ಧಾರವಾಡ

ಸಮರ್ಥರಾಗಿ ಬದುಕಲು ಶಿಕ್ಷಣ ಬೇಕು: ಸಿದ್ದೇಶ್ವರ ಶ್ರೀ

Published On :

ಧಾರವಾಡ:  ಸುಂದರ, ಸಮರ್ಥರಾಗಿ ಬದುಕಬೇಕೇ ಹೊರತು ಬಡವರಾಗಿ ಅಲ್ಲ. ಅದಕ್ಕಾಗಿ ನಮಗೆ ಶಿಕ್ಷಣ ಬೇಕು. ಅದು ಬದುಕನ್ನು ಉತ್ತಮಗೊಳಿಸುವಂತಿಬೇಕು ಎಂದು ಬಿಜಾಪುರದ ಜ್ಞಾನ ಯೋಗಾಶ್ರವುದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಭಾನುವಾರ ಗಾಂಧಿಭವನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಂಪರ್ಕ ಶಿಕ್ಷಣ ವಿದ್ಯಾಲಯ ಬಾಹ್ಯ ಪರೀಕ್ಷಾ ವಿಭಾಗದ ಸುವರ್ಣ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನ ಇರುವ ತನಕ ಪ್ರಾಮಾಣಿಕವಾಗಿ ದುಡಿಯುವುದನ್ನು ಕಲಿಯಬೇಕು. ಜೊತೆಗೆ ಆ ಜೀವನದ ಕ್ರಮವನ್ನು ಅನುಭವಿಸಬೇಕು. ಮುಖದ ಮೇಲೆ ಪ್ರಸನ್ನತೆಯ ನಗು ಇರದೇ ಹೋದರೆ ಏನು ಉಪಯೋಗ, ಜೀವನವೆಂದರೆ ಒಂದು ಸುಂದರ ದೀಪವಿದ್ದಂತೆ. ದೇಹ ಒಂದು ಶಮೆ ಎಂದ ಅವರು, ನಾವು ಮಾಡುವ ಯಾವುದೇ ಕಾಯಕದಲ್ಲಿ ಸಂತೋಷ ಕಂಡುಕೊಳ್ಳಬೇಕು. ಆಗಲೇ ವಿಕಾಸ ಹೊಂದಲು ಸಾಧ್ಯ. ಶಿಕ್ಷಣದ ಉದ್ದೇಶವೂ ಇದೇ ಆಗಿದೆ ಎಂದು ಅಭಿಪ್ರಾಯಪಟ್ಟರು.
ಯಶಸ್ಸು ಖಚಿತ: ಸಮಾರಂಭ ಉದ್ಘಾಟನೆ ಹಾಗೂ ಸಂಪರ್ಕ ಶಿಕ್ಷಣ ವಿದ್ಯಾಲಯದ ಬೈಲಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಸಂಪರ್ಕ ಶಿಕ್ಷಣ ವಿದ್ಯಾಲಯದ ಹಳೆ ವಿದ್ಯಾರ್ಥಿ ಶಂಕರ ಬಿದರಿ, ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಪದವೀಧರರಾಗಲು ಅವಕಾಶ ಮಾಡಿಕೊಟ್ಟ ಗೌರವ ಮಾತೃ ಸಂಸ್ಥೆ ಕವಿವಿಗೆ ಸಲ್ಲುತ್ತದೆ ಎಂದರು. ಸಿನೆಮಾ ತಾರೆ ಹಾಗೂ ಸಂಪರ್ಕ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿನಿ ಅನು ಪ್ರಭಾಕರ, ನಾನು ಓದುವ ಈ ಪವಿತ್ರ ಸ್ಥಳದಲ್ಲಿ ಸನ್ಮಾನ ಸ್ವೀಕರಿಸುತ್ತಿರುವ ನಾನು ಧನ್ಯಳು ಎಂದರು. ಇದೇ ಸಂದರ್ಭದಲ್ಲಿ ನಿವೃತ್ತ ಪರೀಕ್ಷಾ ನಿಯಂತ್ರಣಾಧಿಕಾರಿ ಎಸ್.ಬಿ. ಶಾಪೇಟಿ ಅವರನ್ನು ಸನ್ಮಾನಿಸಲಾಯಿತು. ಕುಲಪತಿ ಡಾ.ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಸಂಪರ್ಕ ಶಿಕ್ಷಣ ವಿದ್ಯಾಲಯದ ನಿರ್ದೇಶಕ ಡಾ.ಸಿ. ರಾಜಶೇಖರ ಇದ್ದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಂ. ನಾಗಯ್ಯ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಡಾ.ಕೆ.ಆರ್. ದುರ್ಗಾದಾಸ ಸ್ವಾಗತಿಸಿದರು. ಉಪ ನಿರ್ದೇಶಕ ಡಾ.ಬಿ.ಎಚ್. ನಾಗೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.