ಧಾರವಾಡ

ಹುಬ್ಬಳ್ಳಿಗೆ ಬಂದಿಳಿದ ಉಭಯ ತಂಡಗಳು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 6
ಭಾರತ ಎ ಹಾಗೂ ವೆಸ್ಟ್ ಇಂಡೀಸ್ ಎ ತಂಡಗಳ ಮಧ್ಯೆ ಅ. 9ರಿಂದ ನಡೆಯಲಿರುವ ನಿರ್ಣಾಯಕ ಟೆಸ್ಟ್ ಪಂದ್ಯವನ್ನಾಡಲು ಉಭಯ ತಂಡಗಳ ಆಟಗಾರರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಗೆ ಬಂದಿಳಿದರು.
ಭಾರತ ತಂಡದ ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಹಾಗೂ ಗೌತಮ್ ಗಂಭೀರ ನೇರವಾಗಿ ಶಿವಮೊಗ್ಗದಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಬಂದಿಳಿದರೆ, ತಂಡದ ಇತರ ಆಟಗಾರರು ಜೋಗ್ ಫಾಲ್ಸ್‌ಗೆ ಭೇಟಿ ನೀಡಿ ವಿಶೇಷ ಬಸ್‌ನಲ್ಲಿ ಆಗಮಿಸಿದರು. ವೆಸ್ಟ್ ಇಂಡೀಸ್ ತಂಡದ ಆಟಗಾರರು ಸಕ್ರೆಬೈಲಿನ ಆನೆ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಹುಬ್ಬಳ್ಳಿಗೆ ಕಾಲಿಟ್ಟರು.
ತಿಲಕವಿಟ್ಟು ಸ್ವಾಗತ: ಎರಡೂ ತಂಡಗಳ ಆಟಗಾರರಿದ್ದ ಬಸ್‌ಗಳು ಇಲ್ಲಿಯ ಗೇಟ್‌ವೇ ಹೋಟೆಲ್‌ಗೆ ಸಂಜೆ ಸುಮಾರು 5 ಗಂಟೆಗೆ ಆಗಮಿಸಿದಾಗ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಇದಕ್ಕೂ ಮೊದಲು ಸುಮಾರು 4.20ಕ್ಕೆ ಹೋಟೆಲ್‌ಗೆ ಆಗಮಿಸಿದ ವೀರೇಂದ್ರ ಸೆಹ್ವಾಗ್, ಜಹೀರ ಖಾನ್ ಹಾಗೂ ಗೌತಮ್ ಗಂಭೀರ ಅವರಿಗೂ ತಿಲಕವಿಟ್ಟು ಸ್ವಾಗತಿಸಲಾಯಿತು. ಆಟಗಾರರಿಗೆ ಕಲ್ಲಂಗಡಿ ಜ್ಯೂಸ್ ನೀಡಲಾಯಿತು. ಭಾರತ ಎ ತಂಡದ ನಾಯಕ ಚೇತೇಶ್ವರ ಪೂಜಾರ ಅವರ ಪತ್ನಿಯೂ ಹುಬ್ಬಳ್ಳಿಯ ಗೇಟ್‌ವೇ ಹೋಟೆಲ್‌ಗೆ ಆಗಮಿಸಿದರು.
ಬೌಲಿಂಗ್‌ಗೆ ಸ್ಥಳೀಯ ಆಟಗಾರರ ಬಳಕೆ: ಅ. 7 ಹಾಗೂ 8ರಂದು ಎರಡೂ ತಂಡಗಳ ಆಟಗಾರರು ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಅಭ್ಯಾಸ ನಡೆಸಲಿದ್ದಾರೆ. 7ರ ಬೆಳಗ್ಗೆ 10 ಗಂಟೆಯಿಂದ ವೆಸ್ಟ್ ಇಂಡೀಸ್ ತಂಡದ ಆಟಗಾರರು ಹಾಗೂ ಮಧ್ಯಾಹ್ನ 2 ಗಂಟೆಯಿಂದ ಭಾರತ ತಂಡದ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ಆದರೆ, ವೆಸ್ಟ್ ಇಂಡೀಸ್ ಆಟಗಾರರು ಅಭ್ಯಾಸ ನಡೆಸುವ ಬಗ್ಗೆ ಸಂದೇಹವಿದೆ. 8ರಂದು ಬೆಳಗ್ಗೆ 10ರಿಂದ ಭಾರತ ತಂಡ ಹಾಗೂ ಮಧ್ಯಾಹ್ನ 2ರಿಂದ ವೆಸ್ಟ್ ಇಂಡೀಸ್ ಆಟಗಾರರು ಅಭ್ಯಾಸಕ್ಕಿಳಿಯಲಿದ್ದಾರೆ. ಅಭ್ಯಾಸದ ಸಂದರ್ಭ ಎರಡೂ ತಂಡಗಳ ಆಟಗಾರರಿಗೆ ನೆರವಾಗುವ ಉದ್ದೇಶದಿಂದ ಅವಳಿ ನಗರದ 30ಕ್ಕೂ ಹೆಚ್ಚು ಕ್ರಿಕೆಟ್ ಆಟಗಾರರನ್ನು ಬೌಲಿಂಗ್‌ಗೆ ಬಳಸಿಕೊಳ್ಳಲಾಗುತ್ತಿದೆ.
ಮುನ್ನಡೆ: ಈಗಾಗಲೇ 1-0 ಅಂಕದಿಂದ ಮುನ್ನಡೆ ಸಾಧಿಸಿರುವ ವೆಸ್ಟ್ ಇಂಡೀಸ್ ಎ ತಂಡ ಸರಣಿ ತನ್ನದಾಗಿಸಿಕೊಳ್ಳಬೇಕಾದರೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕು ಅಥವಾ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಶಿವಮೊಗ್ಗದಲ್ಲಿ ನಡೆದ ಸರಣಿಯ ದ್ವಿತೀಯ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರಿಂದ ಭಾರತ ಎ ತಂಡ ತನ್ನ ಮಾನ ಕಾಪಾಡಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಆಗ ಎರಡೂ ತಂಡಗಳ ಬಲ 1-1ಕ್ಕೆ ತಲುಪುತ್ತದೆ. ಈ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಲ್ಲಿ ಸಹಜವಾಗಿಯೇ ಸರಣಿ ವೆಸ್ಟ್ ಇಂಡೀಸ್ ಎ ತಂಡದ ಪಾಲಾಗುತ್ತದೆ. ಮೈಸೂರು ಹಾಗೂ ಶಿವಮೊಗ್ಗದಲ್ಲಿ ನಡೆದ ಸರಣಿಯ ಮೊದಲ ಮತ್ತು ದ್ವಿತೀಯ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ ಕಳಪೆ ಪ್ರದರ್ಶನ ತೋರಿದ್ದು, ಹುಬ್ಬಳ್ಳಿ ಮೈದಾನದಲ್ಲಾದರೂ ಉತ್ತಮ ಪ್ರದರ್ಶನ ತೋರುವರೇ ಎಂಬುದನ್ನು ಕಾದು ನೋಡಬೇಕು.

ವೆಸ್ಟ್‌ಇಂಡೀಸ್ ಎ ತಂಡ
ಕೆ.ಸಿ. ಬ್ರಾಥ್‌ವೈಟ್, ಕೆಓಎ ಪಾವೆಲ್, ಕೆ.ಎ. ಎಡ್ವರ್ಡ್ಸ್ (ನಾಯಕ), ಎನ್. ಡಿಯೋನರೈನ್, ಎ.ಬಿ. ಫುಡಾಡಿನ್, ಎಲ್.ಆರ್. ಜಾನ್ಸನ್, ಸಿಎಕೆ ವಾಲ್ಟನ್, ಎನ್.ಓ. ಮಿಲ್ಲರ್, ವಿ. ಪರ್ಮ್ಯುನ್, ಎಫ್.ಎಚ್. ಎಡ್ವರ್ಡ್ಸ್, ಎ.ಎಲ್. ಕುಮ್ಮಿನ್ಸ್.

ಭಾರತ ಎ ತಂಡ
ವಿ.ಎ. ಜಗದೀಶ, ಗೌತಮ್ ಗಂಭೀರ, ಸಿ.ಎ. ಪೂಜಾರ (ನಾಯಕ), ವೀರೇಂದ್ರ ಸೆಹ್ವಾಗ್, ಎ.ಎಂ. ನಾಯರ್, ಮೊಹಮ್ಮದ್ ಕೈಫ್, ಯು. ಕೌಲ್, ಪರ್ವೇಜ್ ರಸೂಲ್, ಬಿ.ಎ. ಭಟ್, ಜಹೀರ ಖಾನ್, ಮೊಹಮ್ಮದ್ ಶಮಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.