ಧಾರವಾಡ

ಕೈ ಸರ್ಕಾರ ಬಡವರ ಮೂಗಿಗೆ ತುಪ್ಪಹಚ್ಚುತ್ತಿದೆ: ಬಿಎಸ್‌ವೈ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 17
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಗುರುವಾರ ಬೃಹತ್ ಜನಾಂದೋಲನಾ ರ್ಯಾಲಿ ನಡೆಸಲಾಯಿತು.
ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಹುಬ್ಬಳ್ಳಿಗೆ ಆಗಮಿಸಿದ್ದರು. ಪ್ರತಿಭಟನಾ ರ್ಯಾಲಿಯಲ್ಲಿ ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಘೋಷಣೆ ಕೂಗಲಾಯಿತು. ಸರ್ಕಾರದ ರೈತ ವಿರೋಧಿ ನೀತಿ, ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತವಿಲ್ಲದಿರುವುದು, ದೂರದೃಷ್ಟಿತ್ವವಿಲ್ಲದ ಯೋಜನೆಗಳು, ರಾಜ್ಯಪಾಲರೇ ಕಾಂಗ್ರೆಸ್ಸಿಗರನ್ನು ದೂರಿರುವುದು, ಕಾಂಗ್ರೆಸ್ ಶಾಸಕರಲ್ಲಿನ ಆಂತರಿಕ ಕಚ್ಚಾಟ, ರೈತರ ಸಾಲ ಮನ್ನಾ ಮಾಡದಿರುವ ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಲಾಯಿತು.
ಹುಬ್ಬಳ್ಳಿ ರೇಲ್ವೆ ವಿಭಾಗೀಯ ಕಚೇರಿಯಿಂದ ಆರಂಭವಾದ ರ್ಯಾಲಿ ಕೋರ್ಟ್ ವೃತ್ತ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಹಾದು ಮೂರುಸಾವಿರ ಮಠದ ಮೈದಾನದಲ್ಲಿ ಸಭೆಯಾಗಿ ಮಾರ್ಪಟ್ಟಿತು. ರ್ಯಾಲಿಯುದ್ದಕ್ಕೂ ಸಹಸ್ರಾರು ಕೆಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಹುಬ್ಬಳ್ಳಿ ರೇಲ್ವೆ ವಿಭಾಗೀಯ ಕಚೇರಿ ಎದುರು ಧರಣಿ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, ಬದಲಾವಣೆ ಬಯಸಿ ಬಹುನಿರೀಕ್ಷೆಯಿಂದ ರೈತರು, ಸಾಮಾನ್ಯ ಜನರು ಕಾಂಗ್ರೆಸ್ಸ್‌ನ್ನು ಅಧಿಕಾರಕ್ಕೆ ತಂದರು. ಆದರೆ, ಅಧಿಕಾರಕ್ಕೆ ಬಂದ ಕ್ಷಣದಲ್ಲೇ ಸರ್ಕಾರದ ಬಣ್ಣ ಬಯಲಾಯಿತು. ಬಡಬಗ್ಗರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಬಿಟ್ಟರೆ ಕಾಂಗ್ರೆಸ್ ಮತ್ತಿನ್ನೇನೂ ಮಾಡಿಲ್ಲ ಎಂದು ಹರಿಹಾಯ್ದರು.
ಮಾಜಿ ಸಚಿವ ರೇಣುಕಾಚಾರ್ಯ, ವಿಜಯ ಸಂಕೇಶ್ವರ, ರಾಜೇಂದ್ರ ಗೋಖಲೆ, ಧನಂಜಯ ಕುಮಾರ, ಶಾಸಕ ಡಾ. ವಿಶ್ವನಾಥ ಪಾಟೀಲ, ಉಮೇಶ ಬಣಕಾರ, ರುದ್ರೇಗೌಡ ಮತ್ತಿತರರು ರಾಜ್ಯ ಸರ್ಕಾರದ ನೀತಿ ಖಂಡಿಸಿದರು. ಅಶೋಕ ಕಾಟವೆ, ಎಸ್.ಐ. ಚಿಕ್ಕನಗೌಡ್ರ, ಮಾಡಾಳ ವಿರುಪಾಕ್ಷಗೌಡ, ಶರತ್ ಬಂದಾಳೆ, ಕೆ.ಎಂ. ಖಾನ್, ಕುಮಾರ ಬೊಬಾಟೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.