ಧಾರವಾಡ

ಗಾಂಧೀಜಿ ಹೆಸರಿನಿಂದ ಭ್ರಷ್ಟರಿಗೆ ಭಯ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 20
ಗಾಂಧೀಜಿ ಎಂಬ ಹೆಸರೆ ಭ್ರಷ್ಟರಿಗೆ ಭಯ ತರಿಸುತ್ತದೆ. ಆದ್ದರಿಂದ ಗಾಂಧೀಜಿ ಹೆಸರಿನಡಿ ರಾಜ್ಯದ ಜನತೆಗೆ ಪಾರದರ್ಶಕ ಆಡಳಿತ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಇಲ್ಲಿನ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಭಾನುವಾರ ನಡೆದ ನೂಲು ಉತ್ಪಾದನೆ ಘಟಕದ ನೂತನ ಸೇವಾ ಸದನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸದ್ಯ ಅನೇಕರಿಗೆ ಕಾನೂನಿನ ಹಾಗೂ ದೇವರ ಬಗ್ಗೆ ಭಯವಿಲ್ಲ. ಪಾರದರ್ಶಕ ಆಡಳಿತ ನೀಡುವ ಪ್ರತಿಜ್ಞೆ ಮಾಡಿ ಸರ್ಕಾರದಿಂದ ಪಡೆದ ಕಾಮಗಾರಿಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಇನ್ನೊಬ್ಬರಿಗೆ ನೋವುಂಟು ಮಾಡುವ ಅನೇಕ ಕೃತ್ಯಗಳನ್ನು ನಡೆಸುತ್ತಿರುವ ಇವರು ಗಾಂಧೀಜಿ ಅವರಿಗೆ ಮಾತ್ರ ಹೆದರುತ್ತಾರೆ. ಹಾಗಾಗಿ, ಗಾಂಧೀಜಿ ಹೆಸರಿನಡಿ ಆಡಳಿತ ನೀಡುವ ಉದ್ದೇಶ ನಮ್ಮದು ಎಂದರು.
ಪ್ರಸ್ತುತ ಜಾಗತೀಕರಣ ಹಾಗೂ ಮಾಧ್ಯಮಗಳ ಪ್ರಭಾವದಿಂದ ಗ್ರಾಮೀಣ ಪ್ರದೇಶದ ಜನತೆ ನಗರದತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೆ, ಅವರಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯೂ ಕಾಣುತ್ತಿದೆ. ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸಣ್ಣ ಕೈಗಾರಿಕೆಗಳು ನಶಿಸಿ ಹೋಗುತ್ತಿದ್ದು, ಅವುಗಳನ್ನು ಬೆಳೆಸುವ ಕಾರ್ಯವಾಗಬೇಕಿದೆ.
ದೇಶಿ ಸಂಸ್ಕೃತಿಯನ್ನು ಉಳಿಸಲು ದೇಶದಲ್ಲಿ ಉತ್ಪಾದನೆಗೊಳ್ಳುವ ಖಾದಿಯನ್ನು ಖರೀದಿಸಬೇಕು. ಖಾದಿ ಗ್ರಾಮೋದ್ಯೋಗ ಬೆಳೆಸುವ ಮೂಲಕ ಖಾದಿ ನೂಲುದಾರರನ್ನು ಉಳಿಸಬೇಕು ಎಂದು ಹೇಳಿದರು.
ಗಾಂಧೀಜಿ ಅವರು ಆಗಿನ ವೇಳೆಯಲ್ಲಿಯೇ ಶೌಚಾಲಯಗಳ ಬಳಕೆ ಮಾಡುವಂತೆ ಹೇಳಿದ್ದರು. ಆದರೆ, ಸದ್ಯ ಗ್ರಾಮೀಣ ಪ್ರದೇಶದಲ್ಲಿ ಶೇ. 25ರಷ್ಟು ಜನರು ಮಾತ್ರ ಶೌಚಾಲಯಗಳನ್ನು ಬಳಕೆ ಮಾಡುತ್ತಿದ್ದು, ಇನ್ನುಳಿದ ಜನರು ಬಯಲು ಶೌಚ ಅನುಸರಿಸುತ್ತಿದ್ದಾರೆ. ಸರ್ಕಾರದ ಅನುದಾನ ಪಡೆದು ಶೇ. 100ರಷ್ಟು ಶೌಚಾಲಯಗಳು ನಿರ್ಮಾಣವಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಖಾದಿ ಗ್ರಾಮೋದ್ಯೋಗದಲ್ಲಿ ಸಾಧನೆಗೈದ ಖಾದಿ ನೂಲುದಾರರನ್ನು ಸನ್ಮಾನಿಸಲಾಯಿತು. ಅಲ್ಲದೆ, ಖಾದಿ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕಾರಿಯಾದ ಗಣ್ಯರಿಗೆ ಗೌರವ ಸಲ್ಲಿಸಲಾಯಿತು.
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಎಚ್. ಹನುಮಂತಪ್ಪ ಮಾತನಾಡಿದರು.
ಕೆ.ಎಸ್. ಭಸ್ಮಿ, ಬಿ.ವಿ. ಪಾಟೀಲ, ಡಾ. ಜೆ.ಎಸ್. ಪಾಟೀಲ, ಪ್ರೊ. ಎ.ಎಸ್. ಬಸವನಾಳ, ವಿ.ವಿ. ಕಡಕೋಳ, ಎನ್.ಕೆ. ಕಾಗಿನೆಲ್ಲಿ, ಸಾಂಬ ಜೋಶಿ, ಕೃಷ್ಣಾ ಜೋಶಿ ಇದ್ದರು. ಇದಕ್ಕಿಂತ ಪೂರ್ವದಲ್ಲಿ ಗಾಂಧೀಜಿ ತತ್ವ ನಿಷ್ಠೆಗಳ ಕುರಿತು ಸ್ನೇಹ ರಂಗ ಕಲಾ ತಂಡದ ಎಸ್.ಎಂ. ಹೂಗಾರ, ಎಫ್.ಡಿ. ಕಣವಿ, ಪ್ರೇಮಾನಂದ ಶಿಂದೆ, ಬಾವಾಖಾನ, ಸುರೇಶ ಅವರು ಸಂಗೀತ ಪ್ರಸ್ತುತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.