ಡೊನೇಶನ್ ತಡೆಗಟ್ಟಿ
ಹುಬ್ಬಳ್ಳಿ: ಪಿಯುಸಿ ಪ್ರವೇಶ ಪ್ರಕ್ರಿಯೆ ಮೇ 24ರಿಂದ ಪ್ರಾರಂಭಗೊಳ್ಳಲಿದ್ದು, ಈ ಅವಧಿಯಲ್ಲಿ ನಡೆಯುವ ಡೊನೇಶನ್ ಹಾವಳಿ ತಪ್ಪಿಸುವಂತೆ ನಗರದ ಶ್ರೀ ಗಜಾನನ ಮಹಾಮಂಡಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಪಿಯುಸಿ ಪ್ರವೇಶ ಪ್ರಕ್ರಿಯೆ ಮುಂಚೆಯೇ ನಗರದ ಕಾಲೇಜುಗಳಲ್ಲಿ ಡೊನೇಶನ್ ಅವ್ಯವಹಾರ ನಡೆದಿದ್ದು, ಇದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಡೊನೇಶನ್ ಹಾವಳಿ ತಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಡೊನೇಶನ್ ತಡೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾಂಡಳದ ಅಧ್ಯಕ್ಷ ಡಿ. ಗೋವಿಂದರಾವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ. ಪಿಯುಸಿ ಪ್ರವೇಶದಲ್ಲಿ ಸರ್ಕಾರದ ಆದೇಶದಂತೆ ಅನುದಾನಿತ ಕಾಲೇಜುಗಳು ಶೇ. 80ರಷ್ಟು ಸರ್ಕಾರಿ ಕೋಟಾದಡಿ ಹಾಗೂ ಶೇ. 20ರಷ್ಟು ಮ್ಯಾನೇಜಮೆಂಟ್ ಕೋಟಾದಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಆದರೆ ಕಾಲೇಜುಗಳ ಮ್ಯಾನೇಜಮೆಂಟ್ನವರು ಕಾನೂನು ಬಾಹಿರವಾಗಿ ಬೇಕಾಬಿಟ್ಟಿ ಡೊನೇಶನ್ ಪಡೆಯುತ್ತಿದ್ದಾರೆ ಎಂದು ಗೋವಿಂದರಾವ್ ದೂರಿದ್ದಾರೆ. ಡೊನೇಶನ್ ಪಡೆಯುವ ಕಾಲೇಜುಗಳ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವ ಜೊತೆಗೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಮ್ಮತನ ಕುಂಠಿತ: ಶ್ರೀ
ಹುಬ್ಬಳ್ಳಿ: ಯುವ ಜನತೆ ಮೇಲೆ ವಿದೇಶದ ಪ್ರಭಾವ ಹೆಚ್ಚಾಗುತ್ತಿರುವುದರಿಂದ ಅವರಲ್ಲಿ ನಮ್ಮತನ ಕುಂಠಿತಗೊಳ್ಳುತ್ತಿದೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಬಸವ ಜಯಂತಿ ಅಂಗವಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಸಮಿತಿ-2013 ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಚಿಂತನೆಗಳು, ವಚನ ಪಠಣಗಳಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವುದರಿಂದ ಯುವಕರಲ್ಲಿ ನಮ್ಮತನದ ಅರಿವು ಮೂಡುತ್ತದೆ. ಯುವಕರ ವಿಚಾರಶೈಲಿ ಬದಲಾಗುತ್ತದೆ. ದೇಶದ ಸಂಸ್ಕೃತಿಗೆ ಹೆಚ್ಚಿನ ಬೆಲೆ ಲಭಿಸುತ್ತದೆ ಎಂದರು. ಅತಿಥಿಗಳಾಗಿದ್ದ ನವನಗರದ ವೀರಶೈವ ಸಂಘಟನಾ ಸಮಿತಿ ನಿರ್ದೇಶಕಿ ಕಸ್ತೂರಿ ಪಾಟೀಲ, ದ್ರಾಕ್ಷಾಯಿಣಿ ಪಾಟೀಲ ಹಾಗೂ ಪ್ರಿಯಾ ಭೂಸದ ಮಾತನಾಡಿದರು. ಅನಸೂಯಾ ಅರಕೇರಿ, ತಾರಾದೇವಿ ವಾಲಿ, ಚನ್ನಬಸಪ್ಪ ಧಾರವಾಡಶೆಟ್ರು, ವೀರಪ್ಪ ಎಮ್ಮಿ, ವೀರೇಶ ನೀಲನೂರ ಇದ್ದರು. ರವಿಕುಮಾರ ಬಡ್ನಿ ಸ್ವಾಗತಿಸಿದರು. ಅಮರೇಶ ಹಿಪ್ಪರಗಿ ನಿರೂಪಿಸಿದರು. ಈಶ್ವರ ಶಿರಸಂಗಿ ವಂದಿಸಿದರು.
ರೈಲಿಗೆ ತಾತ್ಕಾಲಿಕ ನಿಲುಗಡೆ
ಹುಬ್ಬಳ್ಳಿ: ಬಾಗಲಕೋಟೆ-ಸೊಲ್ಲಾಪುರ ಪ್ಯಾಸೆಂಜರ್ ರೈಲು (ನಂ. 57642) ಹುಬ್ಬಳ್ಳಿ ರೇಲ್ವೆ ವಿಭಾಗದ ಬಾಗಲಕೋಟೆ-ಸೊಲ್ಲಾಪುರ ಘಟಕ ಬಳಿಯ ನಿಂಬಾಳ ಮತ್ತು ಇಂಡಿ ರಸ್ತೆ ಮಧ್ಯದ ಚೋರ್ಗಿಹಾಲ್ಟ್ ನಿಲ್ದಾಣದಲ್ಲಿ ಒಂದು ನಿಮಿಷದ ವರೆಗೆ ತಾತ್ಕಾಲಿಕ ನಿಲುಗಡೆಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

