ಧಾರವಾಡ

ಭೂಬಾಡೆದಾರರ ಕನಸು ನನಸಾಗುವುದೇ?

Published On :

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸ್ಥಿರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಪಾಲಿಕೆ ಆಡಳಿತವೂ ಕೈ ಪಾಲಾಗುವುದು ನಿಸ್ಸಂಶಯ. ಶಾಶ್ವತ ಸೂರು ಹೊಂದಬೇಕೆಂಬ ಅವಳಿನಗರದ ಭೂಬಾಡೆದಾರರ ಕನಸು ನನಸಾಗುತ್ತಾ? ಇಂಥ ಚರ್ಚೆ ಹುಬ್ಬಳ್ಳಿ-ಧಾರವಾಡದಲ್ಲಿ ಆರಂಭವಾಗಿದೆ. ಪಾಲಿಕೆ ಒಡೆತನದ ಸ್ಥಿರಾಸ್ತಿಯಲ್ಲಿ ದಶಕಗಳಿಂದ ವಾಸವಿರುವ ಭೂಬಾಡೆದಾರರು, ಸರ್ಕಾರದ ದ್ವಂದ್ವ ನಿಲುವಿನಿಂದಾಗಿ 1994ರಿಂದ ಆಯಾ ಆಸ್ತಿಗಳನ್ನು ಬಳಸುತ್ತಿರುವ ಮಾಲೀಕರು ಭೂಬಾಡೆ (ಲೀಸ್ ಹಣ) ಕಟ್ಟಲು ಸಾಧ್ಯವಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದರು.
ಭೂಬಾಡೆ ಸಂದಾಯ ಮಾಡಲು ಪಾಲಿಕೆಗೆ ಅನೇಕರು ಎಡತಾಕಿದರೂ ಅಧಿಕಾರಿ ಗಳು ಹಣ ಜಮಾ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಚನೆ ಬಂದಿಲ್ಲ ಎಂದು ಹೇಳಿ ಮರಳಿ ಕಳಿಸುತ್ತಿದ್ದರು.   ಬಿಜೆಪಿ ನೇತೃತ್ವದ ಸರ್ಕಾರ, ಭೂಬಾಡೆದಾರರಿಗೆ ಅನುಕೂಲ ಕಲ್ಪಿಸುವ ಜತೆಗೆ ಪಾಲಿಕೆ ಆದಾಯ ಹೆಚ್ಚಿಸಲು ಮುಂದಾಗಿದ್ದರ ಪರಿಣಾಮ ಚುನಾವಣೆ ಪೂರ್ವದಲ್ಲಿ ಭೂಬಾಡೆ ಮಾಲೀಕರು ಹೊಂದಿದ ಆಸ್ತಿಯ ಒಟ್ಟು ವಿಸ್ತೀರ್ಣ ಸೇರಿ ಮತ್ತಿತರ ಮಾಹಿತಿ ಕಲೆ ಹಾಕಿ ಅವರಿಂದ ಹಣ ಭರಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಭೂಬಾಡೆ ಜಮಾ ಮಾಡಲು ಮೇ 31 ಕೊನೆ ದಿನವಾಗಿಸಿದ್ದು, ಶ್ರೀಸಾಮಾನ್ಯರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಈ ದಿನಾಂಕ ವಿಸ್ತರಿಸಬೇಕೆಂಬ ಕೂಗು ಕೇಳಿಬರುತ್ತಿದೆ.
3000: ಅವಳಿ ನಗರದಲ್ಲಿ 3,000ಕ್ಕೂ ಹೆಚ್ಚು ಪಾಲಿಕೆ ಒಡೆತನದ ಆಸ್ತಿಗಳನ್ನು ಭೂಬಾಡಿಗೆ ಆಧಾರದಡಿ ಪಡೆದು ಜನರು ವಾಸವಾಗಿದ್ದಾರೆ. ಈ ಪೈಕಿ 2,500ಕ್ಕೂ ಹೆಚ್ಚು ಆಸ್ತಿಗಳ ವಿಸ್ತೀರ್ಣ, ಮತ್ತಿತರ ಮಾಹಿತಿಗಳು ಪಾಲಿಕೆಯಲ್ಲಿವೆ. ಮಿಕ್ಕ ಆಸ್ತಿಗಳ ಬಗ್ಗೆ ಪಾಲಿಕೆಯಲ್ಲಿ ಮಾಹಿತಿ ಇಲ್ಲ! ಇಂಥ ಪ್ರಕರಣಗಳಿಗೆ ಪರಿಹಾರ ಕಲ್ಪಿಸುವುದು ಅಧಿಕಾರಿಗಳಿಗೀಗ ಸವಾಲಾಗಿದ್ದು ಸುಳ್ಳಲ್ಲ. ಪಾಲಿಕೆ ಖುಲ್ಲಾ ಜಾಗೆಗಳಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿ ದಶಕಗಳಿಂದ ವಾಸವಾಗಿರುವ ನೂರಾರು ಉದಾಹರಣೆಗಳಿವೆ. ಇಂಥ ಮನೆಗಳ ಮಾಲೀಕರು ನೀರು, ವಿದ್ಯುತ್ ಸಂಪರ್ಕ ಹೊಂದಿದ್ದು ಅಚ್ಚರಿ ಮೂಡಿಸುವಂತಿದೆ.
ಕೋಟ್ಯಂತರ ಆದಾಯ: ಭೂಬಾಡೆ ವಸೂಲಿ ಕಾರ್ಯಾಚರಣೆ ಸೂಕ್ತ ರೀತಿ ನಡೆದರೆ ಪಾಲಿಕೆಗೆ ಕೋಟ್ಯಂತರ ಆದಾಯ ಬರುತ್ತದೆ. ಅದರಿಂದ ಅವಳಿನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಅವಳಿ ನಗರದಲ್ಲಿ ಆಗಬೇಕಾದ ಕಾರ್ಯಗಳು ಬೆಟ್ಟದಷ್ಟಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಪಾಲಿಕೆ ಪ್ರತಿಸಲ ಸರ್ಕಾರದ ಎದುರು ಕೈಚಾಚುವುದಕ್ಕಿಂತ ತನ್ನದೇ ಆದ ಮೂಲಗಳಿಂದ ಆದಾಯ ಹೆಚ್ಚಿಸಿಕೊಂಡಲ್ಲಿ ಕ್ಷಿಪ್ರಗತಿಯಲ್ಲಿ ಮಹಾನಗರವನ್ನು ಮಾದರಿ ನಗರವಾಗಿಸಬಹುದು.
ಶಾಶ್ವತ ಸೂರು ಕಲ್ಪನೆ: ಶಾಶ್ವತ ಸೂರು ಹೊಂದಬೇಕೆಂಬ ಮಹದಾಸೆಯುಳ್ಳ ಆಯಾ ಭೂಬಾಡೆದಾರರಿಗೆ ಪಾಲಿಕೆ ತುಂಡು ಭೂಮಿಗಳನ್ನು ಮಾರಿದಲ್ಲಿ ಒಂದೆಡೆ ಬಡವರ ಆಸೆ ಈಡೇರಿಸಿದಂತಾಗುತ್ತದೆ. ಮತ್ತೊಂದೆಡೆ ಪಾಲಿಕೆಗೆ ಹೆಚ್ಚಿನ ಆದಾಯ ಬರಲಿದೆ. ತುಂಡು ಭೂಮಿ ಖರೀದಿಸಲು ಇಚ್ಛಿಸುವರರ ಸಂಖ್ಯೆ ಸಿಂಹಪಾಲಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳು ಭೂಬಾಡಿಗೆ ಹಣ ಭರಿಸಿಕೊಂಡು ಆಯಾ ಮಾಲೀಕರಿಗೆ ಮಾರುವುದಕ್ಕೆ ಸಂಬಂಧಿಸಿದಂತೆ ಕಡತಗಳನ್ನು ಸಾಮೂಹಿಕವಾಗಿ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಗೆ ಕಳಿಸುವ ವ್ಯವಸ್ಥೆ ಮಾಡುವಂತೆ ಸರ್ಕಾರ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡಬೇಕಿದೆ.
ಅನಾನುಕೂಲ: 10-20 ವರ್ಷಗಳಿಂದ ಕಟ್ಟದಿರುವ ಭೂಬಾಡಿಗೆಯನ್ನು ಏಕಕಾಲಕ್ಕೆ ಜಮಾ ಮಾಡಬೇಕೆಂಬ ಸರ್ಕಾರದ ಆದೇಶ, ಬಡವರ ಪಾಲಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಈ ವ್ಯವಸ್ಥೆಯಿಂದ ಭೂಬಾಡೆ ಸಂದಾಯ ಮಾಡಬೇಕೆಂಬ ಉದ್ದೇಶವಿದ್ದರೂ ಏಕಕಾಲಕ್ಕೆ ಸಾವಿರಾರು ರು.  ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕುಟುಂಬಗಳಿಗೆ ಅನುಕೂಲವಾಗುವಂತೆ ಭೂಬಾಡೆ ಕಂತುಗಳಲ್ಲಿ ತುಂಬಲು ಅವಕಾಶ ಕಲ್ಪಿಸಿಕೊಡಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ. ಅಲ್ಲದೇ, ಹಣ ಜಮಾ ಮಾಡಬೇಕಾದ ಕಾಲಾವಧಿಯನ್ನೂ ವಿಸ್ತರಿಸಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿವೆ.
ರಾಜ್ಯದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿದ್ದು, ಪಾಲಿಕೆ ಆಡಳಿತವೂ ಕೈ ಪಾಲಾಗುವುದು ನಿಸ್ಸಂಶಯ. ಬಡವರಿಗೆ ಅನುಕೂಲವಾಗುವಂತೆ ಭೂಬಾಡೆ ಪಾವತಿಸಿಕೊಂಡು ಆಯಾ ಮಾಲೀಕರಿಗೆ ತುಂಡು ಭೂಮಿಗಳನ್ನು ಮಾರಲು ಸರ್ಕಾರ, ಪಾಲಿಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.