ಧಾರವಾಡ

ನಮೋ ನಮೋ ಇದೇನಿದು?

Published On :

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರಿಗೆ ಹುಚ್ಚು ಹಿಡಿದಿದೆ. ಪ್ರಮೋದ ಮುತಾಲಿಕರ ಬಗ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಇಲ್ಲದೇ ಹೋದಲ್ಲಿ ತಕ್ಕ ಶಾಸ್ತಿ ಮಾಡಬೇಕಾದೀತು ಎಂದು ಶ್ರೀರಾಮ ಸೇನೆ, ನಮೋ ಬ್ರಿಗೇಡ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಪ್ರಮೋದ ಮುತಾಲಿಕರು ನಮೋ ಬ್ರಿಗೇಡ್ ಸಂಘಟನೆಯಡಿ ಮೋದಿಯವರ ಹೆಸರು ಹೇಳಿಕೊಂಡು ಹಣ ಸಂಗ್ರಹಿಸುತ್ತಾರೆಂದು ಲಿಂಗರಾಜ ಪಾಟೀಲ ಮಾಡಿರುವ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಘಟನೆಯ ಪ್ರಮುಖರಾದ ಸಿದ್ದಲಿಂಗ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ಮೋಹನಗೌಡ, ಮೋದಿ ಹೆಸರು ಹೇಳಿಕೊಂಡು ಪ್ರತಿಯೊಬ್ಬರಿಂದ ರು. 100 ಸಂಗ್ರಹಿಸಲಾಗುತ್ತಿದೆ ಎನ್ನುವ ಆರೋಪ ತಲೆ ಬುರುಡೆಯಿಲ್ಲದ್ದು ಎಂದು ಖಂಡಿಸಿದ್ದಾರೆ.
ಧರಣಿ ಸತ್ಯಾಗ್ರಹ: ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಹಿಂದೂ ಸಂಘಟನೆಯ ಪ್ರಮುಖರು, ಲಿಂಗರಾಜ ಪಾಟೀಲ ಅವರು ನೀಡಿರುವ ಹೇಳಿಕೆ ವೈಯಕ್ತಿಕವೋ ಅಥವಾ ಬಿಜೆಪಿ ಕೃಪಾಪೋಷಿತ ಹೇಳಿಕೆಯೋ ಎಂಬುದನ್ನು ಬರುವ ನ. 12ರೊಳಗಾಗಿ ಸ್ಪಷ್ಟಪಡಿಸಬೇಕು ಹಾಗೂ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಎಲ್ಲ ಬಿಜೆಪಿ ಜಿಲ್ಲಾ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಲಿಂಗರಾಜ ಪಾಟೀಲರು ಮಾಡಿರುವ ಆರೋಪ ಸಾಬೀತು ಪಡಿಸಬೇಕು. ಮೋದಿ ಹೆಸರು ಹೇಳಿಕೊಂಡು ಹಣ ಸಂಗ್ರಹಿಸಿದ್ದಾಗಿ ದಾಖಲೆ ಪ್ರಸ್ತುತ ಪಡಿಸಲಿ. ಅಗತ್ಯ ಬಿದ್ದಲ್ಲಿ ಬಹಿರಂಗ ಚರ್ಚೆಗೆ ಬರಲಿ ನಾವು ಸಿದ್ಧ ಎಂದು ಪ್ರಮುಖರು, ಕರ್ನಾಟಕ ಬಿಜೆಪಿ ಇಡೀ ರಾಜ್ಯವನ್ನು ಕೊಳ್ಳೆ ಹೊಡೆದಿದೆ. ಇವರು ಅಲಿಬಾಬಾ ಚಾಲಿಸ್ ಚೋರ್ ಜಾಯಮಾನದವರು. ಇವರಿಗೆ ಮೋದಿ ಪ್ರಧಾನಿಯಾದರೂ ಅಷ್ಟೇ ಆಗದಿದ್ದರೂ ಅಷ್ಟೇ. ದೇಶಭಕ್ತ, ಹಿಂದೂತ್ವವಾದಿ ಎನ್ನುವ ಕಾರಣಕ್ಕೆ ಮೋದಿ ಹಾಗೂ ಪ್ರಮೋದ ಮುತಾಲಿಕ ಅಭಿಮಾನಿಗಳು ಸೇರಿಕೊಂಡು ನಮೋ ಬ್ರಿಗೇಡ್ ಎನ್ನುವ ಸಂಘಟನೆಯ ಮೂಲಕ ಮೋದಿಯವರನ್ನು ದೇಶದ ಪ್ರಧಾನಿಯಾಗಲು ಮನಸಾರೆ ಕೆಲಸ ಮಾಡುತ್ತಿದ್ದೇವೆ. ಕೈಯಿಂದಲೇ ಹಣ ಹಾಕಿ ಪ್ರಚಾರ ಕೈಗೊಂಡಿದ್ದೇವೆ. ಹಣ ಮಾಡುವ ಜಾಯಮಾನ ನಮ್ಮದಲ್ಲ. ಮೋದಿಯವರ ರ್ಯಾಲಿಯ ಹೆಸರು ಹೇಳಿಕೊಂಡು ದುಡ್ಡು ಮಾಡುತ್ತಿರುವುದು ಬಿಜೆಪಿಗರು.
ಕೇಶವಕುಂಜಕ್ಕೆ ಎಲ್ಲಿಂದ ಬಂತು?: ಮುತಾಲಿಕರ ಬಗ್ಗೆ ಹಗುರವಾಗಿ ಮಾತನಾಡುವ ಲಿಂಗರಾಜ ಪಾಟೀಲ ತಾಕತಿದ್ದರೆ ಕೇಶವ ಕುಂಜಕ್ಕೆ ಹಣ ಎಲ್ಲಿಂದ ಬಂತು ಎಂಬುದನ್ನು ಹೇಳಲಿ ನೋಡೋಣ.
ಜನಾರ್ಧನ ರೆಡ್ಡಿಯ ಭ್ರಷ್ಟಾಚಾರದ ಹಣದಿಂದ ಕೇಶವಕುಂಜ ತಲೆ ಎತ್ತು ನಿಂತಿಲ್ಲವೇ? ಆಗೇಕೇ ಲಿಂಗರಾಜ ಪಾಟೀಲ ಬಾಯಿಮುಚ್ಚಿಕೊಂಡಿದ್ದರು? ರಸ್ತೆಯಲ್ಲಿ ನಿಂತು ದಂಧೆ ಮಾಡುವರು ಲಿಂಗರಾಜ ಪಾಟೀಲನಂಥವರು. ಇಂಥ ನಾಯಿ, ಕತ್ತೆಯ ಜಾಯಮಾನದವರು ಬೊಗಳಿದರೆ ಮುತಾಲಿಕರಂಥ ಆನೆಗೆ ಏನೇನೂ ಆಗದು ಎಂದರು.
ಕಾನೂನು ಹೋರಾಟ: ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಮುತಾಲಿಕ ಹಣ ಸಂಗ್ರಹಿಸುತ್ತಿದ್ದಾರೆಂದು ಲಿಂಗರಾಜ ಪಾಟೀಲ ನೀಡಿರುವ ಹೇಳಿಕೆಯನ್ನು ಸಾಬೀತು ಪಡಿಸಬೇಕು.
ಇಲ್ಲದೇ ಹೋದ ಪಕ್ಷದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಶ್ರೀರಾಮ ಸೇನೆಗೂ ನಮೋ ಬ್ರಿಗೇಡ್‌ಗೂ ಸಂಬಂಧವಿಲ್ಲ. ಶ್ರೀರಾಮ ಸೇನೆ ಹುಬ್ಬಳ್ಳಿಯಲ್ಲಿ ನಡೆಸುತ್ತಿರುವ ರಾಜ್ಯ ಹಿಂದೂ ಅಧಿವೇಶನಕ್ಕೆ ರು. 100 ಸಂಗ್ರಹಿಸಲಾಗಿದೆ.
ಸ್ಪಷ್ಟತೆ ಇಲ್ಲದೇ ಲಿಂಗರಾಜ ಪಾಟೀಲ ಹೊಣೆಗೇಡಿತನದ ಹೇಳಿಕೆ ನೀಡಿದ್ದು ಸರಿಯಲ್ಲ. ಪಾಟೀಲ ಕೂಡಲೇ ಕ್ಷಮೆಯಾಚಿಸದಿದ್ದರೆ ಮುತಾಲಿಕ ಅಭಿಮಾನಿಗಳು ಉಗ್ರ ಹೋರಾಟಕ್ಕೆ ಅಣಿಯಾಗಲಿದ್ದಾರೆಂದು ಪ್ರಮುಖರು ತಿಳಿಸಿದರು. ಕುಮಾರ ಹಕಾರೆ, ವಿಶುಗೌಡ ಪಾಟೀಲ ಗೋಷ್ಠಿಯಲ್ಲಿದ್ದರು.
ಮೋದಿಗೆ ಬೆಂಬಲ
ಲಿಂಗರಾಜ ಪಾಟೀಲರಂಥ ಕ್ಷುಲ್ಲಕ ವ್ಯಕ್ತಿಯ ಮಾತಿಗೆ ನಾವು ಮೋದಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಮೋದಿಯವರನ್ನು ಪ್ರಧಾನಿಯಾಗಿಸಲು ನಾವು ಅನಿವಾರ್ಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತೇವೆ. ಆದಾಗ್ಯೂ ಪಾಟೀಲ ನೀಡಿರುವ ಹೇಳಿಕೆ, ವೈಯಕ್ತಿಕವೋ, ಬಿಜೆಪಿಯದ್ದೋ ಎನ್ನುವುದು ಸ್ಪಷ್ಟವಾಗಬೇಕು.
- ಸಿದ್ದಲಿಂಗ ಸ್ವಾಮೀಜಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.