ಕೋಟ್ಯಂತರ ರು. ನಾಮ: ವಂಚಕರಿಬ್ಬರ ಬಂಧನ
ಹುಬ್ಬಳ್ಳಿ: ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ವಂಚಿಸಿದ್ದ ಹುಬ್ಬಳ್ಳಿ ಮೂಲದ ಡಾ. ಪ್ರಭುದೇವ ತುಂಬರಗುದ್ದಿ ಮತ್ತು ರಾಜೇಂದ್ರ ತುಂಬರಗುದ್ದಿ ಅವರನ್ನು ಉಪನಗರ ಠಾಣೆ ಸಿಬ್ಬಂದಿ ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಶುಕ್ರವಾರ ನಗರಕ್ಕೆ ಕರೆತಂದಿದ್ದಾರೆ.
ಮೈಸೂರು, ಮಂಡ್ಯ, ಹಾಸನ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಯ ಯುವಕರಿಗೆ ಪಿಡಿಒ, ಪ್ರೌಢಶಾಲೆ ಶಿಕ್ಷಕ, ಕಾಲೇಜು ಉಪನ್ಯಾಸಕ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ಈ ವಂಚಕರು ಕೋಟ್ಯಂತರ ರುಪಾಯಿಗಳನ್ನು ಪಡೆದು ವಂಚಿಸಿ, ಪರಾರಿಯಾಗಿದ್ದರು. ಡಾ. ಪ್ರಭುದೇವ ತುಂಬರಗುದ್ದಿ ಮತ್ತು ರಾಜೇಂದ್ರ ತುಂಬರಗುದ್ದಿ ಅವರ ವಂಚನೆ ಕುರಿತು 'ಕನ್ನಡಪ್ರಭ' ಅ. 2ರಂದು 'ನೌಕರಿ ಹೆಸರಿನಲ್ಲಿ 20 ಕೋಟಿ ಪಂಗನಾಮ' ಎಂಬ ಶಿರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿಯನ್ನು ಆಧರಿಸಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೆ.ಜಿ. ಜಯಣ್ಣ ಅವರು ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಅವರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಉಪನಗರ ಪೊಲೀಸ್ ಠಾಣೆ ಕ್ರೈಂ ಬ್ರ್ಯಾಂಚ್ ವಿಭಾಗದ ಅಧಿಕಾರಿ ಎಸ್.ಎನ್. ರವಿಕುಮಾರ್ ಮತ್ತು ಸಚಿನ್ ಚಲವಾದಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಪುಟ್ಟಪರ್ತಿಯಲ್ಲಿ ಸಾಯಿಪ್ಲಾಜಾ ಅಪಾರ್ಟ್ಮೆಂಟ್ನಲ್ಲಿ ಕಳೆದೆರಡು ತಿಂಗಳಿನಿಂದ ವಾಸಿಸುತ್ತಿದ್ದ ಇವರಿಬ್ಬರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಜಾಮೀನು ರಹಿತ ವಾರಂಟ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜಾಪುರದ 3ನೇ ಅಧಿಕ ಜೆಎಂಎಫ್ಸಿ ನ್ಯಾಯಾಲಯ ಈ ಇಬ್ಬರು ವಂಚಕರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಬ್ಯಾಂಕ್ಗೆ ಹುಬ್ಬಳ್ಳಿಯ ವಿಳಾಸ ನೀಡಿದ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬಿಜಾಪುರ ನ್ಯಾಯಾಲಯ ಉಪನಗರ ಠಾಣೆ ಮುಖಾಂತರ ವಾರಂಟ್ ಜಾರಿ ಮಾಡಿತ್ತು. ಆದರೆ, ಬ್ಯಾಂಕ್ಗೆ ನೀಡಿರುವ ವಿಳಾಸ ಖೊಟ್ಟಿ ಇದ್ದ ಹಿನ್ನೆಲೆಯಲ್ಲಿ ಉಪನಗರ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಬಿಳಿಕೇರೆ ಮತ್ತು ಕೆ.ಆರ್.ನಗರ ಠಾಣೆಗಳಲ್ಲೂ ವಂಚನೆಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿದ್ದವು. ಜೊತೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರಿಗೆ ಹುಣಸೂರಿನ ಕೆ.ಜಿ. ಜಯಣ್ಣ ಎಂಬವರು 'ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿ ಹುಣಸೂರು ತಾಲೂಕಿನ ಅನೇಕ ಯುವಕರಿಂದ ನನ್ನ ಮೂಲಕ ಒಟ್ಟಾರೆ 39 ಲಕ್ಷ ಪಡೆದಿದ್ದಾರೆ. ಇತ್ತ ನೌಕರಿಯನ್ನೂ ಕೊಡಿಸಿದೇ, ಹಣವನ್ನೂ ಹಿಂದಿರುಗಿಸಿಲ್ಲ' ಎಂದು ದೂರು ದಾಖಲಿಸಿದ್ದರು. 'ಲಿಟಲ್ ವಂಡರ್ ಸ್ಕೂಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸ್ಮಿತಾ ಹಿರೇಮಠ ಅವರ ಕೈಯಲ್ಲಿ ರಾಜೇಂದ್ರ ತುಂಬರಗುದ್ದಿ ನಿರ್ದೇಶನದಂತೆ 12 ಲಕ್ಷ ನೀಡಿದ್ದೇನೆ' ಎಂದೂ ದೂರಿನಲ್ಲಿ ಜಯಣ್ಣ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

