ಧಾರವಾಡ

ಕಲಘಟಗಿ: ತಾಪಂ ಪ್ರಗತಿ ಪರಿಶೀಲನಾ ಸಭೆ

Published On :

ಕಲಘಟಗಿ: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ, ಮೂಲ ಸೌಲಭ್ಯಗಳ ಕುರಿತು ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಜಿಪಂ ಅಧ್ಯಕ್ಷ ಎಸ್.ಸಿ. ಅಗಡಿ ಹೇಳಿದರು.
ಅವರು ಬುಧವಾರ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ನಂತರ ತಾಪಂ ಅಧ್ಯಕ್ಷ ಎಂ.ಎಫ್. ಜಾವೂರ ಮಾತನಾಡಿದರು. ಸಮಾಜಿಕ ವಲಯ ಅರಣ್ಯಾಧಿಕಾರಿ ಆರ್.ವಿ. ಜಮಖಂಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಸಸಿಯನ್ನು ಬೆಳೆಸಿ ವಿತರಣೆ ಮಾಡಿದ್ದನ್ನು ವಿವರಿಸಿದರು. ತೋಟಗಾರಿಕಾ ಇಲಾಖೆ ಅಧಿಕಾರಿ ಎ.ಆರ್. ಹಿರೇಹಾಳ ಅವರು ಸಭೆಗೆ ಅಭಿವೃದ್ಧಿ ವರದಿಯನ್ನು ವಿವರಿಸುತ್ತಿದ್ದಂತೆ ಜಿಪಂ ಸದಸ್ಯ ಬಸವರಾಜ ಕರಡಿಕೊಪ್ಪ ಅವರು ಮಾತನಾಡಿ, ತೋಟಗಾರಿಕಾ ಇಲಾಖೆಯವರು ಕೃಷಿಕ ವರ್ಗದ ಜನರಿಗೆ ವಿವಿಧ ಯೋಜನೆಗಳ ಮಾಹಿತಿಯನ್ನು ತಲುಪಿಸುತ್ತಿಲ್ಲ. ಹೀಗಾಗಿ ಬಹುತೇಕ ಜನರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪ್ರತಿ ಗ್ರಾಪಂಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಇಲಾಖೆಯ ಯೋಜನೆಗಳ ಕುರಿತು ಜನರಿಗೆ ತಲುಪಿಸುವಂತೆ ಹೇಳಿದರು. ಜಿಪಂ ಸದಸ್ಯೆ ಕಸ್ತೂರಿ ಧಾರವಾಡ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ಪದಾಧಿಕಾರಿಗಳ ಸಭೆ
ಕಲಘಟಗಿ: ತಾಲೂಕು ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ನ. 1ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಹನ್ನೆರಡು ಮಠದಲ್ಲಿ ಜರಗಲಿದೆ.
ಸಂಸದ ಪ್ರಹ್ಲಾದ ಜೋಶಿ, ಸೋಮಣ್ಣ ಬೇವಿನಮರದ, ಕ್ರೆಡಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್, ತಾಲೂಕು ಬಿಜೆಪಿ ಅಧ್ಯಕ್ಷ ವೈ.ಎನ್. ಪಾಟೀಲ್, ಜಿಪಂ ಅಧ್ಯಕ್ಷ ಎಸ್.ಸಿ. ಅಗಡಿ, ತಾಪಂ ಅಧ್ಯಕ್ಷ ಎಂ.ಎಫ್. ಜಾವೂರ ಹಾಗೂ ಸದಸ್ಯರು ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಪಾಲ್ಗೊಳ್ಳುವರೆಂದು ಬಿಜೆಪಿ ತಾಲೂಕು ಕಾರ್ಯದರ್ಶಿ ಬಸವರಾಜ ಶೆರೆವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಬಿನ್ ಕಾಲೇಜಿಗೆ ಐದು ಪ್ರಶಸ್ತಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 30
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಜಿಲ್ಲಾ ತೋಟಗಾರಿಕೆ ಇಲಾಖೆ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಸಕ್ತ ಸಾಲಿನ ಉದ್ಯಾನ ಸ್ಪಧೆಯಲ್ಲಿ ನಗರದ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜು ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ನಗರದ ಖಾಸಗಿ ಸಂಸ್ಥೆಗಳಲ್ಲಿ ಪಿ.ಜಿ. ಜಾಬಿನ್ ಕಾಲೇಜು 'ಆವರಣದ ಮಧ್ಯಮ ಉದ್ಯಾನ'ಕ್ಕೆ ಈ ವರ್ಷವೂ ಚಾಂಪಿಯನ್‌ಶಿಪ್ ಪ್ರಶಸ್ತಿ ಲಭಿಸಿದೆ. ಖಾಸಗಿ ಸಂಸ್ಥೆ ಆವರಣದ ಡೇರೆ ತೋಟ ಸ್ಪರ್ಧೆಯಲ್ಲಿ ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಸ್ಥಾನ, ಕುಂಡಗಳ ಜೋಡಣೆಯಲ್ಲಿ ಪ್ರಥಮ, ಔಷಧೀಯ ತೋಟಕ್ಕೆ ಪ್ರಥಮ ಹಾಗೂ ಖಾಸಗಿ ಸಂಸ್ಥೆ ಆವರಣದ ಹುಲ್ಲು ಹಾಸಿಗೆಗೆ ಪ್ರಥಮ ಸ್ಥಾನ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇನ್ನೂರು ಅಲಂಕಾರಿಕ ಸಸ್ಯಗಳು, 170 ಔಷಧೀಯ ಸಸ್ಯಗಳು ಹಾಗೂ ತೆಂಗು, ಅಡಿಕೆ, ಬಾಳೆ, ಬೇವು ಮತ್ತಿತರ ವೃಕ್ಷಗಳು ಕಾಲೇಜಿನ ಆವರಣದಲ್ಲಿವೆ. ಆಸಕ್ತ ಪರಿಸರ ಪ್ರೇಮಿಗಳು ಕಾಲೇಜು ಆವರಣದಲ್ಲಿರುವ ಸಸ್ಯಗಳನ್ನು ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.
ರು. 88 ಸಾವಿರ ಮೋಸ
ಧಾರವಾಡ:  ಮೋಸ ಹೋಗುವವರು ಇರುವ ವರೆಗೂ ಮೋಸಗಾರರು ಇರುತ್ತಾರೆ ಎಂಬ ಮಾತಿಗೆ ಪುಷ್ಟಿನೀಡುವಂತೆ ಮೊಬೈಲ್‌ಗೆ ಬಂದ ಬಹುಮಾನದ ಸಂದೇಶ ನಂಬಿ ವ್ಯಕ್ತಿಯೊಬ್ಬರು ರು. 88 ಸಾವಿರ ಕಳೆದುಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ನಿಮಗೆ ಬಹುಮಾನವಾಗಿ ಟಾಟಾ ಸಫಾರಿ ಕೊಡುತ್ತಿದ್ದು, ಕೇವಲ ರು. 88 ಸಾವಿರ ತುಂಬಿ ಎಂದು ಹೇಳುವ ಮೂಲಕ ಇಲ್ಲಿನ ಬಸವೇಶ್ವರ ನಗರದ ರಾಜಕುಮಾರ ಭಜಂತ್ರಿ ಎಂಬುವರಿಗೆ ಮೋಸ ಮಾಡಲಾಗಿದೆ. ನಿಜವಾಗಿಯೂ ಟಾಟಾ ಸಫಾರಿ ಕೊಡಬಹುದು ಎಂದು ಸಂದೇಶದ ಅನ್ವಯ ದೂರವಾಣಿ ಕರೆ ಮಾಡಿ ಅವರಿಂದ ಮತ್ತಷ್ಟು ಮಾಹಿತಿ ಕೇಳಿಕೊಂಡು ಹಣವನ್ನು ಬ್ಯಾಂಕ್ ಮೂಲಕ ಭಜಂತ್ರಿ ಅವರು ಜಮೆ ಮಾಡಿದ್ದಾರೆ. ಇದಾದ ಕೆಲವು ದಿನಗಳ ನಂತರ ಕಾರಿನ ಬಗ್ಗೆ ಯಾವ ಸುದ್ದಿಯೂ ಇಲ್ಲ. ಸಂಶಯಗೊಂಡ ಭಜಂತ್ರಿ ಅವರು ದೂರವಾಣಿ ಕರೆ ಮೂಲಕ ಸಂಪರ್ಕಿಸಿದಾಗ, ಯಾವುದೇ ಉತ್ತರ ಬಂದಿಲ್ಲ. ಆಗ ಭಜಂತ್ರಿ ಅವರಿಗೆ ಮೋಸ ಹೋಗಿದ್ದು ಪಕ್ಕಾ ಆಗಿದೆ. ಈಗ ಉಪ ನಗರ ಠಾಣೆಯಲ್ಲಿ ಈ ಕುರಿತಾಗಿ ಜಮ್ಮು-ಕಾಶ್ಮೀರದ ನಿವಾಸಿಗಳಾದ ಸುರೇಶ ಚವ್ಹಾಣ, ಕಾರ್ತಿಕ, ಸತ್ಯನಾರಾಯಣಸಿಂಗ್ ಎಂಬ ಹೆಸರಿನವರ ಮೇಲೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಧಾರವಾಡ: ಇಲ್ಲಿನ ಭಾವಸಾರ ಮಂಗಲ  ಕಾರ್ಯಾಲಯಕ್ಕೆ  2013ರಿಂದ 2017ರ ವರೆಗೆ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾಸಭಾದ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಧ್ಯಕ್ಷರಾಗಿ ಟಿ.ವೈ. ಕರ್ಣಿ, ಕಾರ್ಯದರ್ಶಿಯಾಗಿ ಎಂ.ಎಂ. ದಾಮೋದರ, ಜಂಟಿ ಕಾರ್ಯದರ್ಶಿ ಪ್ರಕಾಶ ನಾಝರೆ, ಖಜಾಂಚಿ ಅಶೋಕ ಪಿಸೆ ಹಾಗೂ ಸದಸ್ಯರಾಗಿ ಕೆ.ಜಿ. ಟಿಕಾರೆ, ಎಸ್.ಬಿ. ಅಂಬೋರೆ, ಎಚ್.ಪಿ. ನವಲೆ, ಬಿ.ಜಿ. ತಿರುಮಲ್ಲೆ, ಆರ್.ಬಿ. ಧೋಂಗಡೆ, ಅಮರನಾಥ ಟಿಕಾರೆ, ಡಾ. ಸುರೇಶ ಕಪಟಕರ, ಶ್ರೀಹರಿ ಟಿಕಾರೆ, ಪ್ರಕಾಶ ಇಜಂತಕರ, ವೆಂಕಟೇಶ ಕರ್ಣಿ, ಗಣೇಶ ಮಾಂಡ್ರೆ, ಮೀನಾತಾಯಿ ಅಚಲಕರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಆರೋಗ್ಯ ತಪಾಸಣೆ
ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಎದುರಿನ ಡಮ್ಮಣಗಿ ಕಾಂಪ್ಲೆಕ್ಸ್‌ನ ಚರಕ ಆಯುರ್ವೇದ ಚಿಕಿತ್ಸಾಲಯದಲ್ಲಿ ಅ. 31ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಅಸ್ತಮಾ, ಅಲರ್ಜಿ, ಮಂಡಿನೋವು ಹಾಗೂ ಸಾರಾಯಿ ದುಶ್ಚಟ ಬಿಡಿಸುವ ಸಲುವಾಗಿ ಉಚಿತ ಚಿಕಿತ್ಸೆ ಹಾಗೂ ಔಷಧಿ ವಿತರಿಸಲಾಗುವುದು. ಮಾಹಿತಿಗೆ ಮೊ: 94481 57681 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
ಕ್ರಿಕೆಟ್ ತಂಡ ಪ್ರಕಟ
ಹುಬ್ಬಳ್ಳಿ: ಬೆಂಗಳೂರಿನಲ್ಲಿ ಆರಂಭವಾಗಿರುವ 16 ವರ್ಷದೊಳಗಿನವರ ಕೆಎಸ್‌ಸಿಎ ಅಂತರ್ ವಲಯ ಕ್ರಿಕೆಟ್ ಪಂದ್ಯಾವಳಿಗೆ ಧಾರವಾಡ ವಲಯದ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಅಕ್ಷಯ ಹಿರೇಮಠ (ನಾಯಕ), ಅನಂತ ನಾಡಿಗೇರ, ಸುಜಯ ಸಾತೇರಿ, ಸಂದೇಶ ಪುರಿ, ಆಕಾಶ ಕಾತಂಬ್ಳೆ, ಯಶ್ ಕಳಸಣ್ಣವರ, ಇಕ್ಲಾಸ್ ಮಕಾನದಾರ್, ಸಾಧಿಕ್ ನದಾಫ್, ಶುಭಂ ಗೊಂಡಕರ್, ಸಿದ್ದೇಶ ಕಾಮತ್, ಡಿಯೋನ್ ರೈಸ್, ಯಲಗೂರೇಶ ಬಾಗಲಕೋಟ, ವಸಂತ ಪಾಸುರಕರ್, ಕೌಸ್ತುಭ್ ಪಿ.ಎಲ್, ಅಭಿಷೇಕ್ ಕಾಮತ್ ತಂಡಕ್ಕೆ ಆಯ್ಕೆಯಾಗಿದ್ದಾರೆ. 15 ಕ್ರಿಕೆಟ್ ಪಟುಗಳ ನಂತರದ ಸ್ಥಾನಕ್ಕೆ ಕಾರವಾರದ ದಿನೇಶ ಸೈಯ್ಯದ್, ವಿಕಾಸ ದೊಡ್ಡಮನಿ, ಸಂತೋಷ ಸುಳಗೆ ಪಾಟೀಲ, ಸುಧನ್ವ ಕುಲಕರ್ಣಿ, ಶುಭಂ ಬಿಸನಕೊಪ್ಪ ಆಯ್ಕೆಯಾಗಿದ್ದಾರೆ ಎಂದು ಕೆಎಸ್‌ಸಿಎ ಧಾರವಾಡ ವಲಯದ ಬಾಬಾ ಬೂಸದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮೀರ ತಹಸೀಲ್ದಾರ್ ಪ್ರಥಮ
ಧಾರವಾಡ: 2013ರ ಜುಲೈನಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಇಲ್ಲಿನ ವಿಶ್ವಚೇತನ ಶಿಕ್ಷಣ ಸಂಸ್ಥೆಯಾದ ವಿಕಾಸ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯು ಶೇ.100ರಷ್ಟು ಫಲಿತಾಂಶ ಸಾಧಿಸಿದೆ. ಫಿಟ್ಟರ್ ವಿಭಾಗದಲ್ಲಿ ವಿದ್ಯಾರ್ಥಿ ಸಮೀರ ತಹಸೀಲ್ದಾರ್ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.