ಮತದಾನ ಹಕ್ಕು ಕಳಕೊಂಡ 5 ಸಾವಿರ ವಿಡಿಯೋಗ್ರಾಫರ್ಸ್
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 7
ಮತದಾನ ಪವಿತ್ರ. ಎಲ್ಲರೂ ತಪ್ಪದೆ ಮತ ಹಾಕುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಎಂದು ಡಂಗುರ ಸಾರಿದ್ದ ಸರ್ಕಾರ ಹಾಗೂ ಜಿಲ್ಲಾಡಳಿತ, ತಾನು ಸೇವೆಗೆ ಬಳಸಿಕೊಂಡವರನ್ನೇ ಮತದಾನದಿಂದ ವಂಚಿತರನ್ನಾಗಿ ಮಾಡಿದೆ.
ಮತ ಜಾಗೃತಿ ಹಾಗೂ ಮತದಾನದ ಪ್ರತಿಯೊಂದು ವಿದ್ಯಮಾನವನ್ನು ದಾಖಲಿಸಿಕೊಂಡ ವಿಡಿಯೋಗ್ರಾಫರ್ಸ್ಗೆ ಮತದಾನ ಮಾಡಲು ಸಮಯಾವಕಾಶವೇ ಸಿಕ್ಕಿಲ್ಲ. 224ರ ಪೈಕಿ 223 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ತಡೆಯಲು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲು ಮುಂದಾದ ಜಿಲ್ಲಾಡಳಿತ ಪ್ರತಿ ಕ್ಷೇತ್ರಕ್ಕೂ 30-40 ವಿಡಿಯೋಗ್ರಾಫರ್ ನೇಮಕ ಮಾಡಿದೆ. ಲೆಕ್ಕ ಹಾಕಿದರೆ 9 ಸಾವಿರ ವಿಡಿಯೋಗ್ರಾಫರ್ಸ್ ಕಾರ್ಯನಿರ್ವಹಿಸಿದ್ದಾರೆ. ಈ ಪೈಕಿ ಕೇವಲ 3-4 ಸಾವಿರ ವಿಡಿಯೋಗ್ರಾಫರ್ಸ್ ಸ್ಥಳೀಯರಾಗಿದ್ದರಿಂದ ಸಮಯ ಸಿಕ್ಕಾಗ ಮತ ಚಲಾಯಿಸಿದ್ದಾರೆ. ಉಳಿದ 5 ಸಾವಿರ ಮಂದಿ ಮತದಾನದಿಂದ ವಂಚಿತರಾಗಿದ್ದಾರೆ.
ಕಾರ್ಯನಿಮಿತ್ತ ನಿಯೋಜನೆಯಾಗಿದ್ದ ಇವರೆಲ್ಲ ವಿವಿಧೆಡೆ ಕೆಲಸ ಮಾಡಿದ್ದಾರೆ. ಕೆಲವರು ಬೇರೆ ಊರುಗಳಲ್ಲೂ ಕರ್ತವ್ಯಕ್ಕೆ ತೆರಳಿದ್ದರು. ಬೆಳಗ್ಗೆ 6 ಗಂಟೆಯಿಂದ ರಾತ್ರಿ ವರೆಗೂ ಚಿತ್ರೀಕರಣ ಮಾಡುವಲ್ಲಿ ನಿರತರಾಗಿದ್ದಾರೆ. ಮತದಾನ ಮಾಡುವುದಕ್ಕೆ ಆಗಿಲ್ಲ. ನಮಗೆ ಮತದಾನ ಮಾಡುವ ಭಾಗ್ಯವೇ ಇರಲಿಲ್ಲ. ಇದೆಲ್ಲ ಕರ್ತವ್ಯದಿಂದ ಆಗಿರುವ ಸಮಸ್ಯೆ ಎಂದು ವಿಷಾದಿಸಿದರು.
ಅಂಚೆ ಮತ ಹಕ್ಕು ಕೊಡಿ: ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಹಕ್ಕು ಅತ್ಯಂತ ಪವಿತ್ರ. ಅದನ್ನು ಚಲಾಯಿಸಬೇಕು ಎಂದು ಚುನಾವಣಾ ಆಯೋಗ ಪ್ರಚಾರ ಮಾಡುತ್ತದೆ, ಜಾಗೃತಿ ಮೂಡಿಸುತ್ತಿದೆ. ಇಂಥ ಸ್ಥಿತಿಯಲ್ಲಿ ನಮಗೆ ಮತದಾನ ಹಕ್ಕೇ ಇಲ್ಲದಂತೆ ಆಗಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡುತ್ತಾರೆ ವಿಡಿಯೋಗ್ರಾಫರ್ಸ್. ಚುನಾವಣೆ ಕಾರ್ಯಕ್ಕೆ ನಿಯೋಜನೆಯಾದ ಸಾವಿರಾರು ಮತದಾರರು ತಮ್ಮ ಹಕ್ಕನ್ನೇ ಕಳೆದುಕೊಳ್ಳುತ್ತಾರೆ. ಸರ್ಕಾರ ತನ್ನ ನೌಕರರಿಗೆ ಅಂಚೆ ಮತದಾನ ಮಾಡುವ ಹಕ್ಕು ನೀಡಿದೆ. ಖಾಸಗಿಯಾಗಿ ಚುನಾವಣೆ ಕೆಲಸ ಮಾಡುವವರಿಗೂ ಅಂಚೆ ಮತದಾನ ಮಾಡುವ ಹಕ್ಕು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದಿನ ಚುನಾವಣೆ ವೇಳೆಗಾದರೂ ಚುನಾವಣೆ ಆಯೋಗ ಕ್ರಮ ಕೈಗೊಂಡು ಚುನಾವಣೆ ಕಾರ್ಯಕ್ಕೆ ನಿಯೋಜನೆಯಾಗುವ ಖಾಸಗಿಯವರಿಗೂ ಮತದಾನ ಮಾಡುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಾವು ಚುನಾವಣೆ ಕಾರ್ಯ ಮಾಡಲು ನಿರಾಕರಿಸುತ್ತೇವೆ. ಚುನಾವಣೆ ಕೆಲಸ ಎಷ್ಟು ಮುಖ್ಯವೋ ಮತದಾನವೂ ಅಷ್ಟೇ ಮುಖ್ಯ. ಆದ್ದರಿಂದ ನಮಗೂ ಮತದಾನ ಮಾಡುವ ಹಕ್ಕು ನೀಡಿ ಎಂದು ಆಗ್ರಹಿಸಿದ್ದಾರೆ.
ನಮಗೂ ಸಿಗಲಿ ಮತಹಕ್ಕು: ಈಗಿರುವ ವ್ಯವಸ್ಥೆಯಲ್ಲಿ ನಮಗೆ ಮತದಾನ ಮಾಡುವುದಕ್ಕೆ ಆಗುವುದಿಲ್ಲ. ಸರ್ಕಾರಿ ನೌಕರರಿಗೆ ನೀಡುವ ಅಂಚೆ ಮತದಾನದ ಹಕ್ಕನ್ನು ನಮಗೂ ನೀಡಿ, ಮತ ಚಲಾಯಿಸಲು ಅನುಕೂಲ ಮಾಡಿಕೊಡಬೇಕು ಎಂದು ವಿಡಿಯೋಗ್ರಾಫರ್ಗಳು ಆಗ್ರಹಿಸುತ್ತಿದ್ದಾರೆ.
- ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

