ರಂಗಾಯಣ ಅವಳಿ ನಗರಕ್ಕೆ ಸೀಮಿತ ಬೇಡ
ಧಾರವಾಡ: ರಂಗಾಯಣ ಸಂಚಾರಿ ರೆಪರ್ಟರಿ ಆಗಬೇಕೆನ್ನುವುದು ಬಿ.ವಿ. ಕಾರಂತರ ಕನಸು. ಈ ಹಿನ್ನೆಲೆಯಲ್ಲಿ ರಂಗಾಯಣ ಬರೀ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸದೇ ಊರೂರುಗಳಿಗೆ ಸಂಚರಿಸಿ ರಂಗ ಪ್ರದರ್ಶನ ನೀಡಲಿ ಎಂದು ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಆಶಿಸಿದರು.
ನವರಾತ್ರಿ ಯುವರಂಗೋತ್ಸವ ಅಂಗವಾಗಿ ಒಂಭತ್ತು ದಿನಗಳ ಕಾಲ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ರಂಗಾಯಣ ಏರ್ಪಡಿಸಿರುವ ನವರಾತ್ರಿ ಯುವರಂಗೋತ್ಸವದಲ್ಲಿ 'ಕೊಂದವರಾರು' ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಕಾಲಕ್ಕೆ ತಕ್ಕಂತೆ ಹೊಸ ಪ್ರಯೋಗಗಳನ್ನು ತರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ನಾಟಕಗಳನ್ನು ಇಲ್ಲಿ ಪ್ರಯೋಗಿಸಬೇಕು. ಹೊಸ ರಂಗ ಪ್ರಯೋಗಗಳ ಮೂಲಕ ಕಲಾವಿದರು ಹಾಗೂ ಪ್ರೇಕ್ಷಕರನ್ನು ರಂಗಾಯಣ ಹಿಡಿದಿಟ್ಟುಕೊಳ್ಳಬೇಕಿದೆ ಎಂದರು.
ಮ್ಯೂಸಿಯಂ ಮಾಡಲಿ: ಕಾರಂತರು ಜೀವನದುದ್ದಕ್ಕೂ ಅಡ್ಡಾಡಿ ಸಂಗ್ರಹಿಸಿರುವ ಪುಸ್ತಕ ಹಾಗೂ ಇನ್ನಿತರೆ ರಂಗ ಪರಿಕರಗಳು ನಮ್ಮಲ್ಲಿದ್ದು, ಧಾರವಾಡದ ಡಾ ಶಿರೂರ ರಂಗಮಂದಿರದಲ್ಲಿ ಅವುಗಳಿಗೆ ಮ್ಯೂಸಿಯಂ ಮಾಡಬಹುದೆ ಎಂದು ಕಾರಂತರ ಪತ್ನಿ ಪ್ರೇಮಾ ಕಾರಂತರು ದೂರವಾಣಿ ಮೂಲಕ ಕೇಳಿದ್ದರು. ಈ ಕಾರ್ಯ ಮಾಡಬೇಕು ಎನ್ನುವಷ್ಟರಲ್ಲಿ ಪ್ರೇಮಾ ಕಾರಂತರು ನಿಧನರಾದರು. ಆದ್ದರಿಂದ ಈ ರಂಗ ಪರಿಕರಗಳನ್ನು ರಂಗಾಯಣ ಪಡೆದು ಒಂದು ಮ್ಯೂಸಿಯಂ ಮಾಡುವ ಚಿಂತನೆ ಮಾಡಲಿ ಎಂದು ಶಾಂತೇಶ್ವರ ಹೇಳಿದರು.
ರಂಗ ನಿರ್ದೇಶಕ, ಪರಿಸರವಾದಿ ಮುಕುಂದ ಮೈಗೂರ ಮಾತನಾಡಿ, ಬರುವ ದಿನಗಳಲ್ಲಿ ರಂಗಭೂಮಿ ಜೀವನದ ಸಂರಕ್ಷಣೆ ಅಸ್ತ್ರವಾಗಿ ಸಿದ್ಧಗೊಳ್ಳುತ್ತಿದೆ. ರಂಗಭೂಮಿ ಕಡೆ ಒಲವಿದ್ದ ಮಕ್ಕಳ ವ್ಯಕ್ತಿತ್ವ ತಾನಾಗಿಯೇ ರೂಪಗೊಳ್ಳುತ್ತದೆ. ಪಾಲಕರು ಮಕ್ಕಳನ್ನು ರಂಗಭೂಮಿ ಕಡೆಗೆ ತಂದರೆ ಉತ್ತಮ ಭವಿಷ್ಯ ದೊರೆಯುತ್ತದೆ ಎಂದರು.
ನಿವೃತ್ತ ವಾರ್ತಾಧಿಕಾರಿ ಪಿ.ಎಸ್. ಹಿರೇಮಠ ಮಾತನಾಡಿ, ಯುವ ಜನಾಂಗದ ಪ್ರತಿಭೆ ಪ್ರದರ್ಶನಕ್ಕೆ ಯುವರಂಗೋತ್ಸವ ಒಳ್ಳೆಯ ಅವಕಾಶ ಕಲ್ಪಿಸಿದೆ. ಬರುವ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳ ಯುವಕ-ಯುವತಿಯರನ್ನು ಇಂತಹ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಂಗಾಯಣ ಪ್ರೋತ್ಸಾಹ ನೀಡಬೇಕೆಂದರು.
ರಂಗಕರ್ಮಿ ಅನಿಲ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿ ವೃತ್ತಿ ಜೊತೆಯಲ್ಲಿ ಪ್ರವೃತ್ತಿಯಾಗಬೇಕು. ಅನೇಕ ಪ್ರಕಾರದ ಸಿದ್ಧತೆ ನೀಡುವ ನಾಟಕ ಸಾಂಘಿಕ ಕಲೆಯಾಗಿ ವಿಶ್ವದಲ್ಲಿಯೇ ಪ್ರಭಾವ ಹಾಗೂ ಜನರ ಕಲೆಯಾಗಿ ಶಕ್ತಿ ನೀಡುವ ಮಾಧ್ಯಮವಾಗಿದೆ. ರಂಗಭೂಮಿಯ ಪುಣ್ಯ ಪುರುಷರ ಸ್ಮರಣೆ ಮಾಡುವ ಕೆಲಸ ರಂಗಾಯಣ ಮಾಡಬೇಕೆಂದು ಹೇಳಿದರು.
ಎಸ್.ಎಂ. ಹೂಗಾರ, ಆಡಳಿತಾಧಿಕಾರಿ ಕೆ.ಎಚ್. ಚನ್ನೂರ, ಪ್ರೇಮಾ ನಡುವಿನಮನಿ ಸಂಚಾಲಕ ಕೆ. ಜಗುಚಂದ್ರ, ಸುರೇಶ ಬೇಟಗೇರಿ ಇದ್ದರು. ನಂತರ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ ಪದವಿ ಕಾಲೇಜು ವಿದ್ಯಾರ್ಥಿನಿಯರು ಪ್ರಸನ್ನ ಹೆಗ್ಗೋಡು ಅವರು ರಚಿಸಿದ ದೀಪಾ ಕುರವತ್ತಿ ನಿರ್ದೇಶನದ 'ಕೊಂದವರಾರು' ನಾಟಕ ಪ್ರದರ್ಶನ ನಡೆಯಿತು. ಗಾಂಧೀಜಿ ಕೊಂದ ಗೋಡ್ಸೆ ಕುರಿತಾದ ಗಂಭೀರವಾದ ಈ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿತು.
ಇಂದು 'ಪುಗಳೆಂದಿ' ಪ್ರಹಸನ
ಧಾರವಾಡ: ನವರಾತ್ರಿ ಯುವರಂಗೋತ್ಸವ ಅಂಗವಾಗಿ ಅ. 9ರಂದು ಸಂಜೆ 6.30 ರಂಗಾಯಣದ ಬಯಲು ರಂಗಮಂದಿರದಲ್ಲಿ ಎಸ್. ರಾಮನಾಥ ರಚಿಸಿದ, ಭಾಸ್ಕರ ನಿರ್ದೇಶನದ 'ಪುಗಳೆಂದಿ' ಪ್ರಹಸನ ನಾಟಕವನ್ನು ಧಾರವಾಡ ಬಸವರೆಡ್ಡಿ ಪಿಯು ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸುತ್ತಾರೆ. ನಾಟಕಕಾರ ಡಾ ಡಿ.ಎಸ್. ಚೌಗಲೆ ಉದ್ಘಾಟಿಸುವರು. ಹಿರಿಯ ಸಾಹಿತಿಗಳಾದ ಡಾ ಬಾಳಣ್ಣಾ ಶೀಗಿಹಳ್ಳಿ ಅಧ್ಯಕ್ಷತೆ ವಹಿಸುವರು. ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಅನುಪಮಾ ಢವಳೆ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

