ಜೀವ ವಿಮಾ ನಿಗಮಕ್ಕೆ ಅಗ್ರಸ್ಥಾನ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 2
ವಿಮಾ ರಂಗದಲ್ಲಿ ಖಾಸಗಿ ಕ್ಷೇತ್ರಕ್ಕೆ ಪ್ರವೇಶ ನೀಡಿ ಭಾರತೀಯ ಜೀವ ನಿಗಮ ಅಗ್ರಸ್ಥಾನ ಉಳಿಸಿಕೊಂಡಿದ್ದು, ಸದ್ಯ ಗ್ರಾಹಕರ ವಿಶ್ವಾಸ, ಮೆಚ್ಚುಗೆ ಪಾತ್ರವಾಗಿದೆ ಎಂದು ನಿಗಮದ ವ್ಯವಸ್ಥಾಪಕ ಎಂ. ಜಗನ್ನಾಥ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾರುಕಟ್ಟೆಯಲ್ಲಿ ವಿಮಾ ಕ್ಷೇತ್ರದಲ್ಲಿ ಶೆ. 81.03 ವಿಮಾ ಪಾಲಿಸಿಗಳ ಸಂಖ್ಯೆಯಲ್ಲಿ ಹಾಗೂ ಪ್ರೀಮಿಯಂ ಆದಾಯದಲ್ಲಿ ಶೇ. 73.79ರಷ್ಟು ಪಾಲು ಹೊಂದಿದೆ. ದೇಶಾದ್ಯಂತ ಭಾರತೀಯ ಜೀವ ವಿಮಾ ನಿಗಮ ರು. 29.46 ಕೋಟಿ ಪಾಲಿಸಿಗಳನ್ನು ನೀಡಿದ್ದು ರು. 15.6 ಲಕ್ಷ ಕೋಟಿ ಆಸ್ತಿ ಹೊಂದಿದೆ. ಇಲ್ಲಿಯವರೆಗೆ 183.67 ಲಕ್ಷ ಕ್ಲೇಮುಗಳನ್ನು ಇತ್ಯರ್ಥಗೊಳಿಸಿ ರು. 74 ಸಾವಿರ ಕೋಟಿಯನ್ನು ಗ್ರಾಹಕರಿಗೆ ನೀಡಿದೆ. ಅಲ್ಲದೇ, ವಿಶ್ವದಲ್ಲೇ ಅತಿ ಕಡಿಮೆ ಇತ್ಯರ್ಥವಾಗದ ಕ್ಲೇಮುಗಳನ್ನು ಹೊಂದಿದೆ ಎಂದರು.
ಜನರ ಹಣವನ್ನು ಜನರಿಗಾಗಿ ಬಳಸುವ ಸಾಮಾಜಿಕ ತತ್ವ ಪಾಲಿಸುತ್ತಿರುವ ನಿಗಮ ಕಳೆದ ವರ್ಷ ಸರ್ಕಾರಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ರು. 921371 ಕೋಟಿ ಹಣವನ್ನು ಹೂಡಿದೆ. 12ನೇ ಪಂಚವಾರ್ಷಿಕ ಯೋಜನೆಗೆ ಜೀವ ವಿಮಾ ನಿಗಮ ರು. 1,83,988 ಕೋಟಿ ನೀಡಿದೆ. ಗ್ರಾಹಕರ ಅನುಕೂಲಕ್ಕಾಗಿ ಎಲ್ಐಸಿ ಹೊಸ ತಂತ್ರಜ್ಞಾನ ಬಳಸುತ್ತಿದ್ದು, ಗ್ರಾಹಕರು ಪ್ರೀಮಿಯಂನ್ನು ಯಾವುದೇ ಶಾಖೆಯಲ್ಲಿ ಪಾವತಿಸುವಂತೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಉತ್ತಮ ಪ್ರತಿಕ್ರಿಯೆ: ಭಾರತೀಯ ಜೀವ ವಿಮಾ ನಿಗಮದ ಕಾರ್ಯದಕ್ಷತೆ, ಸಾಧನೆಯನ್ನು ಗುರುತಿಸಿ ಹತ್ತು ಹಲವು ಪ್ರಶಸ್ತಿ ದೊರೆತಿವೆ. ಅಲ್ಲದೇ, ಪ್ರಸ್ತುತ ದೇಶದೆಲ್ಲೆಡೆ ಜೀವ ವಿಮಾ ನಿಗಮದ ಜೀವನ ಆನಂದ ವಿಮಾ ಪಾಲಿಸಿಗೆ ಹೆಚ್ಚು ಗ್ರಾಹಕರಿದ್ದಾರೆ. ಹಾಗೆಯೇ, ಉಳಿದೆಲ್ಲ ವಿಮಾ ಮತ್ತು ಪ್ರೀಮಿಯಂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಇದೆ ಎಂದರು.
ಧಾರವಾಡ ವಿಭಾಗ 15 ಶಾಖೆ, 15 ಸಂಪರ್ಕ ಶಾಖೆ, 1 ಪಿಂಚಣಿ ಮತ್ತು ಸಮೂಹ ವಿಮಾ ಶಾಖೆ ಮತ್ತು ಪ್ರತ್ಯಕ್ಷ ಮಾರುಕಟ್ಟೆ ಶಾಖೆಯನ್ನು ಹೊಂದಿದೆ. ವಿಭಾಗವು ಹಾವೇರಿ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2012-13ನೇ ಸಾಲಿನಲ್ಲಿ 3.33 ಲಕ್ಷ ಪಾಲಿಸಿಗಳನ್ನು ಮತ್ತು ರು. 195.06 ಕೋಟಿ ಪ್ರೀಮಿಯಂ ಆದಾಯ ಗಳಿಸಿದೆ. ಅಲ್ಲದೇ, ಈ ವಿಭಾಗದಲ್ಲಿ 9800 ಪ್ರತಿನಿಧಿಗಳು, 190 ಅಭಿವೃದ್ಧಿ ಅಧಿಕಾರಿಗಳು ಮತ್ತು 828 ಸಿಬ್ಬಂದಿ, 25.28ಲಕ್ಷ ಪಾಲಿಸಿದಾರರ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು. ನಿಗಮದಲ್ಲಿ ಸೆ. 1ರಿಂದ ವಿಮಾ ಸಪ್ತಾಹ ಆರಂಭವಾಗಿದೆ. ಇದರ ನಿಮಿತ್ತ ಭಾನುವಾರ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸೆ. 3ರಂದು ವಿಮಾ ಜಾಗೃತಿ ರ್ಯಾಲಿ ಕೇಂದ್ರ ಕಚೇರಿಯಿಂದ ವಿವೇಕಾನಂದ ವೃತ್ತದವರೆಗೆ ನಡೆಯಲಿದೆ. ಸೆ. 4ರಂದು ದಂತ ತಪಾಸಣೆ ಮತ್ತು ಹಿರಿಯ ನಾಗರಿಕರ ದಿನ ಆಚರಿಸಲಾಗುವುದು. ಸೆ. 5ರಂದು ಏಜೆಂಟರ ದಿನ ಆಚರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಜೆ. ಜಗದೀಶ, ವ್ಯವಸ್ಥಾಪಕರಾದ ಭೀಮಸೇನ ಕಾಗಿ, ಬಿ.ಎಸ್. ಧಾಮನ್ನವರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

