ಮೋದಿ ರ್ಯಾಲಿಯಲ್ಲಿ ನಿಶ್ಚಿಂತೆಯಿಂದ ಪಾಲ್ಗೊಳ್ಳಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 14
ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 17ರಂದು ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ರ್ಯಾಲಿಗೆ ಎಲ್ಲ ರೀತಿಯ ಮುಂಜಾಗ್ರತೆ ಕೈಗೊಂಡಿದ್ದು, ಸಾರ್ವಜನಿಕರು ಯಾವುದೇ ಭೀತಿ ಇಲ್ಲದೇ ನಿಶ್ಚಿಂತೆಯಿಂದ ಪಾಲ್ಗೊಳ್ಳಬಹುದು ಎಂದು ಬಿಜೆಪಿ ಕರೆ ನೀಡಿದೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ, ಅಂದು ಬೆಳಗ್ಗೆ 11ಕ್ಕೆ ಪ್ರಾರಂಭಗೊಳ್ಳುವ ರ್ಯಾಲಿ, ಮಧ್ಯಾಹ್ನ 2ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಎನ್ಎಸ್ಜಿ ಹಾಗೂ ಪೊಲೀಸರು ಸುರಕ್ಷತಾ ದೃಷ್ಟಿಯಿಂದ ಸೂಚಿಸಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರ್ಯಾಲಿ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಶಂಕೆ ಬೇಡ. ಸರ್ಕಾರ ಸಹ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದೆ. ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ ಎಂದರು.
ಭಾರತ ಗೆಲ್ಲಿಸಿ ರ್ಯಾಲಿಗಾಗಿ ರಾಜ್ಯದ ವಿವಿಧ ಭಾಗಗಳಿಂದ 10 ವಿಶೇಷ ರೈಲು, ಸುಮಾರು ಎರಡೂವರೆ ಸಾವಿರ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಗಳು ಮತ್ತು ಇತರ ವಾಹನಗಳು ಬೆಂಗಳೂರಿಗೆ ಹೊರಡಲಿವೆ. ಸಮಾವೇಶಕ್ಕಾಗಿ ಮೈಸೂರಿನಿಂದ ಒಂದು ಸಾವಿರ ಜನರು ಪಾದಯಾತ್ರೆಯಲ್ಲಿ ಬೆಂಗಳೂರಿಗೆ ಹೊರಟಿದ್ದು, ನ. 16ಕ್ಕೆ ಬೆಂಗಳೂರು ತಲುಪುವರು. ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುತ್ತಿದ್ದಾರೆ.
ರ್ಯಾಲಿ ಅಂಗವಾಗಿ ಇದುವರೆಗೆ 3.5 ಲಕ್ಷ ಕೂಪನ್ ಮಾರಾಟ ಮಾಡಲಾಗಿದೆ. ಇದರಿಂದ ಸಂಗ್ರಹಗೊಂಡಿರುವ ರು. 35 ಲಕ್ಷವನ್ನು ಗುಜರಾತಿನಲ್ಲಿ ನಿರ್ಮಿಸುತ್ತಿರುವ ಭಾರತದ ಐಕ್ಯತೆಯ ಪ್ರತೀಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗಾಗಿ ನೀಡಲಾಗುವುದು. ಈ ಹಣವನ್ನು ನ. 17ರಂದು ನಡೆಯಲಿರುವ ಸಮಾವೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಗುವುದು ಎಂದರು.
ಸಮಾವೇಶದಲ್ಲಿ ಭಾಗವಹಿಸಲು ಕೂಪನ್ ಕಡ್ಡಾಯವಲ್ಲ. ಕೂಪನ್ ಖರೀದಿಸದೇ ಇರುವವರು ಸಹ ಪಾಲ್ಗೊಳ್ಳಬಹುದು. ಅರಮನೆ ಮೈದಾನದ ಎಲ್ಲ ಭಾಗಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೈದಾನದ ಒಳಗೆ ಹಾಗೂ ಹೊರಗೆ ಸಾರ್ವಜನಿಕರು ಮೋದಿ ಅವರ ಭಾಷಣ ಕೇಳಲು ಅನುಕೂಲವಾಗುವುದಕ್ಕಾಗಿ ಸ್ಕ್ರೀನ್ಗಳನ್ನು ಹಾಕಲು ತೀರ್ಮಾನಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್, ವೆಂಕಯ್ಯ ನಾಯ್ಡು, ಅಶೋಕ ಗೆಲ್ಲೋಟ್, ಅನಂತಕುಮಾರ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ ಮತ್ತಿತರರು ಭಾಗವಹಿಸುವರು ಎಂದು ಜೋಶಿ ತಿಳಿಸಿದರು.
ಬಿಜೆಪಿ ಮುಖಂಡರಾದ ರಂಗಾ ಬದ್ದಿ, ದತ್ತಾ ಡೋರ್ಲೆ, ಮಹೇಶ ಟೆಂಗಿನಕಾಯಿ, ಈರೇಶ ಅಂಚಟಗೇರಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

