ನಂದೇನಿದ್ದರೂ ಅಭಿವೃದ್ಧಿ ರಾಜಕಾರಣ
ಹುಬ್ಬಳ್ಳಿ: ನಾನು ಯಾರ ವಿರುದ್ಧ ಸುಖಾಸುಮ್ಮನೇ ಆರೋಪ ಮಾಡಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಪಾಲಿಟಿಕಲ್ ಗಿಮಿಕ್ ಮಾಡುವವನಂತೂ ಅಲ್ಲವೇ ಅಲ್ಲ. ನಂದೇನಿದ್ದರೂ ಅಭಿವೃದ್ಧಿ ರಾಜಕಾರಣ.
ಹೀಗೆಂದವರು ನವಲಗುಂದ ಶಾಸಕ, ಬಿಜೆಪಿ ಹುರಿಯಾಳು ಶಂಕರ ಪಾಟೀಲ ಮುನೇನಕೊಪ್ಪ.
ನನ್ನ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಯಾರ ವಿರುದ್ಧ ಆಪಾದನೆ ಮಾಡಿಲ್ಲ, ಮಾಡುವುದೂ ಇಲ್ಲ. ಇಂಥ ಒಣ ರಾಜಕಾರಣದಿಂದ ಏನನ್ನೂ ಸಾಧಿಸಲಾಗದು. ನಾನು ರಾಜಕಾರಣಕ್ಕೆ ಬಂದ ಉದ್ದೇಶ ಜನ ಸೇವೆ.
'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ಮುನೇನಕೊಪ್ಪ ಅಭಿವೃದ್ಧಿಯ ಮಂತ್ರ ಜಪಿಸಿದರಲ್ಲದೆ, ಜನಸೇವೆಗಾಗಿ ರಾಜಕೀಯ ಮಾಡುತ್ತೇನೆಂದು ಸ್ಪಷ್ಟಪಡಿಸಿದರು. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಜಯದ ದಡ ಸೇರಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿಗೆ ಒತ್ತು: ನವಲಗುಂದ ವಿಧಾನಸಭೆ ಕ್ಷೇತ್ರದ ಜನತೆ ತಮ್ಮ ಪರ ಒಲವು ಹೊಂದಿದ್ದಾರೆ. ಇದಕ್ಕೆ ಕಾರಣ ಅಭಿವೃದ್ಧಿ ಕಾರ್ಯ. ರೈತ ಬಂಡಾಯದ ನೆಲ ಹಾಗೂ ನಂಜುಂಡಪ್ಪ ವರದಿಯಲ್ಲಿ ಅತೀ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ನವಲಗುಂದದ ಚಿತ್ರಣ ಇಂದು ಬದಲಾಗಿದೆ. ನವಲಗುಂದ ಅಭಿವೃದ್ಧಿಯತ್ತ ಮುಖ ಮಾಡಿದೆ.
5 ವರ್ಷದ ಅಭಿವೃದ್ಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ನವಲಗುಂದವನ್ನು ಪ್ರಮುಖವಾಗಿ ಕಾಡುತ್ತಿದ್ದ ಸಮಸ್ಯೆ ಕುಡಿಯುವ ನೀರಿನದ್ದು. ಇದಕ್ಕೆ ಪ್ರಥಮ ಆದ್ಯತೆ ನೀಡಿದೆ. ಹತ್ತಾರು ಕೋಟಿ ರುಪಾಯಿಯ ಯೋಜನೆಯ ಮೂಲಕ ಕುಡಿಯುವ ನೀರಿನ ಬವಣೆ ನೀಗಿಸಿದೆ. ಶೈಕ್ಷಣಿಕ ಸಮಸ್ಯೆಗೆ ಒತ್ತು ನೀಡಿದೆ. ನವಲಗುಂದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು ಸವಾಲೇ ಆಗಿತ್ತು. ಹೀಗಿದ್ದಾಗ ದಿಟ್ಟತನದಿಂದ ರಸ್ತೆ ಅಭಿವೃದ್ದಿಗೆ ಆದ್ಯತೆ ನೀಡಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿಗೊಳಿಸಲು ಸರ್ಕಾರದಿಂದ ಅನುದಾನ ತರುವಲ್ಲಿ ಸಫಲನಾದೆ. ನೆರೆ ಬಂದ ಪರಿಣಾಮ ಬಡ ಬಗ್ಗರ, ರೈತರ ಮನೆಗಳು ನೀರು ಪಾಲಾಗಿದ್ದವು, ಅಂಥವರಿಗೆ ಮನೆ ನಿರ್ಮಿಸಿಕೊಡುವಲ್ಲಿ ಮುತುವರ್ಜಿ ವಹಿಸಿದೆ. ಕುಮಾರವ್ಯಾಸ ಭವನ ನಿರ್ಮಾಣ, ಕೆರೆ ನಿರ್ಮಾಣ, ನೀರಾವರಿ ಕಾಲುವೆ ನವೀಕರಣ, ಅಣ್ಣಿಗೇರಿ ತಾಲೂಕು ರಚನೆಯಂಥ ಹತ್ತು ಹಲವು ಯೋಜನೆ ಜಾರಿಗೆ ತಂದಿದ್ದೇನೆ. ಪ್ರಮುಖವಾಗಿ ಹಿಂದುಳಿದವರ, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ, ರೈತರಿಗೆ ಬೆಳೆ ವಿಮೆ ಕೊಡಿಸುವಲ್ಲಿ ಶ್ರಮಿಸಿದ್ದೇನೆ. ಹೀಗಾಗಿ ಅಭಿವೃದ್ಧಿಯ ಹೊಳೆಯೇ ನವಲಗುಂದ ಕ್ಷೇತ್ರದಲ್ಲಿ ಹರಿದಿರುವಾಗ ಜನ ಖಂಡಿತವಾಗಿ ಇದಕ್ಕೆ ಮನ್ನಣೆ ನೀಡುತ್ತಾರೆಂಬ ವಿಶ್ವಾಸವಿದೆ ಎಂದರು.
ಮಾತು ಉಳಿಸಿಕೊಂಡಿದ್ದೇನೆ: 2008ರ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದ ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದ್ದಾಗ ಜನರಿಗೆ ಅನೇಕ ಭರವಸೆ ಕೊಟ್ಟಿದ್ದೆ. ನವಲಗುಂದದ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತೇನೆ ಎಂದು ಹೇಳಿದ್ದೇ. 5 ವರ್ಷಗಳಲ್ಲಿ ನಾನು ಮಾಡಿದ ಸಾಧನೆಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿಕೊಂಡಾಗ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆಂಬ ತೃಪ್ತಿ ನನಗಿದೆ.
ವಿರೋಧಿಗಳ ಬಳಿ ಅಸ್ತ್ರವಿಲ್ಲ: ನನ್ನ ಪ್ರತಿಸ್ಪರ್ಧಿಗಳು ಯಾರು ಎಂದು ನಾನು ಹೇಳಲಾರೆ ಜನರೇ ಈ ನಿರ್ಧಾರ ಕೈಗೊಳ್ಳುತ್ತಾರೆ. ನಾನು ಅಭಿವೃದ್ಧಿ ನೆಚ್ಚಿಕೊಂಡು ಚುನಾವಣೆ ಅಖಾಡಕ್ಕೆ ಇಳಿದಿದ್ದೇನೆ. ನಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಗಮನಿಸಿ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ. ವಿರೋಧ ಪಕ್ಷದ ಬಗ್ಗೆಯಾಗಲಿ, ಅಭ್ಯರ್ಥಿಯ ಬಗ್ಗೆಯಾಗಲಿ ಟೀಕಿಸಿ ರಾಜಕೀಯದ ಮೆಟ್ಟಿಲೇರಬೇಕೆಂಬ ಖಯಾಲಿ ನನಗಿಲ್ಲ. ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆಂಬ ವಿಶ್ವಾಸವಿದೆ.
ನಾನು ಅಭಿವೃದ್ಧಿಯ ಮಂತ್ರ ಜಪಿಸುತ್ತಾ ಜನರ ಬಳಿ ಮತ ಕೇಳುತ್ತಿದ್ದೇನೆ. ಇದೇ ವೇಳೆ ನನ್ನ ವಿರುದ್ಧ ವಿರೋಧ ಪಕ್ಷಗಳ ಬಳಿ ಚುನಾವಣೆಗೆ ಅಸ್ತ್ರವೇ ಇಲ್ಲ. ಅಭಿವೃದ್ಧಿ ಮಾಡಿಲ್ಲ ಎಂದರೆ ಜನ ಕೇಳಲ್ಲ. ಸ್ವಚ್ಛ, ಸುಂದರ, ಪ್ರಾಮಾಣಿಕ ಆಡಳಿತ ನಡೆಸಿರುವ ನಾನು ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸವಿದೆ ಎಂದರು.
ಮಾದರಿ ಕ್ಷೇತ್ರದ ಕನಸು
ನವಲಗುಂದದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ ಎಂದ ಮಾತ್ರಕ್ಕೆ ಎಲ್ಲವನ್ನೂ ಮಾಡಿ ಮುಗಿಸಿದ್ದೇನೆಂದು ಹೇಳಿಕೊಳ್ಳಲಾರೆ. ಸಾಕಷ್ಟು ಸಮಸ್ಯೆಗಳಿಂದ ಹಾಸುಹೊಕ್ಕಿದ್ದ ನವಲಗುಂದದ ಚಿತ್ರಣವನ್ನಂತೂ ಬದಲು ಮಾಡಿದ್ದೇನೆ. ನೀರಾವರಿ, ಕುಡಿಯುವ ನೀರಿನ ಸಮಸ್ಯೆಯನ್ನು ಕ್ಷೇತ್ರದಿಂದ ಸಂಪೂರ್ಣವಾಗಿ ದೂರ ಮಾಡಬೇಕೆಂದು ನಿರ್ಧರಿಸಿದ್ದೇನೆ. ನವಲಗುಂದವನ್ನು ಮಾದರಿ ಕ್ಷೇತ್ರವನ್ನಾಗಿಸಬೇಕೆಂದು ಕನಸು ಹೊತ್ತಿದ್ದು, ಈ ಕನಸು ಸಾಕಾರಗೊಳಿಸಲು ಜನ ಆಶೀರ್ವದಿಸುತ್ತಾರೆಂಬ ವಿಶ್ವಾಸವಿದೆ.
-ಶಂಕರ ಪಾಟೀಲ್ ಮುನೇನಕೊಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

