ಮತಪಟ್ಟಿಯಲ್ಲಿ ಗೊಂದಲ
ಕ.ಪ್ರ. ವಾರ್ತೆ ಧಾರವಾಡ ಮೇ 3-
ಪ್ರಥಮ ಬಾರಿಗೆ ಎಲ್ಲ ಅರ್ಹ ಮತದಾರರೂ ಮತದಾನದಲ್ಲಿ ಪಾಲ್ಗೊಳ್ಳಲು ಹತ್ತಾರು ಪ್ರಚಾರ ತಂತ್ರಗಳ ಮೂಲಕ ಚುನಾವಣಾ ಆಯೋಗ ಮತದಾರರ ಜಾಗೃತಿ ಕಾರ್ಯ ಮಾಡುತ್ತಿದೆ. ಇದರ ಪರಿಣಾಮ ಸಾವಿರಾರು ಅರ್ಹ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ.
ಆದರೆ, ಹೆಸರು ನೋಂದಾಯಿಸಿದ ಸಾವಿರಾರು ಜನರ ಪೈಕಿ ಅನೇಕರ ಹೆಸರುಗಳು ಮತದಾರರ ಪಟ್ಟಿಗೆ ಸೇರಿಲ್ಲ. ಪ್ರಥಮ ಬಾರಿಗೆ ಮತದಾನ ಮಾಡುವ ಹುಮ್ಮಸ್ಸಿನಲ್ಲಿದ್ದ ಯುವಕರು, ವರ್ಗಾವಣೆ ಬಯಸಿದವರು ಹೊಸ ಮತಪಟ್ಟಿಯಲ್ಲಿ ತಮ್ಮ ಹೆಸರು ಎಲ್ಲಿದೆ ಎಂದು ಹುಡುಕಾಡಿದ್ದೇ ಬಂತು. ಹೆಸರು ಮಾತ್ರ ಕಾಣುತ್ತಿಲ್ಲ. ಹೆಸರು ನೋಂದಾಯಿಸುವಾಗ ಅಗತ್ಯ ದಾಖಲೆಗಳನ್ನು ನೀಡಿದ್ದರೂ ಮತಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎನ್ನುವ ಗೊಣಗಾಟ ಕೇಳಿ ಬರುತ್ತಿದೆ.
ಮತದಾನದಿಂದ ಹೊರಗೆ: 'ಹುಬ್ಬಳ್ಳಿಯ ಗೋಕುಲ ರಸ್ತೆಯ ಮಂಜುನಾಥ ನಗರದ ನಿವಾಸಿಗಳಾಗಿದ್ದ ನಾವು ಎರಡು ವರ್ಷಗಳಿಂದ ಧಾರವಾಡದ ಸಾಧನಕೇರಿಯಲ್ಲಿ ನೆಲೆಸಿದ್ದೇವೆ. ಅಲ್ಲಿಯ ಮತ ಹಕ್ಕನ್ನು ಕಡಿತಗೊಳಿಸಿ ನೂತನವಾಗಿ ಇಲ್ಲಿ ಮತದಾರರಾಗ ಬಯಸಿದ್ದೆವು. ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ, ಮತಪಟ್ಟಿಯಲ್ಲಿ ನಮ್ಮ ಹೆಸರು ಕಾಣುತ್ತಿಲ್ಲ' ಎಂದು ಸಿದ್ದಯ್ಯ ಹಿರೇಮಠ ಬೇಸರ ವ್ಯಕ್ತಪಡಿಸುತ್ತಾರೆ. ಅರ್ಜಿ ಸಲ್ಲಿಸಿದ್ದರೂ ಇಂಥ ನೂರಾರು ಜನರು ಈ ಬಾರಿ ಮತದಾನದಿಂದ ವಂಚಿತರಾಗಿದ್ದಾರೆ.
ಕಡಿತಗೊಂಡ ಹೆಸರುಗಳು: ಚುನಾವಣಾ ಸಿಬ್ಬಂದಿ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ವಹಿಸಿದ್ದಾರೆಂದರೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಿದ ಅನೇಕರ ಹೆಸರುಗಳ ಮುಂದೆ ಡಿಲೀಟ್ ಎಂದು ಬರೆಯಲಾಗಿದೆ. 14ನೇ ವಾರ್ಡ್ನ 127ನೇ ಬೂತ್ನಲ್ಲಿ ಗೌರಿ ಹಂಪಸಾಗರ, 61ನೇ ಬೂತ್ನ ಅನುಷಾ ಮುತಾಲಿಕ ದೇಸಾಯಿ, ಬಾಲಕೃಷ್ಣ ದೇಸಾಯಿ ಹಾಗೂ ಅನೂಪ ದೇಸಾಯಿ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಹೊಸ ಮತಪಟ್ಟಿಯಲ್ಲಿ ಅವರ ಹೆಸರುಗಳು ಕಡಿತಗೊಂಡಿವೆ. ಗಿರೀಶ ಮುತ್ಸದ್ದಿ ಎಂಬುವರ ಹೆಸರಿನ ಮುಂದೆ ಇನ್ನೊಬ್ಬರ ಭಾವಚಿತ್ರವಿದೆ. ವಯಸ್ಸೂ ತಪ್ಪಾಗಿದೆ. ಅಧಿಕಾರಿಗಳ ಪ್ರಮಾದದಿಂದ ಅರ್ಹರು ಮತದಾನದಿಂದ ವಂಚಿತರಾಗಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಜಿಲ್ಲಾಧಿಕಾರಿ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
ಚುನಾವಣಾ ಆಯೋಗ ಒಂದೆಡೆ 'ಯುವಕರೇ ಮತದಾನ ಮಾಡಿ, ಮತದಾನ ನಿಮ್ಮ ಹಕ್ಕು' ಮುಂತಾದ ಘೋಷಣೆಗಳ ಮೂಲಕ ಸಾಕಷ್ಟು ಪ್ರಚಾರ ನಡೆಸಿದೆ. ಬೀದಿ ನಾಟಕ, ಸಭೆ-ಸಮಾರಂಭ ಇತ್ಯಾದಿಗಳ ಮೂಲಕ ಮತ ಹಾಕುವಂತೆ ಒತ್ತಾಯಿಸುತ್ತಿದೆ. ಮತ್ತೊಂದೆಡೆ ಆಯೋಗದ ಅವಾಂತರಗಳಿಂದಾಗಿಯೇ ಸಾವಿರಾರು ಜನ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಖೊಟ್ಟಿ ಮತದಾನ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡುವ ಇವರು ಸಾವಿರಾರು ಜನರಿಗೆ ಮತವೇ ಇಲ್ಲದಂತೆ ಮಾಡಿದ್ದಾರೆ. ಇವರಿಗೆ ಎಂಥ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಾರೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದು ವಿವಿಧೆಡೆ ಮತದಾರರು ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಸರಿಪಡಿಸುವುದಾಗಿ ಹೇಳಿದ್ದರು. ಆದರೆ, ವಿಧಾನಸಭಾ ಚುನಾವಣೆಯಲ್ಲೂ ಇಂಥದೇ ತಪ್ಪು ಮರುಕಳಿಸಿದೆ ಎಂದು ಜನತೆ ದೂರಿದ್ದಾರೆ.
ಚುನಾವಣಾ ಆಯೋಗ ಒಂದೆಡೆ 'ಯುವಕರೇ ಮತದಾನ ಮಾಡಿ, ಮತದಾನ ನಿಮ್ಮ ಹಕ್ಕು' ಮುಂತಾದ ಘೋಷಣೆಗಳ ಮೂಲಕ ಸಾಕಷ್ಟು ಪ್ರಚಾರ ನಡೆಸಿದೆ. ಬೀದಿ ನಾಟಕ, ಸಭೆ-ಸಮಾರಂಭ ಇತ್ಯಾದಿಗಳ ಮೂಲಕ ಮತ ಹಾಕುವಂತೆ ಒತ್ತಾಯಿಸುತ್ತಿದೆ. ಮತ್ತೊಂದೆಡೆ ಆಯೋಗದ ಅವಾಂತರಗಳಿಂದಾಗಿಯೇ ಸಾವಿರಾರು ಜನ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಖೊಟ್ಟಿ ಮತದಾನ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡುವ ಇವರು ಸಾವಿರಾರು ಜನರಿಗೆ ಮತವೇ ಇಲ್ಲದಂತೆ ಮಾಡಿದ್ದಾರೆ. ಇವರಿಗೆ ಎಂಥ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಾರೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

