ಪಾಕ್ ಬೆದರಿಕೆ ಕರೆಗೆ ಕಿವಿಗೊಡದ ಪೊಲೀಸ್: ವಿಜಯ್ ಸಂಕೇಶ್ವರ್
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಮೇ 27
ತಮ್ಮ ಹಾಗೂ ಕುಟುಂಬ ಸದಸ್ಯರ ಮೊಬೈಲ್ಗೆ ಪಾಕಿಸ್ತಾನದಿಂದ ಕರೆಗಳು ಬರುತ್ತಿದ್ದು, ಈ ಬಗ್ಗೆ ಮಹಾನಗರ ಪೊಲೀಸ್ ಆಯುಕ್ತ ಪದ್ಮನಯನ ಅವರಿಗೆ ದೂರು ನೀಡಿದರೂ ಸ್ಪಂದಿಸದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ಕೂಡಲೇ ಸರ್ಕಾರ ಪದ್ಮನಯನ ಅವರನ್ನು ವರ್ಗಾಯಿಸಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ, ಉದ್ಯಮಿ ವಿಜಯ್ ಸಂಕೇಶ್ವರ್ ಒತ್ತಾಯಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 19ರಂದು ರಾತ್ರಿ 9.31ಕ್ಕೆ 92-300-7509123 ಸಂಖ್ಯೆಯಿಂದ ನಮ್ಮ ಮೊಬೈಲ್ನಲ್ಲಿ ಮಿಸ್ಕಾಲ್ಡ್ ಒಂದಿತ್ತು. ನಾನು ಪುನಾ ಆ ಸಂಖ್ಯೆಗೆ ಕರೆ ಮಾಡಿದಾಗ ಅತ್ತಿಂದ 'ನಾನು ದೆಹಲಿ ಮೂಲದ ಕಿರಣಕುಮಾರ ಶರ್ಮಾ, ಅಭಿನಂದನೆಗಳು ನೀವು 25 ಲಕ್ಷ ಗೆದ್ದಿದ್ದೀರಿ. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ನೀಡಿದರೆ ಅದಕ್ಕೆ ಹಣ ಹಾಕುತ್ತೇನೆ' ಎಂದಾಗ ನಾನು ಬೈದು ಫೋನಿಟ್ಟೆ. ಆ ಬಳಿಕ ಮೊಬೈಲ್ ಸಂಖ್ಯೆ ಗಮನಿಸಿದಾಗ ಅದು ಪಾಕಿಸ್ತಾನದಿಂದ ಬಂದಿದ್ದು ಎಂಬುದು ಖಾತ್ರಿಯಾಗಿ ತಕ್ಷಣ ಪೊಲೀಸ್ ಆಯುಕ್ತ ಪದ್ಮನಯನ ಅವರಿಗೆ ಕರೆ ಮಾಡಿದೆ. ಅವರು ಪ್ರತಿಕ್ರಿಯಿಸದಿದ್ದಾಗ ಡಿಸಿಪಿ ಶ್ರೀನಾಥ ಜೋಶಿಯವರಿಗೆ ಕರೆ ಮಾಡಿ ದೂರು ನೀಡಿದೆ. ಇದಾದ ಬಳಿಕ ಮಗ ಆನಂದ್, ಪತ್ನಿ ಲಲಿತಾ ಹಾಗೂ ಮಗಳಿಗೂ ಪಾಕಿಸ್ತಾನನಿಂದ ಕರೆಗಳು ಬಂದಿದ್ದವು. ಈ ಬಗ್ಗೆ ಮತ್ತೆ ಪದ್ಮಯನ ಅವರಿಗೆ ದೂರಿದರೆ, ಇದೇನು ಆತಂಕದ ವಿಷಯವಲ್ಲ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದರು ಎಂದರು.
ಪದ್ಮನಯನ ವರ್ಗಾವಣೆಗೆ ಆಗ್ರಹ: ಇದು ಕೇವಲ ತಮ್ಮ ಕುಟುಂಬದ ಪ್ರಶ್ನೆಯಲ್ಲ. ಹಲವರಿಗೆ ಇದೇ ರೀತಿಯ ಕರೆಗಳು ಬರುತ್ತಿವೆ. ಇದು ಇಡೀ ಹು-ಧಾದ ಸಮಸ್ಯೆ. ಪದ್ಮನಯನ ಈ ಸಂಗತಿ ಹಗುರವಾಗಿ ಪರಿಗಣಿಸಿದರೆ ಅನಾಹುತ ತಪ್ಪಿದ್ದಲ್ಲ. ಇಂಥ ಅಧಿಕಾರಿ ಹುಬ್ಬಳ್ಳಿಯಲ್ಲಿರುವುದು ದುರ್ದೈವ. ಇವರು ಆಯುಕ್ತರಾಗಿ ಬಂದಾಗಿನಿಂದ ಹುಬ್ಬಳ್ಳಿಯಲ್ಲಿ ಎಲ್ಲ ಅನೈತಿಕ ದಂಧೆಗಳು ಮತ್ತೆ ಚಿಗಿತುಕೊಂಡಿವೆ. ಇದನ್ನು ಮನಗಂಡು ಸರ್ಕಾರ ಈ ಕೂಡಲೇ ಪದ್ಮನಯನ ಅವರನ್ನು ವರ್ಗಾವಣೆ ಮಾಡಿಬೇಕು. ಈ ಕುರಿತು ಗೃಹ ಸಚಿವರಿಗೆ ದೂರು ನೀಡುತ್ತೇನೆಂದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಂಕೇಶ್ವರ, ದೇಶಕ್ಕೆ ಭದ್ರತೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಸತ್ತು ಹೋಗಿದೆ, ಕೊನೆ ಪಕ್ಷ ರಾಜ್ಯ ಕಾಂಗ್ರೆಸ್ ಸರ್ಕಾರವಾದರೂ ಜನತೆಗೆ ಭದ್ರತೆ ನೀಡಲಿ ಎಂದರು.
ಶೆಟ್ಟರ್-ಜೋಶಿ ಹಿತಾಸಕ್ತಿ: ಹುಬ್ಬಳ್ಳಿ ಏರ್ಪೋರ್ಟ್ಗೆಂದು ವಶಪಡಿಸಿಕೊಳ್ಳಲಾದ ಜಮೀನನ್ನು ಅನ್ಯ ಉದ್ದೇಶಕ್ಕೆ ಪರಬಾರೆ ಮಾಡಿರುವ ಹಿಂದೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿ ಸ್ವಹಿತಾಸಕ್ತಿ ಅಡಗಿದೆ. ಶೆಟ್ಟರ್ ಯಾವುದೇ ದೂರದೃಷ್ಟಿತ್ವ ಇಲ್ಲದ, ದೃಷ್ಟಿಮಂದವಾದ ನಾಯಕ. ಇನ್ನು ಜೋಶಿ ಬಾಲಿಶವಾಗಿ ಮಾತನಾಡುವ ವ್ಯಕ್ತಿ. ಇವರಿಂದಾಗಿ ಹು-ಧಾಕ್ಕೆ ಗ್ರಹಣ ಹಿಡಿದಿದೆ. ಪ್ರಸ್ತುತ ವಿಮಾನ ನಿಲ್ದಾಣವನ್ನು ಊರ ಹೊರಗೆ ವಿಶಾಲ ಜಾಗದಲ್ಲಿ ನಿರ್ಮಿಸುವಂತೆ ನಾನು ಸಲಹೆ ನೀಡಿದ್ದೇನೆ. ಆದರೆ, ಇದೀಗ ಜಮೀನು ಪರಬಾರೆಯಾಗಿರುವುದು ಗೊತ್ತಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

