಡಿಮೆಯಾದರೂ ಅಕ್ರಮಗಳನ್ನು ಬಯಲು ಮಾಡಲು ಆಯೋಗದ ಫ್ಲೈಯಿಂಗ್ ಸ್ಕ್ಯಾಡ್, ಸ್ಟ್ಯಾಟಿಕ್ಸ್ ಸ್ಕ್ಯಾಡ್, ಖರ್ಚು-ವೆಚ್ಚ ನಿಗಾ ಸಮಿತಿಗಳು ಸಿದ್ಧವಾಗಿವೆ. ಹಗಲು-ರಾತ್ರಿ ಎನ್ನದೆ ಎಚ್ಚರ ವಹಿಸಿ ಕೆಲಸ ಮಾಡುತ್ತಿದ್ದು, ಸಂಶಯ ಬಂದ ವ್ಯಕ್ತಿಗಳನ್ನು ಹಾಗೂ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.
ಜಿಲ್ಲೆಗೆ ಬಂದು-ಹೋಗುವ ಎಲ್ಲ ವಾಹನಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದಲ್ಲದೆ ಆ ವಾಹನಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದಕ್ಕಿಂತ ಹೆಚ್ಚಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಲೆಕ್ಕ ಪತ್ರದ ಬಗ್ಗೆ ಲೆಕ್ಕಪತ್ರ ತಂಡ ಬಿಟ್ಟು ಬಿಡದೆ ಪರಿಶೀಲನೆ ನಡೆಸುತ್ತಿದ್ದು, ಅಭ್ಯರ್ಥಿ ತಾನು ಮಾಡುವ ಒಂದು ರುಪಾಯಿ ಖರ್ಚಿನ ವಿವರವನ್ನೂ ಈ ತಂಡಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಕತ್ತಲ ರಾತ್ರಿ: ಪ್ರತಿ ಚುನಾವಣೆಯಲ್ಲೂ ಮತದಾನ ಮುನ್ನಾ ದಿನವನ್ನು ಕತ್ತಲ್ ರಾತ್ ಎಂದೇ ಕರೆಯುತ್ತಾರೆ.
ಎಲ್ಲ ರೀತಿಯ ಸಮೀಕ್ಷೆಗಳಾದರೂ ಕೆಲವೊಮ್ಮೆ ಕತ್ತಲ್ ರಾತ್ ಪ್ರಭಾವದಿಂದ ಚುನಾವಣಾ ಫಲಿತಾಂಶದಲ್ಲಿ ಸಮೀಕ್ಷೆಗಳು ತಲೆಕೆಳಗಾದ ಉದಾಹರಣೆಗಳಿವೆ. ಆದರೆ, ಚುನಾವಣಾ ಆಯೋಗ ಪ್ರಥಮ ಬಾರಿಗೆ ಸಾಕಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸಿದ್ದು ಇಷ್ಟರ ಮಧ್ಯೆಯೂ ಅಭ್ಯರ್ಥಿಗಳು ಎಷ್ಟರ ಮಟ್ಟಿಗೆ ಈ ಅವಕಾಶ ಬಳಸಿಕೊಳ್ಳುವರು ಎಂಬುದನ್ನು ಕಾದು ನೋಡಬೇಕಿದೆ.
ವಸ್ತು ಆಮಿಷಕ್ಕೆ ಬ್ರೇಕ್
ಸೀರೆ, ಪಂಚೆ ಇನ್ನಿತರೆ ವಸ್ತುಗಳನ್ನು ಮತದಾರರಿಗೆ ಹಂಚುವುದಕ್ಕೂ ಈ ಬಾರಿ ಚುನಾವಣಾ ಆಯೋಗದ ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ಬ್ರೇಕ್ ಬಿದ್ದಿದೆ. ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಟಿಕೆಟ್ ಆಕಾಂಕ್ಷಿಗಳಲ್ಲಿ ಕೆಲವರು ಕೆಲವು ಪ್ರದೇಶಗಳಲ್ಲಿ ಸೀರೆ ಹಂಚಿದ್ದನ್ನು ಸ್ಮರಿಸಬಹುದು. ಆದರೆ, ಅಖಾಡ ಸಿದ್ಧವಾದ ನಂತರ ಯಾವುದೇ ಅಭ್ಯರ್ಥಿಯೂ ಮತದಾರರಿಗೆ ಆಮಿಷವೊಡ್ಡುವ ಧೈರ್ಯ ತೋರುತ್ತಿಲ್ಲ.
---
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

