ಶಂಕ್ರಪ್ಪ ಅಗಡಿ ಜಿಪಂ ನೂತನ ಅಧ್ಯಕ್ಷ
ಧಾರವಾಡ: ಕಲಘಟಗಿ ತಾಲೂಕಿನ ದೇವಿಕೊಪ್ಪ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕ್ರಪ್ಪ ಅಗಡಿ ಗುರುವಾರ ಜಿಪಂನ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಗಂಗಾರಾಂ ಬಡೇರಿಯಾ ಅವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಶಂಕ್ರಪ್ಪ ಅವರೊಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಗಡಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
15 ಸದಸ್ಯರ ಬಲ ಹೊಂದಿರುವ ಬಿಜೆಪಿ ಪಕ್ಷದವರೇ ಅಧ್ಯಕ್ಷರಾಗುವುದು ನಿಶ್ಚಿತವಾಗಿತ್ತು. ಆದರೆ, ಬುಧವಾರ ವರೆಗೂ ಸದಸ್ಯರಲ್ಲಿ ಪೈಪೋಟಿ ಇತ್ತು. ಪಕ್ಷದ ಮುಖಂಡರು ಬುಧವಾರ ತಡರಾತ್ರಿ ಸದಸ್ಯರ ಮಧ್ಯೆ ಸಂಧಾನ ಏರ್ಪಡಿಸಿ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ: ಕಲಘಟಗಿ ಕ್ಷೇತ್ರವಲ್ಲದೇ ಇಡೀ ಜಿಲ್ಲೆಯ ಸಮಸ್ಯೆಗಳನ್ನು ಕ್ರೋಡೀಕರಿಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಮುಖವಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆಂದು ನೂತನ ಅಧ್ಯಕ್ಷ ಶಂಕ್ರಪ್ಪ ಅಗಡಿ ಈ ಸಂದರ್ಭದಲ್ಲಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ, ಜಿಪಂ ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಸದಸ್ಯರಾದ ಅಡಿವೆಪ್ಪ ಮನಮಿ, ವೈ.ಬಿ. ದಾಸನಕೊಪ್ಪ, ಸುರೇಶ ಗಾಣಿಗೇರ, ಮುಖಂಡರಾದ ವಿಜಯ ನಾಡಜೋಶಿ, ಈರಣ್ಣ ಜಡಿ, ಮಲ್ಲನಗೌಡ ಪಾಟೀಲ, ಈಶ್ವರ ಶಿವಳ್ಳಿ ಇದ್ದರು. ನೂತನ ಅಧ್ಯಕ್ಷರ ಆಯ್ಕೆ ಘೋಷಿಸುತ್ತಿದ್ದಂತೆ ಶಂಕ್ರಪ್ಪ ಅಗಡಿ ಬೆಂಬಲಿಗರು ಪಟಾಕಿ ಸಿಡಿಸಿ, ಹರ್ಷ ವ್ಯಕ್ತಪಡಿಸಿದರು.
ಕಲಘಟಗಿ ತಾಪಂ ಅಧ್ಯಕ್ಷ ಸ್ಥಾನ ಕೆಜೆಪಿ ಮಡಿಲಿಗೆ
ಕಲಘಟಗಿ: ಇಲ್ಲಿನ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಂ.ಎಫ್. ಜಾವೂರ ಅವಿರೋಧ ಆಯ್ಕೆಯಾದರು.
ತಾಪಂ ಸಭಾಭವನದಲ್ಲಿ ಗುರುವಾರ ಜರುಗಿದ ಅಧ್ಯಕ್ಷರ ಚುನಾವಣೆಯಲ್ಲಿ ಬೆಲವಂತರ ತಾಪಂ ಕ್ಷೇತ್ರದ ಸದಸ್ಯ ಎಂ.ಎಫ್. ಜಾವೂರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದಾಗಿ ಚುನಾವಣಾಧಿಕಾರಿಯಾಗಿ ಪಾಲ್ಗೊಂಡಿದ್ದ ಧಾರವಾಡ ಜಿಲ್ಲಾ ಉಪವಿಭಾಗಾಧಿಕಾರಿ ಮಹಾಂತೇಶ ಖರ್ಜಗಿ, ತಹಸೀಲ್ದಾರ್ ಕೆ.ಆರ್. ಕುಲಕರ್ಣಿ, ತಾಪಂ ಇಒ ಎಸ್.ಆರ್. ವೀರಕರ ಸಮ್ಮುಖ ನಡೆದ ಚುನಾವಣೆಯಲ್ಲಿ ಒಟ್ಟು 12 ಸದಸ್ಯರು ಪಾಲ್ಗೊಂಡಿದ್ದರು. ಕಳೆದ ಹಲವು ದಿನಗಳಿಂದ ಕೆಜೆಪಿ ಇಬ್ಬರು ಸದಸ್ಯರಾದ ಯಲ್ಲಾರಿ ಶಿಂಧೆ, ಎಂ.ಎಫ್. ಜಾವೂರ ಪೈಪೋಟಿ ಮಧ್ಯೆ ಇಂದು ಚುನಾವಣೆ ಮುನ್ನವೇ ಕೆಜೆಪಿ ಮುಖಂಡರು ಬೇರೊಂದು ಸ್ಥಳದಲ್ಲಿ ಚೀಟಿ ಎತ್ತುವ ಮೂಲಕ ನಿರ್ಣಯ ಕೈಗೊಂಡಿದ್ದರಿಂದ ಗೊಂದಲವಿಲ್ಲದೆ ಎಂ.ಎಫ್. ಜಾವೂರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಅವಿರೋಧ ಆಯ್ಕೆ ನಿರಿಕ್ಷೆಯಂತೆ ಮತ್ತೆ ತಾಪಂ ಅಧ್ಯಕ್ಷ ಸ್ಥಾನ ಕೆಜೆಪಿ ಮಡಿಲಿಗೆ ಸೇರಿತು. ಪೊಲೀಸ್ ಇನ್ಸ್ಸ್ಪೆಕ್ಟರ್ ಎಂ.ಐ. ನಡುವಿನಮನಿ, ಸಿಬ್ಬಂದಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

