ಧಾರವಾಡ

ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ

Published On :

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಈಗ ಏಳು-ಬೀಳುಗಳ ಲೆಕ್ಕಾಚಾರದ್ದೇ ಭರಾಟೆ.  ಇದುವರೆಗೆ ವಿಧಾನಸಭೆ ಚುನಾವಣೆಯ ಪ್ರಚಾರದ ಅಬ್ಬರ ಪೂರ್ಣಗೊಂಡು, ಭಾನುವಾರ ಮತದಾನವೂ ಮುಗಿಯಿತು. ಸದ್ಯ ರಾಜಕೀಯ ಕ್ಷೇತ್ರದ ಮಟ್ಟಿಗೆ ಮಳೆ ಬಂದು ಹೋದ ವಾತಾವರಣ ನಿರ್ಮಾಣಗೊಂಡಿದೆ.
ಮೇ 8ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿರುವ ಹಿನ್ನಲೆಯಲ್ಲಿ ರಾಜಕಾರಣದಲ್ಲಿ ಆತಂಕ ಹಾಗೂ ಕುತೂಹಲಗಳೆರಡೂ ಸೃಷ್ಟಿ ಮಾಡಿವೆ. ವಿದ್ಯುನ್ಮಾನ ಮತಪೆಟ್ಟಿಗೆಯಲ್ಲಿ ಭದ್ರವಾಗಿರುವ ಫಲಿತಾಂಶ ಪ್ರಕಟಗೊಳ್ಳಲು ಇನ್ನೂ ಒಂದೇ ದಿನ ಬಾಕಿ ಇದ್ದು, ಈಗ ಎಲ್ಲೆಡೆ ಫಲಿತಾಂಶ ಕುರಿತಾದ ಲೆಕ್ಕಾಚಾರದ್ದೇ ಮಾತುಗತೆಗಳು ಬಿರುಸಿನಿಂದ ಸಾಗಿವೆ.
ವಿವಿಧ ಕ್ಷೇತ್ರಗಳಲ್ಲಿ ನಡೆದ ಮತದಾನದ ಆಧಾರದ ಮೇಲೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ತಮಗೆ ಆಗಬಹುದಾದ ಲಾಭ-ನಷ್ಟಗಳ ವಿಚಾರ ನಡೆಸಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ನಡೆದ ಮತದಾನದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಫಲಿತಾಂಶದ ಅಂದಾಜು ಲೆಕ್ಕಾಚಾರ ಈಗಾಗಲೇ ಲಭಿಸಿದೆ. ಗೆಲುವಿನ ಸಾಧ್ಯತೆ ಹೆಚ್ಚಾಗಿರುವ ಅಭ್ಯರ್ಥಿಗಳಲ್ಲಿ ಫಲಿತಾಂಶದ ಕುತೂಹಲ ಮೂಡಿದ್ದರೆ, ಗೆಲುವಿನ ಸಾಧ್ಯತೆ ಕಡಿಮೆ ಇರುವ ಅಭ್ಯರ್ಥಿಗಳು ಪವಾಡದ ನಿರೀಕ್ಷೆಯಲ್ಲಿದ್ದಾರೆ.  ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದ ಮಧ್ಯೆಯೂ ಬಹುತೇಕ ಅಭ್ಯರ್ಥಿಗಳು ಮತದಾನದ ಹಿಂದಿನ ರಾತ್ರಿ ಹಣದ ಹೊಳೆಯನ್ನೇ ಹರಿಸಿದ್ದು, ಈ ಹಣದಿಂದ ತಮಗಾಗಿರುವ ಲಾಭ-ನಷ್ಟಗಳ ಲೆಕ್ಕಾಚಾರವೂ ನಡೆದಿದೆ. ಪ್ರತಿಯೊಬ್ಬ ಮತದಾರನಿಗೆ 100ರಿಂದ 500 ರವರೆಗೆ ಹಣ ಹಂಚಲಾಗಿದೆ. ಬಹುತೇಕ ಅಭ್ಯರ್ಥಿಗಳು ಕ್ಷೇತ್ರದಲ್ಲಿನ ಒಂದಿಷ್ಟು ಮತದಾರರಿಗೆ ಹಣ ಹಂಚಿದ್ದು, ಹಣ ಪಡೆದ ಮತದಾರ ಯಾವ ಅಭ್ಯರ್ಥಿಗೆ ಮತದಾನ ಮಾಡಿದ್ದಾನೆ ಎಂಬ ಲೆಕ್ಕಾಚಾರವೂ ಅಭ್ಯರ್ಥಿಗಳು ಹಾಗೂ ಆತನ ಬೆಂಬಲಿಗರ ತಲೆ ಕೊರೆಯುತ್ತಿದೆ.
ಮೊಬೈಲ್ ಸ್ವಿಚ್ ಆಫ್ : ಈ ಮಧ್ಯೆ ಕೆಲ ಅಭ್ಯರ್ಥಿಗಳು ತಮ್ಮ ಗೆಲುವು-ಸೋಲಿನ ಬಗ್ಗೆ ಜೋತಿಷ್ಯದ ಮೊರೆ ಹೋಗಿದ್ದರೆ, ಇನ್ನೂ ಕೆಲವರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ವಿಶೇಷ ಪೂಜೆಗಳಲ್ಲಿ ನಿರತರಾಗಿದ್ದಾರೆ. ಕೆಲವರಂತೂ ಕಳೆದ ಸುಮಾರು 20 ದಿನಗಳಿಂದ ನಡೆದ ಪ್ರಚಾರದಿಂದ ಬೇಸತ್ತಿದ್ದು, ಬೇಸರ ಕಳೆಯಲು ಪ್ರವಾಸಕ್ಕೆ ತೆರಳಿದ್ದಾರೆ. ಕೆಲ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತಮ್ಮ ಮೋಬೈಲ್ ಫೋನ್ ಸ್ವಿಚ್ ಆಫ್ ಮಾಡಿ, ತಮ್ಮ ಇರುವಿಕೆಯನ್ನೂ ಗುಪ್ತವಾಗಿಟ್ಟಿದ್ದಾರೆ. ತಮ್ಮ ವಿಶ್ರಾಂತಿಗೆ ಭಂಗವಾಗಬಾರದೆಂದೋ ಅಥವಾ ಚುನಾವಣಾ ವೆಚ್ಚಕ್ಕೆ ಪಡೆದಿರುವ ಸಾಲದಿಂದ ತಪ್ಪಿಸಿಕೊಳ್ಳಲೋ ಇವರು ತಮ್ಮ ಮೋಬೈಲ್ ಸ್ವಚ್ ಆಫ್ ಮಾಡಿರಬಹುದೆಂದು ಊಹಿಸಲಾಗುತ್ತಿದೆ.ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗಷ್ಟೇ ನಡೆದ ಚುನಾವಣೆಯ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳನೇಕರು ತಮಗೆ ವಿಧಾನಸಭೆ ಚುನಾವಣೆಯಲ್ಲಿ ಆಗಬಹುದಾದ ಲಾಭ-ನಷ್ಟಗಳ ಬಗ್ಗೆ ಈ ಮೊದಲು ಒಂದಿಷ್ಟು ಅಂದಾಜು ಲೆಕ್ಕಾಚಾರ ಮಾಡಿದ್ದರು. ಆದರೆ, ಭಾನುವಾರದ ಮತದಾನದ ನಂತರ ಈ ಮೊದಲಿನ ಲೆಕ್ಕಾಚಾರಗಳು ಬಹುತೇಕ ತಲೆಕೆಳಗಾಗುವ ಸಾಧ್ಯತೆಗಳು ಗೋಚರಿಸುತ್ತಿವೆ.
ಭಾರಿ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಇಟ್ಟುಕೊಂಡವರಲ್ಲಿ ಕೆಲವರು ಕಡಿಮೆ ಅಂತರದಿಂದ ಗೆಲ್ಲುವ ಸಾಧ್ಯತೆ ಇದ್ದರೆ, ಇನ್ನೂ ಕೆಲವರ ನಿರೀಕ್ಷೆಗಳೇ ಸುಳ್ಳಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.  ಕಳೆದ ಬಾರಿ ಒಂದು ಪಕ್ಷದಿಂದ ಸ್ಪರ್ಧಿಸಿ, ಈ ಬಾರಿ ಬೇರೆ ಪಕ್ಷದಿಂದ ಕಣಕ್ಕಿಳಿದವರು ಹೆಚ್ಚು ಆತಂಕದಲ್ಲಿದ್ದಾರೆ. ಈ ಬಾರಿ ಗೆಲ್ಲದೇ ಇದ್ದಲ್ಲಿ ಮುಂದಿನ ರಾಜಕೀಯ ನಡೆದೆ ತೊಂದರೆಯಾದೀತೆಂಬ ಆತಂಕ ಇವರದ್ದು.
ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಯ ಸೋಲು-ಗೆಲುವಿನ ಲೆಕ್ಕಾಚಾರ, ಆತಂಕ, ಕುತೂಹಲ, ಪವಾಡಗಳ ನಿರೀಕ್ಷೆಗಳು ಫಲಿತಾಂಶದ ದಿನವಾದ ಮೇ 8ರವರೆಗೂ ಮುಂದುವರೆಯಲಿದ್ದು, ಫಲಿತಾಂಶದ ಅವಧಿ ಸಮೀಪಿಸುತ್ತಿದ್ದಂತೆಯೇ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಎದೆಬಡಿತ ಹೆಚ್ಚಾಗುವುದು ಖಚಿತ.
- ಆನಂದ್ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.