ಬಿಜೆಪಿ ಭದ್ರಕೋಟೆ ಉಳಿಸಿಕೊಂಡಿತೇ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 7
ಪೇಡಾ ನಗರಿಯ ಸಿಹಿ ಯಾರಿಗೆ ದಕ್ಕಲಿದೆ?
ಚುನಾವಣೆಯ ಅಂತಿಮ ಘಟ್ಟಕ್ಕೆ ಬಂದು ತಲುಪಿರುವಾಗ ಈ ಪ್ರಶ್ನೆ ಉದ್ಭವಿಸಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ತವರು ಜಿಲ್ಲೆ ಧಾರವಾಡ ಬಿಜೆಪಿಯ ಭದ್ರಕೋಟೆಯೂ ಹೌದು. ಹೀಗಿದ್ದಾಗಿಯೂ ಬಿಜೆಪಿ ವಿರೋಧಿ ಅಲೆ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸುವುದೇ?
ಕಾಂಗ್ರೆಸ್, ಕೆಜೆಪಿ, ಜೆಡಿಎಸ್ ಭೇದತಂತ್ರ ಫಲಿಸುವುದೇ ಎಂಬ ಕುತೂಹಲ ಜನತೆಯಲ್ಲಿ ಮನೆ ಮಾಡಿದೆ.
ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ ಪೈಕಿ 6 ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಲಘಟಗಿ ಒಂದು ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು. ಆದರೆ ಪ್ರಸ್ತುತ ರಾಜಕೀಯ ಬೆಳವಣಿಗೆ ಹಾಗೂ ವಿಶ್ಲೇಷಣೆಯ ಮೇಲೆ ಕಣ್ಣು ಹಾಯಿಸಿದರೆ, ಬಿಜೆಪಿ ಕಳೆದ ಬಾರಿಯ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾದೀತು ಎಂದೇ ಲೆಕ್ಕಿಸಲಾಗಿದೆ.
ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಶಾಸಕಿ ಸೀಮಾ ಮಸೂತಿ, ಕಾಂಗ್ರೆಸ್ನ ವಿನಯ ಕುಲಕರ್ಣಿ ಹಾಗೂ ಕೆಜೆಪಿಯ ತವನಪ್ಪ ಅಷ್ಟಗಿ ನಡುವೆ ಹಣಾಹಣಿ ನಡೆದಿದ್ದು, ಸೀಮಾ ಗೆಲವಿನ ಸೀಮೆ ದಾಟುವುದು ಕಷ್ಟ ಎಂದೇ ಹೇಳಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ವೀರಭದ್ರಪ್ಪ ಹಾಲಹರವಿಯವರ ಹಾಲ್ ಸರಿಯಾಗಿಲ್ಲ ಎಂದೇ ಹೇಳಲಾಗುತ್ತಿದೆ. ಇಲ್ಲಿ ಕಾಂಗ್ರೆಸ್ನ ಪ್ರಸಾದ ಅಬ್ಬಯ್ಯ ಹಾಗೂ ಕೆಜೆಪಿ ಅಭ್ಯರ್ಥಿ ಶಂಕರಣ್ಣ ಬಿಜವಾಡಗೆ ವಿಜಯಲಕ್ಷ್ಮಿ ಅರಸಿ ಬರಲಿದ್ದಾಳೆ ಎನ್ನಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ 5ನೇ ಬಾರಿ ಗೆಲವನ್ನರಸಿ ಸಿಎಂ ಜಗದೀಶ ಶೆಟ್ಟರ್ ಹೊರಟಿದ್ದಾರೆ. ಶೆಟ್ಟರ್ ಗೆಲ್ಲುವುದು ಸರಳ ಸಾಧ್ಯ. ಏಕೆಂದರೆ ಅವರಿಗೆ ಸರಿಸಾಟಿಯಾದ ಅಭ್ಯರ್ಥಿಗಳು ಇಲ್ಯಾರೂ ಇಲ್ಲ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಮಾತ್ರ ಗೊಂದಲದ ಗೂಡಾಗಿದೆ. ಶಾಸಕ ಚಂದ್ರಕಾಂತ ಬೆಲ್ಲದ ಪುತ್ರ ಅರವಿಂದ ಬೆಲ್ಲದ ಬಿಜೆಪಿ ಅಭ್ಯರ್ಥಿಯಾಗಿದ್ದು, ತಮ್ಮ ಪಕ್ಷದವರ ಒಳ ಹೊಡೆತ ಅನುಭವಿಸಿದ್ದಾರೆ. ಇಲ್ಲಿ ಕಾಂಗ್ರೆಸ್ನ ಎಸ್. ಆರ್. ಮೋರೆಯೇ ಗೆಲ್ಲುವು ಕುದುರೆ ಎಂದು ಬಿಂಬಿತವಾಗಿದೆ.
ನವಲಗುಂದ ಬಿಜೆಪಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಎರಡನೇ ಅವಕಾಶಕ್ಕಾಗಿ ಕಾದು ನೋಡುತ್ತಿದ್ದಾರೆ. ಸೋತು ಸುಣ್ಣವಾಗಿರುವ ಅಭ್ಯರ್ಥಿಗಳೇ ಮುನೇನಕೊಪ್ಪ ಅವರಿಗೆ ಎದುರಾಳಿಯಾಗಿದ್ದಾರೆ. ಅಭಿವೃದ್ಧಿ ಹಾಗೂ ವೈಯಕ್ತಿಕ ವರ್ಚಸ್ಸು ಮುನೇನಕೊಪ್ಪ ಗೆಲವಿಗೆ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಕುಂದಗೋಳದ ಚಿತ್ರಣ ಅಸ್ಪಷ್ಟವಾಗಿದೆ. ಬಿಜೆಪಿಯಿಂದ ಶಾಸಕರಾಗಿದ್ದ ಎಸ್.ಐ. ಚಿಕ್ಕನಗೌಡ್ರ ಕೆಜೆಪಿ ಅಭ್ಯರ್ಥಿ, ಹೀಗಾಗಿ ಎಂ.ಆರ್. ಪಾಟೀಲ ಬಿಜೆಪಿ ಅಭ್ಯರ್ಥಿ. ಇನ್ನು ಜೆಡಿಎಸ್ನಿಂದ ಎಂ. ಎಸ್. ಅಕ್ಕಿ ಹಾಗೂ ಸಿ. ಎಸ್. ಶಿವಳ್ಳಿ ಕಾಂಗ್ರೆಸ್ ಹುರಿಯಾಳು. ಇವರೆಲ್ಲರೂ ಸಮಬಲವುಳ್ಳವರು ಎಂಬುದು ಗಮನಾರ್ಹ. ಜಾತಿ ಲೆಕ್ಕಾಚಾರ ಕೆಲಸ ಮಾಡಿದರೆ ಲಿಂಗಾಯತರಾದ ಪಾಟೀಲ, ಅಕ್ಕಿ, ಚಿಕ್ಕನಗೌಡ್ರ ನಡುವೆ ಮತ ಹರಿದು ಹಂಚಿ ಹೋಗಲಿವೆ. ಕುರುಬ ಸಮುದಾಯದವರಾದ ಶಿವಳ್ಳಿ ಲಾಭ ಪಡೆಯಲಿದ್ದಾರೆ. ಇನ್ನು ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸಂತೋಷ ಲಾಡ್ ಗೆಲವಿನ ನಗೆ ಬೀರಲಿದ್ದಾರೆನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಹಾಗೂ ಅಭಿವೃದ್ಧಿ ಕೆಲಸ ಮಾಡಿರುವುದು ಲಾಡ್ ಗೆಲವಿಗೆ ರಹದಾರಿಯಾಗಿದೆ. ಆದರೆ ಕಳೆದ ಬಾರಿಯ ಅಂತರ ಕಾಯ್ದುಕೊಳ್ಳುವುದು ಲಾಡ್ಗೆ ಕಷ್ಟವಾಗಲಿದೆ. ಕೆಜೆಪಿ ಅಭ್ಯರ್ಥಿ ನಿಂಬಣ್ಣವರ ಹಾಗೂ ಜೆಡಿಎಸ್ನ ಪಿ.ಸಿ. ಸಿದ್ಧನಗೌಡ್ರ ಮತದಾರರ ಮನ ತಮ್ಮತ್ತ ಒಲಿಸಿಕೊಂಡಿದ್ದಾರೆ. ಅಂತಿಮ ಹಂತದಲ್ಲಿ ಈ ರೀತಿಯ ಲೆಕ್ಕಾಚಾರ ನಡೆದಿದ್ದು, ಇಂದು ಮಧ್ಯಾಹ್ನದ ಹೊತ್ತಿಗಾಗಲೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

