ಧಾರವಾಡ

ಸಚಿವ ಸ್ಥಾನಕ್ಕೆ ಶಿವಳ್ಳಿ ಲಾಬಿ

Published On :

ಕುಂದಗೋಳ: ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಇದೀಗ ಗೆಲವು ಸಾಧಿಸಿದ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಲಾಭಿ ಶುರುವಾಗಿದೆ.
ಜಿಲ್ಲೆಯ ನಾಲ್ವರೂ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿದ್ದು, ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಸಹ ಮಂತ್ರಿಗಿರಿ ಪಡೆಯಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಪಕ್ಷ ಸಂಘಟನೆ, ನಿಷ್ಠೆ, ಜಾತಿ ಲೆಕ್ಕಾಚಾರ ಎಲ್ಲವೂ ಇದೀಗ ಮಂತ್ರಿ ಪದವಿಯ ಹಾದಿಯಲ್ಲಿ ಪರಿಗಣಿಸಲ್ಪಡುತ್ತಿದೆ.
ಶಿವಳ್ಳಿ ಅವರು ಕುರುಬ ಜನಾಂಗಕ್ಕೆ ಸೇರಿದ್ದು, ಮಖ್ಯಮಂತ್ರಿಗಳು ತಮ್ಮದೆ ಜನಾಂಗದ ಶಿವಳ್ಳಿ ಅವರಿಗೆ ಮಂತ್ರಿ ಸ್ಥಾನ ಕೊಡುತ್ತಾರೆಂಬ ಮಾತುಗಳು ಸಹ ಎಲ್ಲೆಡೆ ಕೇಳಿ ಬರುತ್ತಿವೆ. ಇದರ ಹೊರತಾಗಿ ಶಿವಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀರಾ ಆಪ್ತರು. ಸಿದ್ದರಾಮಯ್ಯ, ಶಿವಳ್ಳಿಯವರ ಚುನಾವಣಾ ಪ್ರಚಾರದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಇದನ್ನು ಗಮನಿಸಿದಾಗ ಶಿವಳ್ಳಿಯವರಿಗೆ ಮಂತ್ರಿ ಪದವಿ ಕೊಡಿಸುವಲ್ಲಿಯೂ ಸಿದ್ಧರಾಮಯ್ಯ ಹಿಂದೆ ಬೀಳುವುದಿಲ್ಲ ಎನ್ನಲಾಗುತ್ತಿದೆ.  ಇನ್ನು ಪಕ್ಷ ಸಂಘಟನೆಯಲ್ಲಿಯೂ ಶಿವಳ್ಳಿಯವರ ಸೇವೆ ಪರಿಗಣನೆಗೆ ಒಳಪಡುತ್ತದೆ. ಶಿವಳ್ಳಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾದ ಶಿವಳ್ಳಿ ಕಾಂಗ್ರೆಸ್ ಸೇರಿ ನಿಷ್ಠೆ ಮೆರೆದಿದ್ದಾರೆ. ಇದೀಗ 2ನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಇವರು ಸಚಿವ ಸ್ಥಾನ ನೀಡಬೇಕೆಂದು ತಾಲೂಕಿನಲ್ಲಿ ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಮೊದಲ ಹಂತದಲ್ಲಿ ರಾಜ್ಯ ಕಾಂಗ್ರೆಸ್ಸಿಗರ ಮನಮೊಲಿಸಲು ಯಶಸ್ವಿಯಾಗಿರುವ ಶಿವಳ್ಳಿ, ಇದೀಗ ದೆಹಲಿಯಲ್ಲಿ ವರಿಷ್ಠರ ಮನ ಗೆಲ್ಲಲು ಹತ್ತಾರು ರೀತಿಯ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.   ಕುಂದಗೋಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎಂ.ಎಸ್. ಕಟಗಿ ಹೊರತುಪಡಿಸಿ ಮತ್ತಾವ ಶಾಸಕರು ಇಲ್ಲಿಯ ವರೆಗೆ ಸಚಿವರಾಗಿಲ್ಲ ಎಂಬುದು ಚುನಾವಣಾ ಇತಿಹಾಸ ಹೇಳುತ್ತದೆ. ಎರಡು ಮತ್ತು ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರೂ ಸಹ ಸಚಿವರಾಗಲು ವಿವಿಧ ಕಾರಣಗಳಿಂದ ಸಾಧ್ಯವಾಗಿಲ್ಲ.  ಪ್ರಸ್ತುತ ಕಾಂಗ್ರೆಸ್ ಬಹುಮತ ಪಡೆದಿದ್ದು, ಶಿವಳ್ಳಿಗೆ ಸಚಿವ ಸ್ಥಾನ ಸಿಗುವ ಅವಕಾಶ ಹೆಚ್ಚಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಕಲಘಟಗಿ ಕ್ಷೇತ್ರದಿಂದ 2ನೇ ಬಾರಿಗೆ ಆಯ್ಕಾಯಾದ ಶಾಸಕ ಸಂತೋಷ ಲಾಡ್, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹಾಗೂ ಕುಂದಗೋಳ ಶಾಸಕ ಸಿ. ಎಸ್. ಶಿವಳ್ಳಿ ಈ ಮೂವರು ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ. ಕುಂದಗೋಳ ತಾಲೂಕು ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದ್ದು, ಶಿವಳ್ಳಿ ಅವರು ಸಚಿವರಾಗಿ ತಾಲೂಕನ್ನು ಸುಧಾರಿಸಲಿ ಎಂಬುದು ಕ್ಷೇತ್ರದ ಮತದಾರರ ಆಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.