ಧಾರವಾಡ

ಸ್ವಾತಂತ್ರ್ಯ ಹೋರಾಟಗಾರ ಕಟಗಿ ನಿಧನ

Published On :

ಕುಂದಗೋಳ, ಅ. 11
ಮಾಜಿ ಸಚಿವ, ಹುಟ್ಟು ಸ್ವಾತಂತ್ರ್ಯ ಹೋರಾಟಗಾರ, ಸವಾಯಿ ಗಂಧರ್ವರ ವಿಶ್ವಸ್ಥ ಸಂಸ್ಥೆ ಚೇರಮನ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎಸ್. ಕಟಗಿಯವರು (89)ಕೆಲಕಾಲದ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತಿಮ ಸಂಸ್ಕಾರವು ಪಟ್ಟಣದ ರುದ್ರಭೂಮಿಯಲ್ಲಿ ಅ. 12ರಂದು ಬೆಳಗ್ಗೆ 11ಕ್ಕೆ ನೆರವೇರಿಸಲಾಗುವುದೆಂದು ಅವರ ಪುತ್ರ ಅರವಿಂದ ಕಟಗಿ ಕನ್ನಡಪ್ರಭಕ್ಕೆ ತಿಳಿಸಿದರು.
ಪಟ್ಟಣದ ಹೆಸರಾಂತ ಕುಟುಂಬವಾದ ಕಟಗಿಯವರ ಮನೆತನದ ಮಾದೇವಪ್ಪ ಶಿವಪ್ಪ ಕಟಗಿ ಇವರು ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳಗಾವಿಯಲ್ಲಿ ಎಲ್‌ಎಲ್‌ಬಿ ಶಿಕ್ಷಣ ಪೂರೈಸಿ, ನಂತರ ಕುಂದಗೋಳದಲ್ಲಿ ವಕೀಲ ವೃತ್ತಿ ಆರಂಭಿಸಿ ಜತೆಗೆ ಪಟ್ಟಣದ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು.
ರಾಜಕೀಯ ಜೀವನ: 1978ರಲ್ಲಿ ವಿಧಾನ ಸಭೆಗೆ ಆಯ್ಕೆಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದರು. 1985ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಹೀಗೆ ರಾಜ್ಯದ ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆಯನ್ನು ಕಟಗಿಯವರು ನೀಡಿದ್ದಾರೆ.
ಬಾಲ್ಯದಿಂದಲೇ ಸೇವಾದಳದ ಸೇವಕರಾಗಿ ತಾಲೂಕಿನ ಯುವಕರಲ್ಲಿ ಜಾಗೃತಿ ಮೂಡಿಸುತ್ತ ಅನೇಕ ಸಮಸ್ಯೆಗಳಿಗೆ ಯವಕರ ತಂಡ ರೂಪಿಸಿಕೊಂಡು ಹೋರಾಟ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪ್ರತಿಯೊಬ್ಬ ಹೋರಾಟಗಾರರು ಸರ್ಕಾರದಿಂದ ಮಾಸಾಶನ ಪಡೆಯದೆ ಮರಳಿ ಸರ್ಕಾರಕ್ಕೆ ಒಪ್ಪಿಸಿ ಎಂದು ಹೇಳಿದ್ದಲ್ಲದೆ ರಾಜ್ಯದ ಅಭಿವೃದ್ಧಿಗೆ ಈ ಹಣ ಉಪಯೋಗಿಸಲು ನೀಡಿ ತಮ್ಮ ಉದಾರತೆ ಮೆರೆದಿದ್ದಾರೆ. ಕಟಗಿ ಅವರು ಸಚಿವರಾಗಿ ತಾಲೂಕಿಗೆ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದರು. ಸವಾಯಿ ಗಂಧರ್ವರ ಪುಣ್ಯ ಸ್ಮರಣೆಯಂದು ನಡೆಯುವ ಅಹೋರಾತ್ರಿ ಸಂಗೀತ ಆಚರಣೆಗಾಗಿ ವಿಶ್ವಸ್ಥ ಸಂಸ್ಥೆಯೊಂದನ್ನು ಹುಟ್ಟುಹಾಕಿ ಬೆಳೆಸಿ, ಇದರಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಎಂ.ಎಸ್. ಕಟಗಿಯವರ ಪಾರ್ಥಿವ ಶರೀರವನ್ನು ಶುಕ್ರವಾರ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದೆ.
ಗಣ್ಯರ ಸಂತಾಪ: ಶಾಸಕರಾದ ಬಸವರಾಜ ಬೊಮ್ಮಾಯಿ, ಸಿ.ಎಸ್. ಶಿವಳ್ಳಿ, ಸಂಸದ ಪ್ರಹ್ಲಾದ ಜೋಶಿ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಎಂ.ಎಸ್. ಅಕ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ ಕುಂದೂರ, ಗಣ್ಯರಾದ ಐ.ಎಂ. ನಾವಳ್ಳಿ, ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ, ಆರ್.ಐ. ಬ್ಯಾಹಟ್ಟಿ, ಟಿ.ಎಸ್. ಗೌಡಪ್ಪನವರ, ಅಜೀಜ್ ಕ್ಯಾಲಕೊಂಡ, ವಿ.ಬಿ. ಧಾರವಾಡಶಟ್ರ, ಚಂದ್ರಶೇಖರ್ ಜುಟ್ಟಲ್, ಅಶೋಕ್ ತಿರ್ಲಾಪೂರ, ಈಶ್ವರಪ್ಪ ಗಂಗಾಯಿ, ಬಾಬಾಜಾನ ಮಿಶ್ರೀಕೋಟಿ, ಬಸವರಾಜ ಬಾಳಿಕಾಯಿ, ಲಿಂಗರಾಜ ಸಂಶಿ, ದಾನಪ್ಪ ಗಂಗಾಯಿ ಇನ್ನಿತರ ಗಣ್ಯರು ಎಂ.ಎಸ್. ಕಟಗಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.


-ಶೀಥಲ ಎಸ್. ಮುರಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.