ಐವರು ಕಳ್ಳರ ಸೆರೆ: ಚಿನ್ನಾಭರಣ ವಶ
ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ನಗರದಲ್ಲಿ ಈಚೆಗೆ ಸಂಭವಿಸಿದ ಬೈಕ್ ಮತ್ತು ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರಿಂದ ಸುಮಾರು ರು. 4.34 ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಕಲಿ ಆರ್.ಸಿ. ಬುಕ್ ಮಾಡುತ್ತಿದ್ದ ರಾಜೇಶ ಹೀರಾಚಂದ್ ಛಡ್ಡಾ ಮತ್ತು ಗದಗ ಬೇಟಗೇರಿಯ ಗಣೇಶ ಹನುಮಂತಸಾ ಪವಾರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ರು. 3.25 ಲಕ್ಷ ಮೌಲ್ಯದ ಹೀರೋ ಹೊಂಡಾ ಕಂಪನಿಯ 15 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹುಬ್ಬಳ್ಳಿ ನಗರದಲ್ಲಿ ಕಳ್ಳತನ ಮಾಡಿದ ಬೈಕ್ಗಳನ್ನು ಇವರು ಧಾರವಾಡ, ಶಿರಸಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಮ್ಮದೇ ಬೈಕ್ ಎಂದು ಮಾರಾಟ ಮಾಡುತ್ತಿದ್ದರು. ನಕಲಿ ಆರ್.ಸಿ. ಬುಕ್ ಸಿದ್ಧ ಮಾಡುತ್ತಿದ್ದ ಇವರು ತಮ್ಮ ಫೋಟೋ ಅಂಟಿಸಿ ಅಸಲಿ ಆರ್.ಸಿ. ಇದ್ದು ಇದು ನಮ್ಮದೇ ಬೈಕ್ ಎಂದು ಗ್ರಾಹಕರನ್ನು ವಂಚಿಸುತ್ತಿದ್ದರು ಎಂದರು.
ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಟ್ಲ್ಮೆಂಟ್ ಕಾಲೋನಿಯ ಗೌರವ್ವ ಫಕೀರಪ್ಪ ಕೊರವರ ಎಂಬ ಆರೋಪಿಯಿಂದ 1.95 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮನೆಗಳ್ಳತನ ಮಾಡುತ್ತಿದ್ದ ಡೋನಾಲ್ಡ್ ಅಲಿಯಾಸ್ ಪ್ಯಾಟ್ರಿಕ್ ಮೈಕೆಲ್ ಇರಕಲ್, ನಿಲ್ಟನ್ ಶ್ಯಾನ್ ಸಂತಾನ ಮತ್ತು ಮಹ್ಮದ್ ಹುಸೇನ್ ಮಹ್ಮದ್ ರಫೀಕ್ ನದಾಫ ಎಂಬ ಮೂವರು ಕಳ್ಳರನ್ನು ಬಂಧಿಸಿ 14 ಸಾವಿರ ಮೌಲ್ಯದ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಪದ್ಮನಯನ ತಿಳಿಸಿದರು.
ಶಹರ ಪೊಲೀಸ್ ಠಾಣೆ ಇನ್ಸೆಪೆಕ್ಟರ್ ಶ್ಯಾಮರಾವ ಸಜ್ಜನ, ಸಬ್ ಇನ್ಸಪೆಕ್ಟರ್ ಸುರೇಶ ಕಲಬಾವಿ, ರಾಜೇಶ ಲಮಾಣಿ ಅಪರಾಧ ವಿಭಾಗದ ಕೃಷ್ಣಾ ಕಟ್ಟಿಮನಿ, ಎಸ್.ಎಚ್. ಕಲ್ಲಾಪುರ, ಸಿ.ಎಸ್. ಪಟ್ಟಣಶೆಟ್ಟಿ ಸೇರಿದಂತೆ ಇನ್ನಿತರ ಸಿಬ್ಬಂದಿ ಆರೋಪಿ ರಾಜೇಶನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಬಹುಮಾನ: ಹುಬ್ಬಳ್ಳಿ ನಗರಕ್ಕೆ ತಲೆನೋವಾಗಿದ್ದ ಬೈಕ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಸಿಬ್ಬಂದಿ ಸೂಕ್ತ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

